Chikkaballapur News: ದೇಹ ಸಿರಿ, ಸಂಪತ್ತು ಅನ್ನೋದು ಕಳೆದು ಹೋಗುತ್ತದೆ, ಜ್ಞಾನ ಕರಗಿ ಹೋಗುವುದಿಲ್ಲ: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ “ಮಹಾಯೋಗಿ ವೇಮನ ಜಯಂತಿ”ಯ ಕಾರ್ಯಕ್ರಮದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು
Source : Chikkaballapur Reporter
ಚಿಕ್ಕಬಳ್ಳಾಪುರ: ವೇಮನರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳಡಿಸಿಕೊಂಡರೆ ನಮ್ಮ ಬಾಳು ಬಂಗಾರವಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ “ಮಹಾಯೋಗಿ ವೇಮನ ಜಯಂತಿ”ಯ ಕಾರ್ಯಕ್ರಮದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಮಹಾಯೋಗಿ ವೇಮನ ಅವರು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ. ವೇಮನರ ತತ್ವಾದರ್ಶಗಳ ಬಗ್ಗೆ ಹೆಚ್ಚಿನ ಮಟ್ಟದ ಜಾಗೃತಿ ಜನರಲ್ಲಿ ಮೂಡಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ಜನ ಸಾಮಾನ್ಯರಿಗೆ ಮನ ಮುಟ್ಟುವಂತೆ ಜೀವನದ ಸಂದೇಶ ವನ್ನು ತಿಳಿಸಿ ಕೊಟ್ಟರೋ ಅದೇ ರೀತಿ ಮಹಯೋಗಿ ವೇಮನವರು ಪ್ರಮುಖರಾಗಿದ್ದಾರೆ.
ಜನಸಾಮಾನ್ಯರಂತೆ ಬಾಳಿ, ನೈಜ ಘಟನೆಗಳ ಬಗ್ಗೆ ಜನಪರವಾಗಿ ಧ್ವನಿ ಎತ್ತಿ ವೇಮನರು ಶ್ರೇಷ್ಠ ವ್ಯಕ್ತಿಗಳಾದರು. ತಮ್ಮ ವಚನಗಳ ಮೂಲಕ ಜಾತಿ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಪ್ರಯತ್ನಿಸಿದ ಸಮಾಜ ಸುಧಾರಕರಲ್ಲಿ ವೇಮನರು ಅಗ್ರಗಣ್ಯರು ಎಂದರೆ ತಪ್ಪಾಗಲಾರದು.
ವೇಮನ ಅವರು ಪದ್ಯದ ರೂಪದಲ್ಲಿ ಸಾಮಾಜಿಕ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ವೇಮನರು ಸೇರಿದಂತೆ ಇಂತಹ ಅನೇಕ ಮಹಾನ್ ಸಾಧಕ ವ್ಯಕ್ತಿಗಳ ಜಯಂತಿಗಳನ್ನು ಆಚರಿಸು ತ್ತಿದ್ದರೆ ಪ್ರತಿಯೊಬ್ಬರಿಗೂ ಅರಿವು ಮೂಡುವ ಪ್ರಕ್ರಿಯೆ ಮುಂದಿನ ಪೀಳಿಗೆಗಳಿಗೆ ಸಾಗುತ್ತಿರುತ್ತದೆ. ವಚನಗಳನ್ನು ಅರಿತರೆ ಸಮಾಜದಲ್ಲಿರುವ ಅಂಕುಡೊAಕುಗಳನ್ನು ತಿದ್ದಬಹುದು ಎಂದರು.
ಜನಸಾಮಾನ್ಯರಿಗೆ ಅರ್ಥವಾಗುವಂತೆ ಅರ್ಥಪೂರ್ಣವಾಗಿ ವಚನಗಳನ್ನು ಇವರು ಬರೆಯುವ ಮೂಲಕ ನಮ್ಮೆಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ದೇಹ ಸಿರಿ, ಸೌಂದರ್ಯ, ಸಂಪತ್ತು ಅನ್ನೋದು ಕಳೆದು ಹೋಗುತ್ತದೆ ಆದರೆ ಜ್ಞಾನ ಎಂಬುವುದು ಕರಗಿ ಹೋಗುವುದಿಲ್ಲ ಈ ತತ್ವವನ್ನು ಬಲವಾಗಿ ನಂಬಿದ್ದ ವೇಮನ ಅವರ ಸಂದೇಶಗಳು ಶಾಶ್ವತವಾಗಿ ಉಳಿದಿರುತ್ತವೆ ಎಂದು ತಿಳಿಸಿ, ವೇಮನ ಅವರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಳು ಮನವಿ ಮಾಡಿದರು.
ನಿವೃತ್ತ ಶಿಕ್ಷಕ ಎನ್. ರತ್ನವರ್ಮ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ಕಂಡು ಮರುಗುತ್ತಾ, ಮೊನಚು ವಚನಗಳ ಮೂಲಕ ಅಸಮಾನತೆಗಳನ್ನು, ಸಾಮಾಜಿಕ ಪಿಡುಗುಗಳನ್ನು ತಿದ್ದುವ ಪ್ರಯತ್ನವನ್ನು 15ನೇ ಶತಮಾನದಲ್ಲಿ ವೇಮನರು ಮಾಡಿ ದರು. ನಮ್ಮ ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳವರ್ ಅವರಂತೆ ತೆಲುಗಿನಲ್ಲಿ ಜನಸಾಮಾನ್ಯರ ಕವಿ ಎಂದು ಹೆಸರಾದವರು ಮಹಾಯೋಗಿ ವೇಮನರು. ಇವರು ಕಣ್ಣಿಗೆ ಕಂಡಂತಹ ಸಾಮಾಜಿಕ ಅಂಕು ಡೊಂಕುಗಳನ್ನೆಲ್ಲಾ ವಿರೋಧಿಸಿ ವಚನಗಳನ್ನಾಗಿ ರಚಿಸಿ ಹಾಡುತ್ತಾ ಜಾಗೃತಿ ಮೂಡಿಸಿ ಸಮಾಜ ಸುಧಾರಣೆಗೆ ಶ್ರಮಿಸಿದರು. ಅವರು ರಚಿಸಿರುವ ನೂರಾರು ವಚನಗಳನ್ನು ಸರ್ಕಾರ ಸಂಗ್ರಹಿಸಿ ಸಂರಕ್ಷಿಸುವ ಜೊತೆಗೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ವೇಮನರ ವಚನಗಳಲ್ಲಿ ಬಿಂಬಿತವಾಗಿದ್ದ ನೈಜತೆ, ಅಂತಃಸತ್ವಗಳಿಂದ ಸಮಾಜದಲ್ಲಿ ವ್ಯಾಪಕ ಜನ ಪ್ರೀಯತೆ ಗಳಿಸಿ ಇಂಗ್ಲಿಷ್ ಭಾಷೆಗೂ ಕೂಡ ಅವರ ವಚನಗಳು ತರ್ಜುಮೆ ಗೊಂಡಿರುವುದನ್ನು ನಾವು ಗಮನಿಸಬಹುದು. ಈ ರೀತಿ ಅವರ ವಚನಗಳು ಇತರ ಭಾಷೆಗೆ ಅನುವಾದವಾಗುವ ಮೂಲಕ ಭಾರತದಲ್ಲಷ್ಟೆ ಅಲ್ಲದೆ ವಿಶ್ವದ ಅನೇಕ ದೇಶಗಳಲ್ಲಿ ಜನಪ್ರಿಯ ವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡಲಾ ಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾ ಪಂಚಾಯತ್ ನ ಮುಖ್ಯ ಲೆಕ್ಕಾಧಿಕಾರಿ ಮುರುಗೇಶ್, ಸಮುದಾಯದ ಮುಖಂಡರಾದ ಚಿಕ್ಕ ಪಾಪಣ್ಣರೆಡ್ಡಿ, ಡಾ.ಮಧುರನಾಥರೆಡ್ಡಿ, ರವೀಂದ್ರರೆಡ್ಡಿ, ಪದ್ಮಮ್ಮ, ರಾಮಚಂದ್ರರೆಡ್ಡಿ, ಶಿವರಾಮರೆಡ್ಡಿ, ನಾಗರಾಜ್ ರೆಡ್ಡಿ, ರಾಮಸುಬ್ಬಾ ರೆಡ್ಡಿ, ನವೀನ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.