Chikkaballapur News: ಯುವಕರನ್ನು ಪ್ರೇರೇಪಿಸಲು ಸ್ವಾಮಿ ವಿವೇಕಾನಂದರ ತತ್ವಗಳು ಬಹಳ ಮುಖ್ಯ : ನ್ಯಾ.ನೇರಳೆ ವೀರಭದ್ರಯ್ಯ ಭವಾನಿ
ಸೆಂಟ್ ಜೋಸೇಫ್ ಕಾನ್ವೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ನಡೆದ “ರಾಷ್ಟ್ರೀಯ ಯುವ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
Source : Chikkaballapur Reporter
ಚಿಕ್ಕಬಳ್ಳಾಪುರ: ಸ್ವಾಮಿ ವಿವೇಕಾನಂದರು ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿರುವ ಬೋಧನೆಗಳು ಹಾಗೂ ಸಂದೇಶಗಳು ಯುವ ಸಮೂಹವನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಬಹಳ ಮುಖ್ಯವಾಗಿದ್ದು, ಸರ್ವಕಾಲಕ್ಕೂ ಪ್ರೇರಣಾದಾಯಕ ವಾಗಿವೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನೇರಳೆ ವೀರಭದ್ರಯ್ಯ ಭವಾನಿ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ. ವಕೀಲರ ಸಂಘ, ಪೋಲಿಸ್ ಇಲಾಖೆ, ಸೆಂಟ್ ಜೋಸೇಫ್ ಕಾನ್ವೆಂಟ್ ಪಿಯು ಕಾಲೇಜು ಚಿಕ್ಕಬಳ್ಳಾಪುರ ಇವರ ಸಂಯುಕ್ರಾಶ್ರಯದಲ್ಲಿ ಸೆಂಟ್ ಜೋಸೇಫ್ ಕಾನ್ವೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ನಡೆದ “ರಾಷ್ಟ್ರೀಯ ಯುವ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಏಳಿ.. ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂದು ವಿವೇಕಾನಂದರು ಯುವಜನತೆಗೆ ನೀಡಿದ ಕರೆಯು ಸರ್ವ ಕಾಲಕ್ಕೂ ನೆನೆಯುವ, ಯುವಕರನ್ನು ಒಳ್ಳೆಯ ಕೆಲಸಗಳಿಗೆ ಬಡಿದೆಚ್ಚರ ಮಾಡುವ ವಾಕ್ಯವಾಗಿದೆ.
ಇಂತಹ ಅನೇಕ ಸ್ಪೂರ್ತಿದಾಯಕ ಸಂದೇಶಗಳು ಯುವ ಜನಾಂಗದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಬೀರಿವೆ, ಅವರ ಆಧ್ಯಾತ್ಮಿಕ ಕೊಡುಗೆಗಳಿಂದ ದೇಶ ವಿದೇಶಗಳ ಸಮಾಜಗಳಲ್ಲಿ ಸದಾ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂತಹ ಮೇರು ವ್ಯಕ್ತಿತ್ವದ ವಿವೇಕರ ಅಚಾರ ವಿಚಾರಗಳನ್ನು ಇಂದಿನ ಯುವ ಸಮೂಹ ಅಳವಡಿಸಿಕೊಂಡು ಮಾದರಿ ವ್ಯಕ್ತಿತ್ವ ವನ್ನು ಬೆಳೆಸಿಕೊಳ್ಳುವ ಮೂಲಕ ದೇಶಕ್ಕೆ ಆಸ್ತಿಯಾಗಬೇಕು. ಇವರ ಆದರ್ಶಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗಳಿಗೂ ತಲುಪಿಸುವ ಕಾರ್ಯವನ್ನು ಮಾಡಬೇಕೆಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಶಿಲ್ಪ ಅವರು ಮಾತನಾಡಿ, ಪ್ರಪಂಚದ ಪ್ರಮುಖ ಧರ್ಮಗಳ ಪೈಕಿ ಹಿಂದೂ ಧರ್ಮವು ಶ್ರೇಷ್ಠ ಧರ್ಮ ಎಂಬ ಭಾವನೆಯನ್ನ ಜಗತ್ತಿಗೆ ಸಾರಿದವರು ಸ್ವಾಮಿ ವಿವೇಕಾನಂದರು. ತಮ್ಮ ಭಾಷಣಗಳ ಆರಂಭದಲ್ಲಿ ಸಹೋದರ ಸಹೋದರಿಯರೆ ಎಂದು ಸಂಬೋಧಿಸುವ ಮೂಲಕ ವಿದೇಶಿಯರನ್ನು ತಮ್ಮತ್ತ ಸೆಳೆಯುತ್ತಿದ್ದ ವಿವೇಕರು ಭಾರತ ಇತಿಹಾಸದಲ್ಲಿ ಮಾತ್ರವಲ್ಲದೇ ಪಾಶ್ಚಾತ್ಯ ರಾಷ್ಟ್ರಗಳ ಇತಿಹಾಸದಲ್ಲೂ ಸಹ ಜೀವಂತರಾಗಿದ್ದಾರೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಷ್ ಮಾತನಾಡಿ ಸ್ವಾಮಿ ವಿವೇಕಾ ನಂದರ ಚಿಂತನೆಗಳು ಯಾವಾಗಲೂ ಯುವಕರನ್ನು ಸಕಾರಾತ್ಮಕವಾಗಿ ಪ್ರೇರೇಪಿಸುತ್ತಿವೆ, ಜನತೆಗೆ ಅವರಲ್ಲಿ ಹೊಸ ಶಕ್ತಿ ಮತ್ತು ಜಾಗೃತ ಪ್ರಜ್ಞೆಯನ್ನು ನಿರಂತರವಾಗಿ ತುಂಬುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಆದ್ದರಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಭಾರತದಲ್ಲಿ ರಾಷ್ಟ್ರೀಯ ಯುವ ದಿನವಾಗಿ ಆಚರಿಸ ಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ೩ ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್. ಶ್ರೀಧರ, ಉಪ ಪೋಲಿಸ್ ವರಿಷ್ಠಾಧಿಕಾರಿ ಶಿವಕುಮಾರ್, ಸೆಂಟ್ ಜೋಸೇಫ್ ಕಾನ್ವೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜೆ. ಅಮೃತ, ವಕೀಲರ ಸಂಘ ಕಾರ್ಯದರ್ಶೀ ವೆಂಕಟೇಶ್, ಪ್ರಧಾನ ಕಾನೂನು ಅಭಿರಕ್ಷಕ ಜಿ.ಆರ್ ಹರಿಕುಮಾರ್, ಹಿರಿಯ ವಕೀಲರಾದ ಟಿ.ಎಸ್ ವಿಜಯ್ ಶಂಕರ್, ವಕೀಲರಾದ ಪಿ.ಗೌತಮ್, ಶಬ್ರೀನ್, ಸಿ.ಆರ್ ನವೀನ್ ಕುಮಾರ್. ಚಿಕ್ಕಬಳ್ಳಾಪುರ ಜಿಲ್ಲಾ ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.