ಅಭಿವೃದ್ದಿಗೆ ಸಹಕರಿಸಿ, ಎತ್ತಿ ಕಟ್ಟುವ ಆಟ ನಿಲ್ಲಿಸಿದರೆ ನಿಮಗೇ ಕ್ಷೇಮ: ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಆಕ್ರೋಶ
ಕ್ಷೇತ್ರದ ನಿವೇಶನ ರಹಿತರಿಗೆ ನಿವೇಶನಗಳನ್ನು ಒದಗಿಸಿ ಕೊಡಬೇಕೆಂಬ ದೃಡ ಸಂಕಲ್ಪ ದಿಂದ ಕಳೆದ ಆರು ತಿಂಗಳಿಂದಲೂ ನಿರಂತರವಾಗಿ ತಹಶಿಲ್ದಾರರು ಹಾಗೂ ತಾಲೂಕು ಪಂಚಾಯಿತಿ ಇಓ ಅವರೊಂದಿಗೆ ಸೇರಿ ತಾಲೂಕಿನಲ್ಲಿ ಸುಮಾರು 176 ಏಕರೆ ಸರ್ಕಾರಿ ಜಮೀನುಗಳನ್ನು ಗುರುತಿಸಿ,ಸದರಿ ಜಮೀನಿನಲ್ಲಿ ಸುಮಾರು ನಾಲ್ಕು ಸಾವಿರ ನಿವೇಶನಗಳನ್ನು ಗುರುತಿಸಿ ಹಗಲು ಇರುಳು ಕೆಲಸ ಮಾಡುತ್ತಿದ್ದೇವೆ.
ಶಿವಶಂಕರರೆಡ್ಡಿ ಅವರೇ ಅಭಿವೃದ್ದಿ ಕುರಿತು ಮಾತನಾಡದೆ ನನ್ನ ವಿರುದ್ಧ ಅಪಪ್ರಚಾರ ನಡೆಸುವ ನಿಮ್ಮ ಚಾಳಿ ಹೀಗೆಯೇ ಮುಂದುವರಿದರೆ ಕ್ಷೇತ್ರದ ಜನರೇ ನಿಮಗೆ ತಕ್ಕ ಶಾಸ್ತಿ ಮಾಡುತ್ತಾರೆ ಮರೆದಿರಿ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ತೀವ್ರ ವಾಗ್ದಾಳಿ ನಡೆಸಿದರು. -
ಗೌರಿಬಿದನೂರು: ಶಿವಶಂಕರರೆಡ್ಡಿ ಅವರೇ ಮೊದಲು ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ದಿ ಕುರಿತು ಮಾತನಾಡಿ. ಇದನ್ನು ಬಿಟ್ಟು ನನ್ನ ವಿರುದ್ಧ ಅಪಪ್ರಚಾರ ನಡೆಸುವ ನಿಮ್ಮ ಚಾಳಿ ಹೀಗೆಯೇ ಮುಂದುವರಿದರೆ ಕ್ಷೇತ್ರದ ಜನರೇ ನಿಮಗೆ ತಕ್ಕ ಶಾಸ್ತಿ ಮಾಡುತ್ತಾರೆ ಮರೆದಿರಿ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ(MLA K.H.Puttaswamy Gowda) ರು ತೀವ್ರ ವಾಗ್ದಾಳಿ ನಡೆಸಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ನಿವೇಶನ ರಹಿತರಿಗೆ ನಿವೇಶನಗಳನ್ನು ಒದಗಿಸಿ ಕೊಡಬೇಕೆಂಬ ದೃಡ ಸಂಕಲ್ಪ ದಿಂದ ಕಳೆದ ಆರು ತಿಂಗಳಿಂದಲೂ ನಿರಂತರವಾಗಿ ತಹಶಿಲ್ದಾರರು ಹಾಗೂ ತಾಲೂಕು ಪಂಚಾಯಿತಿ ಇಓ ಅವರೊಂದಿಗೆ ಸೇರಿ ತಾಲೂಕಿನಲ್ಲಿ ಸುಮಾರು 176 ಏಕರೆ ಸರ್ಕಾರಿ ಜಮೀನುಗಳನ್ನು ಗುರುತಿಸಿ,ಸದರಿ ಜಮೀನಿನಲ್ಲಿ ಸುಮಾರು ನಾಲ್ಕು ಸಾವಿರ ನಿವೇಶನ ಗಳನ್ನು ಗುರುತಿಸಿ ಹಗಲು ಇರುಳು ಕೆಲಸ ಮಾಡುತ್ತಿದ್ದೇವೆ. ಇದನ್ನು ಸಹಿಸಲಾಗದೆ ವೃಥಾ ಆರೋಪ ಮಾಡುವುದು ಸರಿಯಲ್ಲ. ನಿಮಗೆ ಅಸ್ಥಿತ್ವದ ಭಯ ಶುರುವಾಗಿದೆ ಅದಕ್ಕೆಂದೇ ಹೀಗೆ ಆರೋಪದಲ್ಲಿ ತೊಡಗಿಸಿದ್ದೀರಿ. ಎಲ್ಲವನ್ನೂ ಜನತೆ ಗಮನಿಸುತ್ತಿದ್ದಾರೆ ಎಂದು ಗುಡುಗಿದರು.
ಕ್ಷೇತ್ರದ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಿಸಬೇಕೆಂದು ನಾವುಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದ್ದರೆ, ಇದನ್ನು ಸಹಿಸಲಾಗದೆ ,ತಾಲೂಕಿ ನಲ್ಲಿ ಎಲ್ಲಿ ನನ್ನ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂಬ ಭೀತಿಯಿಂದ ಮಾಜಿ ಸಚಿವ ಶಿವಶಂಕರರೆಡ್ಡಿ ನಮ್ಮ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲಾ ಬಹಳದಿನ ನಡೆಯುವುದಿಲ್ಲ ಎಂದು ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿಗಳ ಜನಪ್ರತಿನಿಧಿಗಳು ಇಲ್ಲದೇ ಇರುವ ಸಂದರ್ಭದಲ್ಲಿ, ನಿವೇಶನ ರಹಿತರ ಆಯ್ಕೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗಬಾರದು. ಫಲಾನುಭವಿಗಳ ಆಯ್ಕೆ ಪಾರದರ್ಶಕತೆ ಹೊಂದಿರಬೇಕು. ಪಕ್ಷಾತೀತವಾಗಿ, ಧರ್ಮಾತೀತವಾಗಿ ನಿವೇಶನ ರಹಿತ ಫಲಾನುಭವಿಗಳು ಆಯ್ಕೆಯಾಗಬೇಕೆಂದು ಶಾಸಕನಾಗಿ, ಆಶ್ರಯ ಸಮಿತಿಯ ಅಧ್ಯಕ್ಷನಾಗಿ ನಾನು ಅಧಿಕಾರಿಗಳೊಂದಿಗೆ ಗ್ರಾಮಸಭೆಗಳನ್ನು ನಡೆಸಲು ಯೋಜನೆಯನ್ನು ಹಾಕಿ ಕೊಂಡರೆ, ಮಾಜಿ ಶಾಸಕರಿಗೆ ಸಹಿಸಿಕೊಳ್ಳಲಾಗದೆ ತಮ್ಮ ಹಿಂಬಾಲಕರಿಗೆ ಗಲಭೆ ಮಾಡು ವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿರುವುದು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು.
ನಿಮ್ಮ ಆಧಿಕಾರದ ಅವಧಿಯಲ್ಲಿ ತಾಲೂಕಿನಲ್ಲಿ 176 ಜನರ ಮೇಲೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟುಗಳನ್ನು ಓಪನ್ ಮಾಡಿಸಿದ್ದೀರಿ. ಸಿದ್ದೇನಹಳ್ಳಿಯ ಓಬಣ್ಣ ಎಂಬ ಅಮಾಯಕನ ಮೇಲೆ ನೀವು ಪೊಲೀಸರ ಮೇಲೆ ಒತ್ತಡ ಹೇರಿ ಒತ್ತಾಯ ಪೂರ್ವಕ ವಾಗಿ ರೌಡಿ ಶೀಟ್ ಮಾಡಿಸಿ ರಾಜಕೀಯ ದ್ವೇಷವನ್ನು ಸಾಧಿಸಿದ್ದೀರಿ.
ನೀವು ಓಪನ್ ಮಾಡಿಸಿದ ರೌಡಿ ಶೀಟರುಗಳಲ್ಲಿ 77 ಮಂದಿ ಅಮಾಯಕರು ಎಂದು ಸಾಬೀತಾಗಿ ಅವರ ವಿರುದ್ದ ಇದ್ದ ರೌಡಿ ಶೀಟುಗಳನ್ನು ಕ್ಲೋಸ್ ಮಾಡಿರುವುದೇ ನಿಮ್ಮ ಕುತಂತ್ರ ರಾಜಕೀಯಕ್ಕೆ ಸಾಕ್ಷಿಯಾಗಿದೆ ಎಂದ ಅವರು ಕಳೆದ ಮೂರು ವರ್ಷದ ನನ್ನ ಅಧಿಕಾರದ ಅವಧಿಯಲ್ಲಿ ಒಬ್ಬನೇ ಒಬ್ಬನ ಮೇಲೂ ನಾವು ರಾಜಕೀಯ ದ್ವೇಷಕ್ಕಾಗಿ ಸುಳ್ಳು ಕೇಸುಗಳನ್ನು,ರೌಡಿ ಶೀಟುಗಳನ್ನು ತೆಗೆಸುವ ಕೆಲಸ ಮಾಡಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಚಿಮೂಲ್ ನಿರ್ದೇಶಕ ಜೆ.ಕಾಂತರಾಜು ಅವರು ಮಾತನಾಡುತ್ತಾ ವಾಟದ ಹೊಸಹಳ್ಳಿ ಕೆರೆ ಕುಡಿಯುವ ನೀರಿನ ಯೋಜನೆ ವಿರುದ್ದ ಆ ಭಾಗದ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವ ಶಿವಶಂಕರರೆಡ್ಡಿ ಅವರೆ ಈ ಹಿಂದೆ ತಾವು ಮಂತ್ರಿಗಳಾಗಿದ್ದ ಸಂಧರ್ಭದಲ್ಲಿ ವಾಟದ ಹೊಸಹಳ್ಳಿ ಕೆರೆಯಿಂದ ನಗರಕ್ಕೆ ನೀರು ತರುವ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದು ಕ್ಷೇತ್ರದ ಜನತೆಗೆ ಗೊತ್ತಿದೆ. ರಾಜಕೀಯ ಲಾಭಕ್ಕಾಗಿ ಇದೀಗ ಸದರಿ ಯೋಜನೆ ವಿರುದ್ಧ ಜನರನ್ನು ರೊಚ್ಚಿಗೆಬ್ಬಿಸುವ ನಿಮ್ಮನಡೆಗೆ ಜನರೇ ನಿಮಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಚಿಕ್ಕಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟ ರಾಮರೆಡ್ಡಿ, ನಗರಸಭ ಮಾಜಿ ಸದಸ್ಯ ಅನಂತರಾಜು, ವಕೀಲ ರಂಗರಾಜು, ಆರ್.ಆರ್.ರೆಡ್ಡಿ, ಚಿಮೂಲ್ ನಿರ್ದೇಶಕಿ ಸುಧಾ, ಅಬ್ದುಲ್ಲಾ, ನಾಗಾರ್ಜುನ, ಬೀಮನಹಳ್ಳಿ ಮಂಜುನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.