Chikkaballapur News: ದಲಿತರ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಅಧಿವೇಶನ ನಡೆಸಿ ಎಂದು ಆಗ್ರಹಿಸಿ ಜುಲೈ 3ಕ್ಕೆ ದಲಿತ ಜನಾಗ್ರಹ ಸಮಾವೇಶ
1978ರಲ್ಲಿ ಸರಿ ಸುಮಾರು ಒಂದು ವರ್ಷ ಕಾಳ ನಡೆದ ಸಿದ್ಲಿಪುರ ಭೂ ಹೋರಾಟದ ಫಲವಾಗಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದು ಸಾವಿರಾರು ಎಕರೆ ಭೂಮಿ ದಲಿತರಿಗೆ ದೊರೆಯಿತು. ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹನಿಗೆ ತರುವ ಉದ್ದೇಶದಿಂದ "ಹೆಂಡ ಬೇಡ, ಶಾಲೆ ಬೇಕು" ಎಂಬ ಹೋರಾಟದಿಂದ ಸಾವಿರಾರು ವಸತಿ ಶಾಲೆಗಳು ಆರಂಭವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ
ದಲಿತರ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಅಧಿವೇಶನ ನಡೆಸಿ ಎಂದು ಸರಕಾರಕ್ಕೆ ಆಗ್ರಹಿಸಿ ಜುಲೈ ೩ಕ್ಕೆ ಬೆಂಗಳೂರಿನಲ್ಲಿ ದಲಿತ ಜನಾಗ್ರಹ ಸಮಾವೇಶ ನಡೆಯಲಿದೆ ಎಂದು ಮಾವಳ್ಳಿ ಶಂಕರ್ ಆಗ್ರಹಿಸಿದರು. -
ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಾಗಿರುವ ಎಸ್‌ಸಿಪಿ-ಟಿಎಸ್‌ಪಿ ಅನುದಾನದ ಸಮರ್ಪಕ ಬಳಕೆಗೆ ವಿಶೇಷ ನಿಯಮಾವಳಿ ರೂಪಿಸಬೇಕು. ದಲಿತ ಸಮುದಾಯಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ವಿಶೇಷ ಅಧಿವೇಶನ ನಡೆಸಬೇಕು ಎಂದು ಆಗ್ರಹಿಸಿ ಜುಲೈ 3ರಂದು ಬೆಂಗಳೂರಿನಲ್ಲಿ ದಲಿತ ಜನಾಗ್ರಹ ಸಮಾವೇಶ ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ರಾಜ್ಯ ಸಂಘಟನಾ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸಂಸಕ್ಕೆ 50 ವರ್ಷಗಳಿಗೂ ಹೆಚ್ಚಿನ ಹೋರಾಟದ ಇತಿಹಾಸವಿದ್ದು, ಅದರ ಹೋರಾಟದ ಫಲವಾಗಿ ದಲಿತರು ಮತ್ತು ಹಿಂದುಳಿದ ವರ್ಗಗಳ ಪರವಾದ ಹಲವು ಕಲ್ಯಾಣ ಯೋಜನೆಗಳು ಜಾರಿಯಾಗಿವೆ ಎಂದು ಹೇಳಿದರು.
1978ರಲ್ಲಿ ಸರಿ ಸುಮಾರು ಒಂದು ವರ್ಷ ಕಾಳ ನಡೆದ ಸಿದ್ಲಿಪುರ ಭೂ ಹೋರಾಟದ ಫಲವಾಗಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದು ಸಾವಿರಾರು ಎಕರೆ ಭೂಮಿ ದಲಿತರಿಗೆ ದೊರೆಯಿತು. ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹನಿಗೆ ತರುವ ಉದ್ದೇಶದಿಂದ "ಹೆಂಡ ಬೇಡ, ಶಾಲೆ ಬೇಕು" ಎಂಬ ಹೋರಾಟದಿಂದ ಸಾವಿರಾರು ವಸತಿ ಶಾಲೆಗಳು ಆರಂಭವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಮಾಜದ ಎಲ್ಲ ಸ್ತರಗಳಲ್ಲಿ ಹಿಂದೆ ಇದ್ದುದನ್ನು ಗಮನಿಸಿ ದಸಂಸ ಈ ವರ್ಗಗಳ ಕಲ್ಯಾಣಕ್ಕೆ ಪೂರಕವಾಗಿ ವಿಶೇಷ ನಿಯಮಾವಳಿ ತರಬೇಕು.ಅದಕ್ಕೆ ಅನುದಾನ ಮೀಸಲಿಡಬೇಕು ಎಂದು 15 ವರ್ಷಗಳ ಹೋರಾಟ ಮಾಡಿದ್ದರ ಫಲವಾಗಿ 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್.ಸಿ.ಪಿ ಟಿ .ಎಸ್. ಟಿ.ಕಾಯ್ದೆ ಜಾರಿ ಮಾಡಿದರು ಎಂದರು.
2014ರಿಂದ 2026ರ ರವರೆಗೆ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ.ಮೂಲಕ ಈ ಸಮುದಾಯಗಳಿಗೆ ಸುಮಾರು 4 ಲಕ್ಷ ಕೋಟಿಯಷ್ಟು ಅನುದಾನ ಬಳಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇಷ್ಟು ಅನುದಾನ ಬಳಸಿಕೊಂಡಿದ್ದಲ್ಲಿ ಈ ಸಮುದಾಯಗಳಲ್ಲಿ ಆಗಿರುವ ಪುರೋಭಿವೃದ್ದಿ ಅಥವಾ ಸಮಾಜದ ಮುಖ್ಯ ವಾಹಿನಿಗೆ ತಂದಿರುವ ಬಗ್ಗೆ ನಿಖರ ಮಾಹಿತಿ ಕೊಡಿ ಎಂದರೆ ಈ ಸರ್ಕಾರದ ಬಳಿ ಉತ್ತರವಿಲ್ಲ.
ಹಾಗಾದರೆ ಆ ಹಣ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದ ಅವರು ಇವೊತ್ತಿಗೂ ಭೂ ಒಡೆತನ ಯೋಜನೆಯಿಂದ ನಿರ್ಗತಿಕರಿಗೆ ಒಂದು ಎಕರೆ ಭೂಮಿ ಕೊಡಲಾಗುತ್ತಿಲ್ಲ. ಮೂರು ನಾಲ್ಕು ವರ್ಷಗಳ ಹಿಂದೆ ಕೊರೆಸಿದ ಗಂಗಾ ಕಲ್ಯಾಣ ಯೋಜನೆಯ ಕೊಳವೆಬಾವಿಗೆ ವಿದ್ಯುತ್ ಕೊಟ್ಟಿಲ್ಲ. ಕೆಲವರಿಗೆ ಬೋರೇ ಕೊರೆಸಿಲ್ಲ.ಹಾಗಾದರೆ ಸರ್ಕಾರ ಕೊಡುವ ಜಾಹಿರಾತುಗಳಲ್ಲಿ ಮಾತ್ರ ಈ ವರ್ಗಗಳ ಅಭಿವೃದ್ಧಿ ಆಗಿರಬೇಕೇ ವಿನಃ ವಾಸ್ತವದಲ್ಲಿ ಏನೇನೂ ಬದಲಾವಣೆ ಆಗಿಲ್ಲ ಎಂದು ದೂರಿದರು.
ಜಾಹೀರಾತುಗಳಲ್ಲಿ ತೋರಿಸುವ ಲಕ್ಷ ಕೋಟಿ ಹಣವು ದಲಿತರಿಗೆ ಸೇರಿಯೇ ಬಿಟ್ಟಿದೆ ಎಂಬಂತೆ ಸಮಾಜದ ಇತರ ಸಮುದಾಯಗಳಲ್ಲಿ ಅಸಹನೆ ಉಂಟಾಗುವಂತೆ ಮಾಡಿದೆ. ಹೀಗೆ ಕೊಟ್ಟ ಹಣ ನೈಜ ಫಲಾನುಭವಿಗಳಿಗೆ ಸೇರದೆ ಮಧ್ಯವರ್ತಿಗಳ, ರಾಜಕಾರಣಿಗಳ, ಅಧಿಕಾರಿಗಳ ಪಾಲಾಗುತ್ತಿದೆ. ಬಡತನ ಇನ್ನೂ ಬಿಗಡಾಯಿಸುತ್ತಿದೆ ಎಂದರು.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚಳಕ್ಕೆ ತಕ್ಕಂತೆ ಪೂರಕ ವಾತಾವರಣ ಮೂಲಭೂತ ಸೌಕರ್ಯಗಳ ಒದಗಿಸುವಿಕೆ ಕೊರತೆಯಿದೆ. ವಿದ್ಯಾರ್ಥಿ ವೇತನ ಹೆಚ್ಚಳವಾಗುತ್ತಿಲ್ಲ. ಅನೇಕ ಸಮಸ್ಯೆಗಳಲ್ಲಿ ಈ ಸಮುದಾಯಗಳು ಸಿಕ್ಕಿಹಾಕಿಕೊಂಡಿವೆ. ಸರ್ಕಾರಗಳಿಗೆ ಮನವಿ ಕೊಟ್ಟರು ಸಹ ಗಂಭೀರವಾಗಿ ಅವು ತೀರ್ಮಾನ ಮಾಡುತ್ತಿಲ್ಲ. ಬಜೆಟ್ ಮೀಟಿಂಗ್ ಕರೆಯುತ್ತಾರೆ, ಅದು ಸಂತೆ ಯಾಗಿ ಮಾರ್ಪಡುತ್ತದೆ. ಅಲ್ಲಿ ಯಾವ ತೀರ್ಮಾನಗಳು ಆಗುವುದಿಲ್ಲ.
ಮೇಲಾಗಿ ಎಸ್ .ಸಿ .ಪಿ, ಟಿ.ಎಸ್.ಪಿ, ಅನುದಾನ ಬೇಕಾಬಿಟ್ಟಿ ಬಳಕೆಯಾಗುವುದನ್ನು ತಡೆಯಲು ವಿಶೇಷ ನಿಯಮಾವಳಿ ರೂಪಿಸಬೇಕು. ಸುಮಾರು 34, 35 ಇಲಾಖೆಗಳಿಗೆ ಈ ಹಣ ಹರಿದು ಹಂಚು ಹೋಗುತ್ತಿದೆ. ಯಾವ ಇಲಾಖೆಯ ಮೇಲೂ ಯಾರಿಗೂ ಹಿಡಿತವಿಲ್ಲದಂತಾಗಿದೆ. ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಕೊಡುತ್ತಿರುವ ಅನುದಾನ ಯಾವುದಕ್ಕೂ ಸಾಲದು. ಜಾತಿಗೊಂದು ನಿಗಮ ಮಂಡಳಿ ಸ್ಥಾಪಿಸುವ ಮೂಲಕ ಒಗ್ಗಟ್ಟನ್ನು ಒಡೆಯುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾ ಗಿದೆ ಇದು ತಪ್ಪಬೇಕು ಎಂದು ಆಗ್ರಹಿಸಿದರು.
101 ಪರಿಶಿಷ್ಟ ಜಾತಿ ಮತ್ತು 51 ಪಂಗಡಗಳ 2 ಕೋಟಿಗೂ ಹೆಚ್ಚು ಜನ ಸಮಸ್ಯೆಗಳಲ್ಲಿ ನರಳು ತ್ತಿದ್ದಾರೆ. ಇದರ ಪರಿಹಾರಕ್ಕಾಗಿ ಸರ್ಕಾರ ವಿಶೇಷ ಸಚಿವ ಸಂಪುಟ ಸಭೆ ಹಾಗೂ ವಿಶೇಷ ಅಧಿವೇಶನ ಕರೆದು ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ಪರಿಹಾರದ ಮಾರ್ಗ ತೋರಿಸಬೇಕು. ಇದಕ್ಕಾಗಿಯೆ ಜುಲೈ 3ರಂದು 19 ಸಮಸ್ಯೆಗಳನ್ನು ಮುಂದಿಟ್ಟುಕೊಂಡು ದಲಿತ ಜನಾಗ್ರಹ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು.ಇದು ಯಾವುದೋ ಎರಡು ಪಂಗಡಗಳ ಹೋರಾಟವಲ್ಲ. ಬದಲಿಗೆ ಪರಿಶಿಷ್ಟ ಜಾತಿಯ 101 ಜಾತಿಗಳು, ಪರಿಶಿಷ್ಟ ಪಂಗಡದ 51 ಜಾತಿಗಳ ಧ್ವನಿಯಾಗಿ ದಸಂಸ ಹೋರಾಟವನ್ನು ಕೈಗೆತ್ತಿಕೊಂಡಿದೆ ಎಂದರು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಹಿರಿಯ ಮುಖಂಡರಾದ ಸುಧಾ ವೆಂಕಟೇಶ್, ಗ.ನ ಅಶ್ವತ್ಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.