ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂದು ‘ಶಾಂತಿ ಕ್ರಾಂತಿ’ ಜೊತೆಜೊತೆಗೆ ರವಿಚಂದ್ರನ್ ಮಾಡಿದ ಸಿನಿಮಾಗಳೆಷ್ಟು? ಇಂದಿನ ಪೀಳಿಗೆಗೆ ಇದು ನಿಜಕ್ಕೂ ಸ್ಫೂರ್ತಿ!

'ಕ್ರೇಜಿ ಸ್ಟಾರ್' ರವಿಚಂದ್ರನ್ ನಿರ್ಮಿಸಿ, ನಿರ್ದೇಶಿಸಿದ್ದ ‘ಶಾಂತಿ ಕ್ರಾಂತಿ’ ಚಿತ್ರದ ಮೇಕಿಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಮೂರು ವರ್ಷಗಳ ಕಾಲ ನಾಲ್ಕು ಭಾಷೆಗಳಲ್ಲಿ ರಜನಿಕಾಂತ್ ಹಾಗೂ ನಾಗಾರ್ಜುನ ಅವರೊಂದಿಗೆ ಬೃಹತ್ ಪ್ರಾಜೆಕ್ಟ್ ಮಾಡುತ್ತಲೇ, ರವಿಚಂದ್ರನ್ ಪ್ಯಾರಲಲ್ ಆಗಿಯೂ ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು.

ಅಂದು ‘ಶಾಂತಿ ಕ್ರಾಂತಿ’ ಜೊತೆಜೊತೆಗೆ ರವಿಚಂದ್ರನ್ ಮಾಡಿದ ಸಿನಿಮಾಗಳೆಷ್ಟು?

-

Avinash GR
Avinash GR Aug 11, 2026 4:39 PM

‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅಭಿನಯಿಸಿ, ನಿರ್ದೇಶಿಸಿದ್ದ ‘ಶಾಂತಿ ಕ್ರಾಂತಿ’ ಸಿನಿಮಾವು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಈ ಚಿತ್ರದ ಮೇಕಿಂಗ್ ಕುರಿತ ವಿಚಾರಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಅಂದು ಈ ಸಿನಿಮಾಕ್ಕಾಗಿ ರವಿಚಂದ್ರನ್ ಅವರು ತನು-ಮನ-ಧನವನ್ನು ವಿನಿಯೋಗಿಸಿ ಕೆಲಸ ಮಾಡಿದ್ದರು. ಆದರೆ, ವಿಶೇಷ ಏನೆಂದರೆ, ‘ಶಾಂತಿ ಕ್ರಾಂತಿ’ಯಂತಹ ಬೃಹತ್ ಸಿನಿಮಾ ಕೈಯಲ್ಲಿದ್ದರೂ ರವಿಚಂದ್ರನ್ ಅದೊಂದರ ಮೇಲೆಯೇ ಗಮನ ನೆಟ್ಟು ಸುಮ್ಮನೆ ಕುಳಿತುಕೊಳ್ಳಲಿಲ್ಲ!

ಪ್ಯಾರಲಲ್ ಆಗಿ ಬೇರೆ ಬೇರೆ ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದ ರವಿ

ಇತ್ತೀಚಿನ ದಿನಗಳಲ್ಲಿ ಒಂದು ಪ್ಯಾನ್ ಇಂಡಿಯಾ ಸಿನಿಮಾವನ್ನು ಕೈಗೆತ್ತಿಕೊಂಡರೆ ಸಾಕು, ಮೂರ್ನಾಲ್ಕು ವರ್ಷಗಳ ಕಾಲ ಆ ಸಿನಿಮಾದ ನಿರ್ದೇಶಕ ಹಾಗೂ ಹೀರೋ ಬೇರೇನನ್ನೂ ಯೋಚಿಸುವುದಿಲ್ಲ. ಬರೀ ಅದೊಂದೇ ಸಿನಿಮಾದಲ್ಲಿ ಮುಳುಗಿಹೋಗುತ್ತಾರೆ. ಆದರೆ ಅಂದೇ ‘ಶಾಂತಿ ಕ್ರಾಂತಿ’ಯಂತಹ ಅಸಲಿ ಪ್ಯಾನ್ ಇಂಡಿಯಾ ಸಿನಿಮಾವನ್ನು ಕೈಗೆತ್ತಿಕೊಂಡಿದ್ದ ರವಿಚಂದ್ರನ್, ಅದರ ಜೊತೆಜೊತೆಗೆ ಬೇರೆ ಸಿನಿಮಾಗಳನ್ನೂ ಮಾಡುತ್ತಾ ಹಿಟ್ ಮೇಲೆ ಹಿಟ್ ನೀಡಿದ್ದರು.

‘ಶಾಂತಿ ಕ್ರಾಂತಿ’ಗಾಗಿ ಮೂರು ವರ್ಷ!

1988ರ ನವೆಂಬರ್ 14ರಂದು ‘ಶಾಂತಿ ಕ್ರಾಂತಿ’ ಸಿನಿಮಾ ಆರಂಭವಾಗಿತ್ತು. ನಾಲ್ಕು ಭಾಷೆಗಳಲ್ಲಿ, ಮೂವರು ದೈತ್ಯ ಸ್ಟಾರ್‌ಗಳ ನಾಯಕತ್ವದಲ್ಲಿ ಮೂಡಿಬಂದ ಈ ಸಿನಿಮಾ ಮುಗಿದು ರಿಲೀಸ್ ಆಗುವ ಹೊತ್ತಿಗೆ ಬರೋಬ್ಬರಿ 3 ವರ್ಷಗಳು ಕಳೆದಿದ್ದವು. 1991ರ ಸೆಪ್ಟೆಂಬರ್ 19ರಂದು ಈ ಸಿನಿಮಾ ತೆರೆಕಂಡಿತು. ಅಸಲಿಗೆ, ಈ ಚಿತ್ರ ತಡವಾಗಿದ್ದಕ್ಕೆ ಆರ್ಥಿಕ ಮುಗ್ಗಟ್ಟು ಮಾತ್ರವಲ್ಲದೆ, ವಿವಿಧ ಭಾಷೆಯ ಘಟಾನುಘಟಿ ಕಲಾವಿದರ ಕಾಲ್‌ಶೀಟ್ ಹೊಂದಿಸುವುದು ಸಹ ದೊಡ್ಡ ಸವಾಲಾಗಿತ್ತು. ಒಂದು ಸೀನ್ ಶೂಟ್ ಆಗಬೇಕಾದರೂ ಸೆಟ್‌ನಲ್ಲಿ ರವಿಚಂದ್ರನ್, ರಜನಿಕಾಂತ್, ನಾಗಾರ್ಜುನ, ಜೂಹಿ ಚಾವ್ಲಾ ಹಾಗೂ ರಮೇಶ್ ಅರವಿಂದ್ ಉಪಸ್ಥಿತರಿರಬೇಕಾಗಿತ್ತು.

ಆ ಮೂರು ವರ್ಷಗಳ ಗ್ಯಾಪ್‌ನಲ್ಲಿ ರವಿಚಂದ್ರನ್ ಏನೆಲ್ಲಾ ಮಾಡಿದ್ರು?

1988ರಲ್ಲಿ ‘ಶಾಂತಿ ಕ್ರಾಂತಿ’ ಆರಂಭವಾದಾಗ, ಅದರ ಜೊತೆಜೊತೆಗೆ ಬೇರೆ ನಿರ್ದೇಶಕರ ಸಿನಿಮಾಗಳಲ್ಲೂ ರವಿ ನಟಿಸುತ್ತಿದ್ದರು. ಅದರ ಪರಿಣಾಮವಾಗಿ 1989ರಲ್ಲಿ ‘ಯುಗಪುರುಷ’ ಮತ್ತು ‘ಯುದ್ಧಕಾಂಡ’ದಂತಹ ಸೂಪರ್ ಹಿಟ್ ಸಿನಿಮಾಗಳು ಹೊರಬಂದವು. ಅದೇ ವರ್ಷ ‘ಕಿಂದರಿ ಜೋಗಿ’ ಎಂಬ ಮತ್ತೊಂದು ಸಾಹಸಕ್ಕೆ ಕೈಹಾಕಿ ನಿರ್ಮಾಣ ಮಾಡಿದ್ದಲ್ಲದೆ, ರೇಣುಕಾ ಶರ್ಮಾ ಜೊತೆ ನಿರ್ದೇಶನದಲ್ಲೂ ಭಾಗಿಯಾದರು. 'ಪೋಲಿ ಹುಡುಗ' ಚಿತ್ರವೂ 1989ರಲ್ಲೇ ಬಿಡುಗಡೆಯಾಯಿತು. ಇನ್ನು 1990ರಲ್ಲಿ ‘ಬಣ್ಣದ ಗೆಜ್ಜೆ’ ಹಾಗೂ ‘ಅಭಿಮನ್ಯು’ ಸಿನಿಮಾಗಳಲ್ಲಿ ನಟಿಸಿದರು.

Shanti Kranti: ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಶಾಂತಿ ಕ್ರಾಂತಿ' ಬಾಕ್ಸ್ ಆಫೀಸ್ ಅಲ್ಲಿ ಸೋತಿದ್ದೇಕೆ..?

1991ರ ಹೊತ್ತಿಗೆ ತೀವ್ರ ಹಣಕಾಸಿನ ಅಭಾವ ಎದುರಾದಾಗ, ತಮಿಳಿನ ‘ಚಿನ್ನ ತಂಬಿ’ ಸಿನಿಮಾದ ರಿಮೇಕ್ ಹಕ್ಕನ್ನು ತಂದು ಕನ್ನಡದಲ್ಲಿ ‘ರಾಮಾಚಾರಿ’ ಹೆಸರಿನಲ್ಲಿ ಮರುಸೃಷ್ಟಿಸಿದರು. ಅತಿ ಕಡಿಮೆ ಅವಧಿಯಲ್ಲಿ ಶೂಟಿಂಗ್ ಮುಗಿಸಿ, ಅದನ್ನು 'ಶಾಂತಿ ಕ್ರಾಂತಿ'ಗಿಂತ ಮುಂಚೆಯೇ ರಿಲೀಸ್ ಮಾಡಿದರು. ಅದರ ವಿತರಣಾ ಹಕ್ಕುಗಳಿಂದ ಬಂದ ದೊಡ್ಡ ಮೊತ್ತವನ್ನು ತಂದು ಮತ್ತೆ ‘ಶಾಂತಿ ಕ್ರಾಂತಿ’ಗೆ ಹೂಡಿಕೆ ಮಾಡಿದರು. 1991ರ ಜುಲೈ 19ರಂದು ತೆರೆಕಂಡ ‘ರಾಮಾಚಾರಿ’ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ನಂತರ ಎರಡೇ ತಿಂಗಳಿಗೆ (1991ರ ಸೆಪ್ಟೆಂಬರ್ 19) ‘ಶಾಂತಿ ಕ್ರಾಂತಿ’ ಬಿಡುಗಡೆಯಾಯಿತಾದರೂ, ಅಂದುಕೊಂಡ ಮಟ್ಟದ ಯಶಸ್ಸು ಸಿಗಲಿಲ್ಲ ಎನ್ನುವುದು ಬೇಸರದ ಸಂಗತಿ.

‘ಶಾಂತಿ ಕ್ರಾಂತಿ ಸಿನಿಮಾವನ್ನು ರೀ-ರಿಲೀಸ್ ಮಾಡ್ತೀವಿ' ಎಂದ ವಿಕ್ರಮ್‌ ರವಿಚಂದ್ರನ್; ಆದರೆ, ಇದರ ಹಿಂದಿರುವ ಸವಾಲುಗಳೇನು?

ಇಂದಿನ ಪೀಳಿಗೆಗೆ ಮಾದರಿ

‘ಶಾಂತಿ ಕ್ರಾಂತಿ’ಯಂತಹ ದೈತ್ಯ ಪ್ರಾಜೆಕ್ಟ್ ಮಾಡುತ್ತಿದ್ದ ಸಮಯದಲ್ಲಿಯೇ ರವಿಚಂದ್ರನ್ ಒಟ್ಟು 7 ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲಿ 2 ಸಿನಿಮಾಗಳನ್ನು ಸ್ವತಃ ನಿರ್ಮಿಸಿ, ಒಂದಕ್ಕೆ ನಿರ್ದೇಶನವನ್ನೂ ಮಾಡಿದ್ದರು. ಇಂದು ಒಂದೊಂದು ಸಿನಿಮಾಗೆ ಎರಡ್ಮೂರು ವರ್ಷ ಸಮಯ ತೆಗೆದುಕೊಳ್ಳುವ ನಿರ್ದೇಶಕರು ಹಾಗೂ ನಟರು ರವಿಚಂದ್ರನ್ ಅವರ ಈ ಕಾರ್ಯಕ್ಷಮತೆ ಮತ್ತು ಶ್ರಮವನ್ನು ನೋಡಿ ಕಲಿಯುವುದು, ಸ್ಪೂರ್ತಿ ಪಡೆಯುವುದು ಸಾಕಷ್ಟಿದೆ!