ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ದೊರಣಾಲಪಲ್ಲಿ ಗ್ರಾಮಕ್ಕೆ ಭೇಟಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದಿಸಿದ ಬೀರಪ್ಪ ಅವರು, ತಮ್ಮ ಪ್ರಸ್ತುತ ಚಾಲ್ತಿಯಲ್ಲಿರುವ ಕೊಳವೆಬಾವಿಯಿಂದ ಗ್ರಾಮದ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಪೂರೈಸಲು ಒಪ್ಪಿಗೆ ನೀಡಿದರು. ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಸಹಕರಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದರು.

ದೊರಣಾಲಪಲ್ಲಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಭೇಟಿ

-

Profile
Ashok Nayak Sep 21, 2026 6:42 PM

ಚಿಕ್ಕಬಳ್ಳಾಪುರ : ಬಾಗೇಪಲ್ಲಿ ತಾಲ್ಲೂಕಿನ ದೊರಣಾಲಪಲ್ಲಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಅವರು ಭೇಟಿ ನೀಡಿ, ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಖುದ್ದಾಗಿ ಪರಿಶೀಲಿಸಿ, ತಕ್ಷಣ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮದಲ್ಲಿ ಪ್ರಸ್ತುತ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ನೀರಿನ ಲಭ್ಯತೆ ಹಾಗೂ ಪೂರೈಕೆ ವ್ಯವಸ್ಥೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. 

ಈ ಸಂದರ್ಭದಲ್ಲಿ ಗ್ರಾಮದ ಸಮೀಪದಲ್ಲಿರುವ ಖಾಸಗಿ ಕೊಳವೆಬಾವಿ ಮಾಲೀಕ ಬೀರಪ್ಪ ಅವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.60ರಷ್ಟು ಮಳೆಯ ತೀವ್ರ ಕೊರತೆಯಾಗಿರುವುದರಿಂದ ಜಿಲ್ಲೆಯಾದ್ಯಂತ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಇದನ್ನೂ ಓದಿ: Chikkaballapur News: ಚೇಳೂರಿನಲ್ಲಿ ಸಿವಿಲ್ ಹಾಗೂ ಜೆಎಂಎಫ್‌ಸಿ ಇಟಿನೇರರಿ ನ್ಯಾಯಾಲಯ ಉದ್ಘಾಟಿಸಿ ನ್ಯಾ.ಹಂಚಾಟೆ ಸಂಜೀವ ಕುಮಾರ್ ಹೇಳಿಕೆ

ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದಿಸಿದ ಬೀರಪ್ಪ ಅವರು, ತಮ್ಮ ಪ್ರಸ್ತುತ ಚಾಲ್ತಿಯಲ್ಲಿರುವ ಕೊಳವೆಬಾವಿಯಿಂದ ಗ್ರಾಮದ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಪೂರೈಸಲು ಒಪ್ಪಿಗೆ ನೀಡಿದರು. ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಸಹಕರಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದರು.

ನಂತರ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಅವರು, ಜಿಲ್ಲೆಯ ಯಾವುದೇ ಗ್ರಾಮ ಅಥವಾ ನಗರ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ದಿನವೂ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಅಗತ್ಯವಿರುವ ಕಡೆಗಳಲ್ಲಿ ಅಕ್ಕಪಕ್ಕದ ಗ್ರಾಮಗಳು ಹಾಗೂ ವಾರ್ಡ್‌ಗಳಲ್ಲಿರುವ ಖಾಸಗಿ ಕೊಳವೆ ಬಾವಿಗಳ ಮಾಲೀಕರ ಸಹಕಾರ ಪಡೆದು ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಬೇಕು. ನೀರು ಪೂರೈಸುವ ಖಾಸಗಿ ಕೊಳವೆಬಾವಿ ಮಾಲೀಕರಿಗೆ ಸರ್ಕಾರ ನಿಗದಿಪಡಿಸಿರುವ ಮೊತ್ತವನ್ನು ಯಾವುದೇ ಕಾಲವಿಳಂಬವಿಲ್ಲದೆ ತ್ವರಿತವಾಗಿ ಪಾವತಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

1174750 ok

ದೊರಣಾಲಪಲ್ಲಿ ಗ್ರಾಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಪೂರೈಸುವ ಉದ್ದೇಶದಿಂದ ಪಕ್ಕದ ಕದಿರಮ್ಮಗಾರಿಕೋಟೆ ಗ್ರಾಮದ ಕೊಳವೆಬಾವಿಗಳಿಂದ ಪೈಪ್‌ಲೈನ್ ಮೂಲಕ ನೀರು ತರುವ ಸಾಧ್ಯತೆಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನಿರಂತರ ನಿಗಾ ವಹಿಸಿ, ಅಗತ್ಯವಿರುವ ಕಡೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ತಹಸಿಲ್ದಾರ್ ಮನಿಷಾ ಪತ್ರಿ ,ಸ್ಥಳೀಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.