ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA S.N. Subbareddy: ಕಲೆ ಗೊತ್ತಿದ್ರೆ ಜಗತ್ತನ್ನೇ ಗೆಲ್ಲಬಹುದು ಪ್ರತಿಭಾ ಕಾರಂಜಿಯಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕಿವಿಮಾತು

ಮಕ್ಕಳಿಗೆ ಒತ್ತಡವನ್ನು ಹೇರಬಾರದು, ಅವರಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಇನ್ನೂ ವಿದ್ಯಾರ್ಥಿಗಳು ಶೇ.೭೫ ರಷ್ಟು ಸಮಯವನ್ನು ವಿದ್ಯಾಭ್ಯಾಸಕ್ಕೆ ಮೀಸಲಿಟ್ಟರೆ, ಉಳಿದ ಶೇ.೨೫ ರಷ್ಟು ಸಮಯವನ್ನು ಕಲೆ, ಸಂಸ್ಕೃತಿ ಮತ್ತು ಪ್ರತಿಭಾ ಪ್ರದರ್ಶನ ಗಳಿಗೆ ನೀಡಬೇಕು.

ಕಲೆ ಗೊತ್ತಿದ್ರೆ ಜಗತ್ತನ್ನೇ ಗೆಲ್ಲಬಹುದು

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಸಕ ಸುಬ್ಬಾರೆಡ್ಡಿಯವರು ಮಕ್ಕಳು ತಯಾರಿಸಿದ ಕ್ಲೇ ಮಾಡಲಿಂಗ್ ಮಾದರಿಗಳನ್ನು ವೀಕ್ಷಣೆ ಮಾಡಿದರು. -

Ashok Nayak
Ashok Nayak Dec 5, 2025 11:56 PM

ಗುಡಿಬಂಡೆ: ಎಲ್ಲಾ ವಿದ್ಯಾರ್ಥಿಗಳು ಒಂದಲ್ಲ ಒಂದು ರೀತಿಯ ಪ್ರತಿಭೆ, ಕಲೆಯನ್ನು ಹೊಂದಿರು ತ್ತಾರೆ. ಅದನ್ನು ಹೊರತೆಗೆಯುವ ಕೆಲಸ ಪೋಷಕರು ಹಾಗೂ ಶಿಕ್ಷಕರು ಮಾಡಬೇಕು, ಕಲೆ ಗೊತ್ತಿದ್ದರೇ ಜಗತ್ತನ್ನೇ ಗೆಲ್ಲಬಹುದು, ಆ ಕಲೆಯನ್ನು ಗುರ್ತಿಸುವ ಕೆಲಸ ಸಹ ಆಗಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಕಾಲದಲ್ಲಿ ಶಿಕ್ಷಣ ಎಂಬುದು ಅತ್ಯಂತ ಮುಖ್ಯವಾದುದು. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಕ್ರೀಡೆ ಕ್ಷೇತ್ರಗಳಲ್ಲೂ ಸಹ ವಿದ್ಯಾರ್ಥಿಗಳು ಮುಂದಿರಬೇಕು. ಎಲ್ಲರಲ್ಲೂ ಕಲೆ ಎಂಬುದು ಇರುತ್ತದೆ, ಅದನ್ನು ಗುರ್ತಿಸುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕು.

ಇದನ್ನೂ ಓದಿ: MLA Subbareddy: ಯುವಜನತೆ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಶಾಸಕ ಸುಬ್ಬಾರೆಡ್ಡಿ ಕರೆ

ಮಕ್ಕಳಿಗೆ ಒತ್ತಡವನ್ನು ಹೇರಬಾರದು, ಅವರಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಇನ್ನೂ ವಿದ್ಯಾರ್ಥಿಗಳು ಶೇ.೭೫ ರಷ್ಟು ಸಮಯವನ್ನು ವಿದ್ಯಾಭ್ಯಾಸಕ್ಕೆ ಮೀಸಲಿಟ್ಟರೆ, ಉಳಿದ ಶೇ.೨೫ ರಷ್ಟು ಸಮಯವನ್ನು ಕಲೆ, ಸಂಸ್ಕೃತಿ ಮತ್ತು ಪ್ರತಿಭಾ ಪ್ರದರ್ಶನ ಗಳಿಗೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಣ್ಣ ವಿಷಯಕ್ಕೂ ಬೇಗನೆ ಕೋಪ ಮಾಡಿ ಕೊಳ್ಳುತ್ತಿದ್ದಾರೆ. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಇಂತಹ ಕೋಪವನ್ನು ನಿಯಂತ್ರಿಸಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳಾದ ತಾವುಗಳು ಶಿಕ್ಷಣದ ಜೊತೆಗೆ ಶಿಸ್ತು, ಸಂಸ್ಕಾರವನ್ನು ಸಹ ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಇನ್ನೂ ಕಾರ್ಯಕ್ರಮದಲ್ಲಿ ಬಿಇಒ ಕೃಷ್ಣಕುಮಾರಿ ಮಾತನಾಡಿ, ಇಂದಿನ ಕಾಲದಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಅನೇಕ ದುಷ್ಪರಿಣಾಮಗಳು ಸಂಭವಿ ಸುತ್ತಿವೆ. ಮಕ್ಕಳು ತಂತ್ರಜ್ಞಾನವನ್ನು ತಮ್ಮ ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಬಳಸಿಕೊಳ್ಳಬೇಕೆ ವಿನಃ ಬೇರೆ ರೂಪದಲ್ಲಲ್ಲ. ಮೊಬೈಲ್ ಗಳಲ್ಲಿ ಗೇಮ್ ಗಳನ್ನು ಆಡುವುದು ಬಿಟ್ಟು ಇತರೇ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ, ಕ್ರೀಡಾ ಕೂಟಗಳಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿನ ಪ್ರತಿಭೆಯನ್ನು ಗುರ್ತಿಸಬಹುದಾಗಿದೆ. ಮಕ್ಕಳಲ್ಲಿನ ಪ್ರತಿಭೆಯನ್ನು ಗುರ್ತಿಸಿ ಅದನ್ನು ಮತ್ತಷ್ಟು ಮೆರಗುಗೊಳಿಸುವಂತಹ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕಿದೆ ಎಂದರು.

ಇನ್ನೂ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಎ.ವಿಕಾಸ್, ಉಪಾಧ್ಯಕ್ಷ ಗಂಗರಾಜು, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಉಪಾಧ್ಯಕ್ಷ ಶ್ರೀರಾಮರೆಡ್ಡಿ, ಪ್ರೌಡಶಾಲಾ ಶಿಕ್ಷಕರ ಸಂಘದ ಲಕ್ಷ್ಮೀನರಸಿಂಹಗೌಡ ಸೇರಿದಂತೆ ಪ್ರಮುಖ ಮುಖಂಡರಾದ ಆದಿರೆಡ್ಡಿ, ಅಂಬರೀಶ್, ಆದಿನಾರಾಯಣಪ್ಪ, ಚಿಕ್ಕನಾರಾಯಣಪ್ಪ ಮತ್ತು ಇತರ ಗಣ್ಯರು ಉಪಸ್ಥಿತ ರಿದ್ದರು.