Dr M C Sudhakar: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅತಿಥಿ ಉಪನ್ಯಾಸಕರ ಪಾಲಿನ ಆಪದ್ಭಾಂಧವ : ಹನುಮಂತಗೌಡ ಆರ್ ಕಲ್ಮನಿ
ಅತಿಥಿ ಉಪನ್ಯಾಸಕರು ಇವತ್ತು ಏನಾದರೂ ಪಡೆದುಕೊಂಡಿದ್ದರೆ ಅದು ಹೋರಾಟಗಳ ಫಲವಾಗಿ ಮಾತ್ರವಾಗಿದೆ.ಎಲ್ಲಾ ಸರಕಾರಗಳ ಅವಧಿಗಳಲ್ಲಿ ಕೂಡ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಿದ್ದೇವೆ.ನಾನು ಯಾರ ಪರ ಯಾರ ವಿರುದ್ಧವೂ ಅಲ್ಲ ಎಂದ ಅವರು ಈಗಿನ ಸರಕಾರ ಮತ್ತು ಸಚಿವರು ಅತಿಥಿ ಉಪನ್ಯಾಸಕರ ಹಲವು ಬೇಡಿಕೆಗಳನ್ನು ಈಡೇರಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಅತಿಥಿ ಉಪನ್ಯಾಸಕ ಸಂಘದಿಂದ ನಡೆಸಿದ ಸುದ್ದಿಗೋಷ್ಟಿಯಲ್ಲಿ ಹನುಮಂತಗೌಡ ಕಲ್ಮನಿ ಮಾತನಾಡಿದರು.

ಚಿಕ್ಕಬಳ್ಳಾಪುರ ; ಅತಿಥಿ ಉಪನ್ಯಾಸಕರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಉನ್ನತ ಶಿಕ್ಷಣ ಸಚಿವರ ಬಗ್ಗೆ ಅವಹೇಳನ ಮಾಡಿರುವ ಅನಾಮಿಕ ವಿದ್ಯಾರ್ಥಿ ಸಂಘಟನೆಯ ನಾಯಕನಿಗೆ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತ್ ಗೌಡ ಆರ್ ಕಲ್ಮನಿ ತಿರುಗೇಟು ನೀಡಿದರು.
ನಗರದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿರುವ ೪೩೪ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೧೦, ೭೭೨ ಮಂದಿ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಕೋರ್ಟಿನ ಆದೇಶಗಳ ಹಿನ್ನೆಲೆಯಲ್ಲಿ ಬೀದಿ ಪಾಲು ಮಾಡದೆ ಸೇವಾ ಹಿರಿತನದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಿ ಎಂದು ಕರ್ನಾಟಕ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಸರಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ: Chikkaballapur News: ದೈಹಿಕವಾಗಿ ಸದೃಢವಾಗಿದ್ದರೆ ಸಾಲದು ಮಾನಸಿಕ ಆರೋಗ್ಯವೂ ಮುಖ್ಯ : ಡಾ.ಪ್ರಕಾಶ್ ಅಭಿಮತ
ಅತಿಥಿ ಉಪನ್ಯಾಸಕರು ಇವತ್ತು ಏನಾದರೂ ಪಡೆದುಕೊಂಡಿದ್ದರೆ ಅದು ಹೋರಾಟಗಳ ಫಲವಾಗಿ ಮಾತ್ರವಾಗಿದೆ.ಎಲ್ಲಾ ಸರಕಾರಗಳ ಅವಧಿಗಳಲ್ಲಿ ಕೂಡ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಿದ್ದೇವೆ. ನಾನು ಯಾರ ಪರ ಯಾರ ವಿರುದ್ಧವೂ ಅಲ್ಲ ಎಂದ ಅವರು ಈಗಿನ ಸರಕಾರ ಮತ್ತು ಸಚಿವರು ಅತಿಥಿ ಉಪನ್ಯಾಸಕರ ಹಲವು ಬೇಡಿಕೆಗಳನ್ನು ಈಡೇರಿಸಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಸಚಿವರಿಗೆ ಸಂಘವು ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದರು.
ಕರ್ತವ್ಯ ನಿರತ ಅತಿಥಿ ಉಪನ್ಯಾಸಕರು ಮರಣ ಹೊಂದಿದಲ್ಲಿ ೫ ಲಕ್ಷ ಪರಿಹಾರ ನೀಡುವುದು, ಆರೋಗ್ಯ ವಿಮೆ ವಿಚಾರ, ಇಡುಗಂಟಿನ ವಿಚಾರದಲ್ಲಿ ಈ ಸರಕಾರ ಅತಿಥಿ ಉಪನ್ಯಾಸಕರಿಗೆ ತುಂಬಾ ಸಹಾಯ ಮಾಡಿದೆ. ಇಷ್ಟೊಂದು ಸೌಕರ್ಯವನ್ನು ಯಾವ ಸರ್ಕಾರವು ಒದಗಿಸಿಲ್ಲ ಎಂಬುದು ಸತ್ಯ. ಹೀಗಾಗಿ ಅತಿಥಿ ಉಪನ್ಯಾಸಕರ ನಡುವೆ ತಾರತಮ್ಯ ಮಾಡದೆ ಸೇವಾ ಹಿರಿತನದ ಆಧಾರದಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರ ಆಯ್ಕೆ ನಡೆಯಲಿ, ೨೦೦೯ರಲ್ಲಿ ಎಂಫಿಲ್ ಪಡೆದಿರುವ ಅಭ್ಯರ್ಥಿಗಳನ್ನು ಎನ್‌ಇಟಿಗೆ ಸಮಾನಂತರವಾಗಿ ಸ್ವೀಕರಿಸಬೇಕು. ೪೬ ದಿನಗಳ ಹೋರಾಟದ ಗೌರವಧನ ಬಿಡುಗಡೆ ಮಾಡಬೇಕು.ಪ್ರತಿವರ್ಷ ನೇಮಕಾತಿ ಪ್ರಕ್ರಿಯೆ ನಡೆಸುವುದನ್ನು ಕೈಬಿಟ್ಟು ಸೇವೆಲ್ಲಿರುವವರನ್ನೇ ಮುಂದುವರೆಸಬೇಕು.ಹೆಚ್ಚುವರಿ ಕಾರ್ಯಭಾರಕ್ಕೆ ಹೊಸಬರನ್ನು ತೆಗೆದು ಕೊಳ್ಳಬೇಕು. ಯುಜಿಸಿ ಅರ್ಹತೆ ಪಡೆಯಲು ೫ ವರ್ಷ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನು ಬಿಟ್ಟು ಯುಜಿಸಿ ನಿಯಮಾವಳಿ ಆಧಾರದಲ್ಲಿ ನೇಮಕಾತಿಗೆ ಮುಂದಾದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದರು.
ಸAಘದ ಜಿಲ್ಲಾಧ್ಯಕ್ಷ ಮುನಿರಾಜು ಎಂ ಅರಿಕೆರೆ ಮಾತನಾಡಿ ಎಕೆಎಸ್‌ಎಸ್‌ಎ ಸಂಘಟನೆಯ ರಾಜ್ಯಾಧ್ಯಕ್ಷ ಎಂಬ ಅನಾಮಿಕ ವ್ಯಕ್ತಿ ಇತ್ತೀಚೆಗೆ ವಿಡಿಯೋ ಒಂದನ್ನು ಹರಿಯಬಿಟ್ಟು ಉನ್ನತ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿರುವುದು ಸರಿಯಲ್ಲ. ಅಷ್ಟಕ್ಕೂ ಈತ ಯಾರೆಂಬುದು ಅತಿಥಿ ಉಪನ್ಯಾಸಕರಿಗೆ ಗೊತ್ತೇ ಇಲ್ಲ.ಈವರೆಗೆ ಈತ ಎಲ್ಲಿದ್ದ, ಯಾವ ಹೋರಾಟ ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯಕೊಡಿಸಿದ್ದಾನೆ ಎಂಬುದು ಗೊತ್ತಿಲ್ಲ, ೨೦೦೪-೦೫ನೇ ಸಾಲಿನಲ್ಲಿ ಅತಿಥಿ ಎಂಬ ಪದನಾಮವನ್ನು ಸರಕಾರ ಜಾರಿಗೆ ತಂದಾಗ ಈತ ಎಲ್ಲಿದ್ದ ಎಂಬುದು ಯಾರಿಗೂ ತಿಳಿದಿಲ್ಲ.
ಇದೀಗ ದಿಢೀರ್ ಎಂದು ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ,೨೦೧೮ರ ಯುಜಿಸಿ ನಿಯಮಾವಳಿಯಂತೆ ಅತಿಥಿ ಉಪನ್ಯಾಸಕರ ಆಯ್ಕೆಯಾಗಲಿ ಎಂದು ಹೇಳುತ್ತಿರುವುದು ನೋಡಿ ದರೆ ಅತಿಥಿ ಉಪನ್ಯಾಸಕರ ನಡುವೆ ಹುಳಿಯಿಂಡುವ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ.
ಈತ ನಿಜವಾದ ವಿದ್ಯಾರ್ಥಿ ಮುಖಂಡನೇ ಆಗಿದ್ದಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಎಲ್ಲಿ ಧ್ವನಿ ಎತ್ತಿದ್ದಾರೆ? ಯಾವಾಗ ಹೋರಾಟ ಮಾಡಿದ್ದಾರೆ? ಯಾವ ನ್ಯಾಯ ಕೊಡಿಸಿದ್ದಾರೆ? ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು. ಅದನ್ನು ಬಿಟ್ಟು ಅತಿಥಿ ಉಪನ್ಯಾಸಕರ ನೇಮಕಾತಿಗೆ ಯುಜಿಸಿ ಉಪನ್ಯಾಸಕರನ್ನೇ ಪರಿಗಣಿಸಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವ ಬೆದರಿಕೆ ಹಾಕಿರುವ ಕ್ರಮವನ್ನು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.
ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಸಾರ್ ನಿಮ್ಮ ಅವಧಿಯಲ್ಲಿಯೇ ಮುಖ್ಯಮಂತ್ರಿ ಗಳ ಮನವೊಲಿಸಿ ನಮ್ಮ ಸಮಸ್ಯೆಗೆ ಪೂರ್ಣವಿರಾಮ ಇಡಬೇಕು. ಕೋರ್ಟಿನ ತೀರ್ಪುಗಳನ್ನು ಮುಂದಿಟ್ಟು ಕೊಂಡು ನಮ್ಮನ್ನು ಬೀದಿ ಪಾಲು ಮಾಡಬೇಡಿ. ಗೌರವಯುತವಾಗಿ ಬದುಕು ನಡೆಸಲು ಅವಕಾಶ ಮಾಡಿಕೊಡಿ ಎಂದು ಕೈಮುಗಿದು ಬೇಡಿಕೊಂಡರು.
ರಾಜ್ಯ ಸರಕಾರ ೨೦೨೫ -೨೦೨೬ ನೇ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವಾಗ ಯುಜಿಸಿ ನಾನ್ ಯುಜಿಸಿ ಎಂದು ಭೇದ ಭಾವ ಮಾಡದೆ ಸೇವಾ ಹಿರಿತನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು. ೧೨ ತಿಂಗಳು ವೇತನವನ್ನು ನೀಡಬೇಕು. ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಸಂಘವು ಅವರ ಪರವಾಗಿ ನಿಲ್ಲಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ರಾಜಶೇಖರ್, ಸದಾಶಿವ ಆರಾಧ್ಯ, ಮಾಲೂರು ರಮೇಶ್, ಗದಗ್ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ದೇಸಾಯಿಗೌಡ, ಗುಲ್ಬರ್ಗ ಜಿಲ್ಲಾಧ್ಯಕ್ಷ ಡಾ.ಚಂದ್ರಕಾಂತ್ ಶಿರೋಳೆ ಮತ್ತಿತರರು ಮಾತನಾಡಿದರು.
ಈ ವೇಳೆ ಗದಗ್ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ದೇಸಾಯಿಗೌಡ, ಸದಸ್ಯ ಮಹಂತೇಶ್ ಕರ್ಲವಾಡ್, ಗುಲ್ಬರ್ಗ ಜಿಲ್ಲಾಧ್ಯಕ್ಷ ಡಾ.ಚಂದ್ರಕಾಂತ್ ಶಿರೋಳೆ, ಉಪನ್ಯಾಸಕ ಡಾ.ಪ್ರಭುನಾರಾಯಣ , ಚಿಕ್ಕ ಬಳ್ಳಾಪುರ ಜಿಲ್ಲಾಧ್ಯಕ್ಷ ಮುನಿರಾಜು ಎಂ ಅರಿಕೆರೆ, ಗೌರವಾಧ್ಯಕ್ಷ ಸದಾಶಿವ ಆರಾಧ್ಯ,ಕೋಲಾರ ರಮೇಶ್, ಚಿಂತಾಮಣಿ ರಮಾನಂದ, ರಾಘವೇಂದ್ರ, ಸತ್ಯನಾರಾಯಣ, ವೆಂಕಟರಮಣ, ರಾಜಶೇಖರ್, ಗೀತಾ, ಸುರೇಶ್‌ಬಾಬು, ರಾಮಾಂಜಿನಪ್ಪ ಮತ್ತಿತರರು ಇದ್ದರು.