Bangarpet MLA S.N.Narayanaswamy: ಚಿಕ್ಕಬಳ್ಳಾಪುರದಲ್ಲಿ ಬೃಹತ್ ಮೆರವಣಿಗೆ – “ನಮ್ಮ ನಾಯಕರಿಗೆ ಸಚಿವ ಸ್ಥಾನ ನೀಡಲೇಬೇಕು” ಎಂದು ಹೈಕಮಾಂಡ್‌ಗೆ ಎಚ್ಚರಿಕೆ
ನಗರದ ಜೈ ಭೀಮ್ ಹಾಸ್ಟೆಲ್ ಆವರಣದಿಂದ ಅಂಬೇಡ್ಕರ್ ವೃತ್ತದವರೆಗೆ ಸಾಗಿದ ಮೆರವಣಿಗೆ ಯಲ್ಲಿ ನೂರಾರು ಕಾರ್ಯಕರ್ತರು ಮತ್ತು ಸಮುದಾಯದ ಮುಖಂಡರು ಭಾಗವಹಿಸಿ, ಎಸ್.ಎನ್.ನಾರಾಯಣಸ್ವಾಮಿ ಅವರ ಭಾವಚಿತ್ರಗಳಿರುವ ಫಲಕಗಳನ್ನು ಹಿಡಿದು ಸಚಿವ ಸ್ಥಾನ ನೀಡುವಂತೆ ಘೋಷಣೆಗಳನ್ನು ಕೂಗಿದರು.
ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರದಲ್ಲಿ ಬಲಗೈ ಜಾತಿಗಳ ಒಕ್ಕೂಟದ ವತಿಯಿಂದ ನಡೆದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ ಮುಖಂಡರು ಮತ್ತು ಕಾರ್ಯಕರ್ತರ ಚಿತ್ರ -
ಚಿಕ್ಕಬಳ್ಳಾಪುರ: ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ(Bangarpet MLA S.N. Narayanaswamy) ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂಬ ಒತ್ತಾಯದೊಂದಿಗೆ ಬಲಗೈ ಜಾತಿಗಳ ಒಕ್ಕೂಟ ಗುರುವಾರ ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ತನ್ನ ರಾಜಕೀಯ ಶಕ್ತಿ ಮತ್ತು ಸಂಘಟನಾ ಸಾಮರ್ಥ್ಯವನ್ನು ಪ್ರದರ್ಶಿಸಿತು.
ನಗರದ ಜೈ ಭೀಮ್ ಹಾಸ್ಟೆಲ್ ಆವರಣದಿಂದ ಅಂಬೇಡ್ಕರ್ ವೃತ್ತದವರೆಗೆ ಸಾಗಿದ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಮತ್ತು ಸಮುದಾಯದ ಮುಖಂಡರು ಭಾಗವಹಿಸಿ, ಎಸ್.ಎನ್.ನಾರಾಯಣಸ್ವಾಮಿ ಅವರ ಭಾವಚಿತ್ರಗಳಿರುವ ಫಲಕಗಳನ್ನು ಹಿಡಿದು ಸಚಿವ ಸ್ಥಾನ ನೀಡುವಂತೆ ಘೋಷಣೆಗಳನ್ನು ಕೂಗಿದರು. ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಸಮುದಾಯದ ಸಂಕೇತವಾದ ಕೊಂಬಿನ ಕಹಳೆ ತಮಗೆ ನಿನಾದ ದೊಂದಿಗೆ ಪ್ರತಿಭಟನಾಕಾರರ ಘೋಷಣೆಗಳು ಮೊಳಗಿದವು.
ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಒಕ್ಕೂಟದ ಸದಸ್ಯರು, ಕೋಲಾರ–ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಬಲಗೈ ಸಮುದಾಯ ಪ್ರತಿನಿಧಿಸುವ ಏಕೈಕ ಶಾಸಕರಾಗಿರುವ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯದ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಬಲಗೈ ಜಾತಿಗಳ ಒಕ್ಕೂಟದ ಗೌರವಾಧ್ಯಕ್ಷ ಏಡುಕೊಂಡಲ ಶ್ರೀನಿವಾಸ್, “ದಶಕಗಳಿಂದ ಕಾಂಗ್ರೆಸ್ ಪಕ್ಷದ ಪರವಾಗಿ ನಿಷ್ಠೆಯಿಂದ ನಿಂತಿರುವ ನಮ್ಮ ಸಮುದಾಯಕ್ಕೆ ಈವರೆಗೂ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಅವಳಿ ಜಿಲ್ಲೆಗಳಲ್ಲಿ ಗಣನೀಯ ಮತಬಲ ಹೊಂದಿರುವ ಬಲಗೈ ಸಮುದಾಯದ ಆಶಯಗಳನ್ನು ಗೌರವಿಸಿ, ಎಸ್.ಎನ್. ನಾರಾಯಣಸ್ವಾಮಿ ಅವರನ್ನು ಸಚಿವರನ್ನಾಗಿ ಮಾಡಬೇಕು” ಎಂದು ಆಗ್ರಹಿಸಿ ದರು.
“ಕೆ.ಸಿ.ರೆಡ್ಡಿ ಅವರ ಅವಧಿಯಲ್ಲಿ ಟಿ.ಚೆನ್ನಯ್ಯ ಅವರಿಗೆ ಸಚಿವ ಸ್ಥಾನ ದೊರೆತ ಬಳಿಕ ನಮ್ಮ ಸಮುದಾಯಕ್ಕೆ ಅಂತಹ ಅವಕಾಶ ಈವರೆಗೆ ಸಿಕ್ಕಿಲ್ಲ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೈತಪ್ಪಿದ ಅವಕಾಶ ಈಗ ಡಿ.ಕೆ.ಶಿವಕುಮಾರ್(D K Shivkumar) ನೇತೃತ್ವದ ಸರ್ಕಾರದಲ್ಲಿ ಸಾಕಾರಗೊಳ್ಳಬೇಕು. ಇಲ್ಲವಾದರೆ ಸಮುದಾಯದೊಳಗೆ ಅಸಮಾಧಾನ ಮತ್ತಷ್ಟು ಹೆಚ್ಚಾಗಲಿದೆ” ಇದು ಪಕ್ಷದ ಮೇಲೆ ಪರಿಣಾಮ ಬೀರುವಷ್ಟು ಬಲಿಷ್ಟವಾಗಿದೆ ಎಂದು ಎಚ್ಚರಿಸಿದರು.
ಮುಖಂಡ ವೆಂಕಟ್ ರೆಡ್ಡಿ ಮಾತನಾಡಿ, “ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವುದು ಒಬ್ಬ ವ್ಯಕ್ತಿಗೆ ಗೌರವ ನೀಡುವುದಲ್ಲ; ಲಕ್ಷಾಂತರ ಬಲಗೈ ಸಮುದಾ ಯದ ಜನರ ಆಶಯಗಳಿಗೆ ಮನ್ನಣೆ ನೀಡಿದಂತಾಗುತ್ತದೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದರೆ, ಈ ಬಾರಿ ನಮ್ಮ ಸಮುದಾಯಕ್ಕೆ ಅವಳಿ ಜಿಲ್ಲೆಯಲ್ಲಿ ನ್ಯಾಯ ಒದಗಿಸಲೇಬೇಕು” ಎಂದು ಹೇಳಿದರು.
“ಒಂದು ವೇಳೆ ಸರ್ಕಾರ ಮತ್ತು ಪಕ್ಷದ ಹೈಕಮಾಂಡ್ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದರೆ ರಾಜ್ಯಾದ್ಯಂತ ಜನಜಾಗೃತಿ ಸಮಾವೇಶಗಳನ್ನು ಹಮ್ಮಿಕೊಂಡು ಸಮುದಾಯದ ಧ್ವನಿ ಯನ್ನು ಮತ್ತಷ್ಟು ಪ್ರಬಲಗೊಳಿಸಲಾಗುವುದು. ಮುಂಬರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮುದಾಯ ಗಂಭೀರವಾಗಿ ಚಿಂತನೆ ನಡೆಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದರು.
ಈ ವೇಳೆ, ಜಿಲ್ಲಾಧ್ಯಕ್ಷ ಬಲಜಾತಿಗಳ ಒಕ್ಕೂಟದ ಸಲಹಾಸಮಿತಿ ಅಧ್ಯಕ್ಷ ಏಡುಕೊಂಡಲ ಶ್ರೀನಿವಾಸ್, ಜಿಲ್ಲಾಧ್ಯಕ್ಷ ರಾಮಕೃಷ್ಣ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ವೆಂಕಟರೆಡ್ಡಿ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಸಲಹಾ ಸಮಿತಿ ಸದಸ್ಯ ಹರೀಶ್ ಕುಮಾರ್, ಮಂಚೇನಹಳ್ಳಿ ತಾಲೂಕು ಅಧ್ಯಕ್ಷ ಗಂಗಾಧರಪ್ಪ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ವೆಂಕಟಕೃಷ್ಣಪ್ಪ, ಚಿಂತಾಮಣಿ ತಾಲೂಕು ಪ್ರಧಾನ ಕಾರ್ಯದರ್ಶಿ ವಕೀಲ ರವಿಕುಮಾರ್, ಗೌರಿಬಿದನೂರು ತಾಲೂಕು ಸಲಹಾ ಸಮಿತಿ ಸದಸ್ಯ ಮುನಿರಾಜು, ಚೇಳೂರು ತಾಲೂಕು ಅಧ್ಯಕ್ಷ ಶಂಕರ್, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಚಂದ್ರು, ಪ್ರಧಾನ ಕಾರ್ಯದರ್ಶಿ,ಕಿರಣ್, ಜಂಟಿ ಕಾರ್ಯದರ್ಶಿ ಮುನಿರಾಜು ಮತ್ತಿತರರು ಇದ್ದರು.