Muddenahalli News: ಸತ್ಯಸಾಯಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮೌಲ್ಯಾಧಾರಿತ ಶಿಕ್ಷಣ ಸಮ್ಮೇಳನಕ್ಕೆ ಚಾಲನೆ
ಇಂದು ಶಿಕ್ಷಣ ಸಂಸ್ಥೆಗಳು ಮೌಲ್ಯಗಳಿಂದ ದೂರ ಸಾಗುತ್ತಿರುವಾಗ ಜೈಲುಗಳು ಅಪರಾಧಿಗಳಿಂದ ತುಂಬುತ್ತಿವೆ. ಒಡೆದ ಕುಟುಂಬಗಳು, ನೈತಿಕ ಮೌಲ್ಯಗಳ ಕುಸಿತ ಮತ್ತು ಸಾಮಾಜಿಕ ಅಸ್ಥಿರತೆ ಹೆಚ್ಚು ತ್ತಿರುವ ಈ ಸಂದರ್ಭದಲ್ಲಿ ಜೈಲುಗಳನ್ನು ಹೆಚ್ಚಿಸುವುದಕ್ಕಿಂತ ಶಾಲೆಗಳನ್ನು ಬಲಪಡಿಸುವುದು ಸಮಾಜಕ್ಕೆ ಶಾಶ್ವತ ಪರಿಹಾರ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಉತ್ತಮ ಮನುಷ್ಯರನ್ನು ರೂಪಿಸಬೇಕು
-
ಮುದ್ದೇನಹಳ್ಳಿ (ಚಿಕ್ಕಬಳ್ಳಾಪುರ): ಮೌಲ್ಯಾಧಾರಿತ ಶಿಕ್ಷಣದ ಮೂಲಕ ಕೇವಲ ದೇಶವನ್ನಷ್ಟೇ ಅಲ್ಲ, ಇಡೀ ವಿಶ್ವವನ್ನೇ ಮಾನವೀಯತೆ, ಶಾಂತಿ ಮತ್ತು ಸಹಬಾಳ್ವೆಯ ನೆಲೆಯಲ್ಲಿ ರೂಪಿಸುವ ಹೊಸ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ ಎಂದು 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಅಭಿಯಾನದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ಆರಂಭವಾದ ಎರಡು ದಿನಗಳ ಅಂತಾರಾಷ್ಟ್ರೀಯ ಮೌಲ್ಯಾಧಾರಿತ ಶಿಕ್ಷಣ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣದ ಮೂಲ ಉದ್ದೇಶ ಕೇವಲ ಜ್ಞಾನ ನೀಡುವುದಲ್ಲ; ಉತ್ತಮ ವ್ಯಕ್ತಿತ್ವ ಮತ್ತು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದಾಗಿದೆ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ: Sadguru Sri Madhusudan Sai: ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ: ಶ್ರೀ ಮಧುಸೂದನ ಸಾಯಿ
'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್', ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಹಾಗೂ ಅಂತಾರಾಷ್ಟ್ರೀಯ ಮೌಲ್ಯಾಧಾರಿತ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿ ಸಿರುವ ಸಮ್ಮೇಳನದಲ್ಲಿ 32 ರಾಷ್ಟ್ರಗಳ ಶಿಕ್ಷಣ ತಜ್ಞರು ಹಾಗೂ 19 ವಿಶ್ವವಿದ್ಯಾಲಯ ಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. 'ಮಾನವರು ಮಾನವರಾಗಬೇಕು' ಎಂಬ ಧ್ಯೇಯವಾಕ್ಯದಡಿ ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ವಿವಿಧ ದೇಶಗಳ ಪ್ರತಿನಿಧಿಗಳು ಮೌಲ್ಯಾಧಾರಿತ ಶಿಕ್ಷಣದ ಅಗತ್ಯತೆ ಮತ್ತು ಜಾಗತಿಕ ಸವಾಲುಗಳ ಕುರಿತು ವಿಚಾರ ವಿನಿಮಯ ನಡೆಸಿದರು.
"ಇಂದು ಶಿಕ್ಷಣ ಸಂಸ್ಥೆಗಳು ಮೌಲ್ಯಗಳಿಂದ ದೂರ ಸಾಗುತ್ತಿರುವಾಗ ಜೈಲುಗಳು ಅಪರಾಧಿಗಳಿಂದ ತುಂಬುತ್ತಿವೆ. ಒಡೆದ ಕುಟುಂಬಗಳು, ನೈತಿಕ ಮೌಲ್ಯಗಳ ಕುಸಿತ ಮತ್ತು ಸಾಮಾಜಿಕ ಅಸ್ಥಿರತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜೈಲುಗಳನ್ನು ಹೆಚ್ಚಿಸುವುದಕ್ಕಿಂತ ಶಾಲೆಗಳನ್ನು ಬಲಪಡಿಸು ವುದು ಸಮಾಜಕ್ಕೆ ಶಾಶ್ವತ ಪರಿಹಾರ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಉತ್ತಮ ಮನುಷ್ಯರನ್ನು ರೂಪಿಸಬೇಕು" ಎಂದು ಸದ್ಗುರುಗಳು ಹೇಳಿದರು.
ಕೃತಕ ಬುದ್ಧಿಮತ್ತೆ (AI) ಮಾಹಿತಿ ಮತ್ತು ಜ್ಞಾನ ನೀಡಬಹುದು. ಆದರೆ ವ್ಯಕ್ತಿತ್ವ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಕರಿಂದ ಮಾತ್ರ ಸಾಧ್ಯ. ಪ್ರತಿಯೊಂದು ಮಗುವಿಗೂ ಮೌಲ್ಯಾಧಾರಿತ ಶಿಕ್ಷಣ ದೊರೆಯುವುದು ಅದರ ಮೂಲಭೂತ ಹಕ್ಕು ಎಂದು ಅಭಿಪ್ರಾಯಪಟ್ಟರು.
ಉನ್ನತ ಶಿಕ್ಷಣ ಇಲಾಖೆಯ ಮಾಜಿ ಸಚಿವ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ( MLA Dr. C.N. Ashwathnarayan) ಮಾತನಾಡಿ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಉಚಿತ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಪೌಷ್ಟಿಕ ಆಹಾರದ ಮೂಲಕ ಲಕ್ಷಾಂತರ ಕುಟುಂಬಗಳ ಬದುಕಿನಲ್ಲಿ ಆಶಾಕಿರಣ ಮೂಡಿಸಿದ್ದಾರೆ ಎಂದರು.
"ಜ್ಞಾನ ಮಾತ್ರವಲ್ಲ, ಚಾರಿತ್ರ್ಯವೂ ಅಗತ್ಯ. ಮಾನವೀಯ ಮೌಲ್ಯಗಳು, ಸೃಜನಶೀಲತೆ, ನಾವೀನ್ಯತೆ ಮತ್ತು ಸಾಮಾಜಿಕ ಕಾಳಜಿಯನ್ನು ಬೆಳೆಸುವ ಶಿಕ್ಷಣವೇ ಉತ್ತಮ ಸಮಾಜ ನಿರ್ಮಿಸುತ್ತದೆ. ಮೌಲ್ಯಾ ಧಾರಿತ ಶಿಕ್ಷಣವನ್ನು ರಾಜ್ಯದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕು ಮಟ್ಟಕ್ಕೂ ವಿಸ್ತರಿಸಬೇಕಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಮಾನವ ಸೂಚ್ಯಂಕ' (Human Quotient – HuQ) ಕೃತಿಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಕೆ. ಶ್ರೀಕಂಠಮೂರ್ತಿ, ಪ್ರೊ. ಟಿ. ವೇಣುಗೋಪಾಲ್, ಡಾ. ಆರ್. ಸಾಯಿಕೃಷ್ಣ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಜಾಗತಿಕ ಮಟ್ಟದಲ್ಲಿ ಮೌಲ್ಯ ಶಿಕ್ಷಣಕ್ಕೆ ವೇದಿಕೆ
- 32 ರಾಷ್ಟ್ರಗಳ ಶಿಕ್ಷಣ ತಜ್ಞರು, ಸಂಶೋಧಕರು ಭಾಗವಹಿಸಿದರು.
- ಭಾರತದ 18 ಹಾಗೂ ಒಂದು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 19 ವಿಶ್ವವಿದ್ಯಾಲಯಗಳ ಪ್ರತಿನಿಧಿಗಳ ಉಪಸ್ಥಿತಿ.
- 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಭಾರತ ಸೇರಿದಂತೆ 20 ರಾಷ್ಟ್ರಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.
- 'ಮಾನವ ಮೌಲ್ಯಗಳು: ಮಾನವೀಯತೆಯನ್ನು ಸಂಪರ್ಕಿಸುವ ಸಾರ್ವತ್ರಿಕ ಭಾಷೆ' ವಿಷಯದ ಕುರಿತು ಡಾ. ಬಿ.ಎನ್. ನರಸಿಂಹಮೂರ್ತಿ ಉಪನ್ಯಾಸ ನೀಡಿದರು.
- 'ಮಾನವ ಮೌಲ್ಯಗಳ ಕುರಿತು ಜಾಗತಿಕ ದೃಷ್ಟಿಕೋನಗಳು' ವಿಷಯದ ಕುರಿತು ಜಾರ್ಜಿಯಾದ ಡಾ. ಪಾಟಾ ಅಮೋನಾಶ್ಟಿಲಿ ಮಾತನಾಡಿದರು.
- 'ಸುಸ್ಥಿರ ಗ್ರಹಕ್ಕಾಗಿ ಮಾನವ ಮೌಲ್ಯಗಳು' ಕುರಿತು ಸ್ಲೊವೇನಿಯಾದ ಪ್ರೊ. ಡಾ. ಅನಾ ವೋವ್ಕ್ ಅವರ ವಿಡಿಯೊ ಸಂದೇಶ ಪ್ರಸಾರವಾಯಿತು.
- ಸಮಾವೇಶದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಲಿದೆ.