ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕದ ಈ ಗ್ರಾಮಕ್ಕಿತ್ತು ಖಮೇನಿ ನಂಟು; ಆಸ್ಪತ್ರೆಗೆ ಉದ್ಘಾಟನೆ ಕರೆಗೆ ಸ್ವತಃ ಬಂದಿದ್ದ ಸುಪ್ರೀಂ ಲೀಡರ್‌!

ಅಮೆರಿಕ ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಂಘರ್ಷ ತಾರಕ್ಕೇರಿದ್ದು, ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮಸ್ಥರಲ್ಲಿ ದುಗುಡ ಹೆಚ್ಚಾಗುತ್ತದೆ.

ಕರ್ನಾಟಕದ ಈ ಗ್ರಾಮಕ್ಕಿತ್ತು ಖಮೇನಿ ನಂಟು!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 1, 2026 10:20 AM

ಚಿಕ್ಕಬಳ್ಳಾಪುರ: ಅಮೆರಿಕ ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಂಘರ್ಷ ತಾರಕ್ಕೇರಿದ್ದು, ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ( Iranian leader Khamenei) ಹತರಾಗಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮಸ್ಥರಲ್ಲಿ ದುಗುಡ ಹೆಚ್ಚಾಗುತ್ತದೆ. ಅಲ್ಲಿರುವ ತಮ್ಮವರ ಸುರಕ್ಷತೆಗೆ ಪ್ರಾರ್ಥನೆ ನಡೆಸುತ್ತಿದ್ದಾರೆ. ಖಮೇನಿ ಹಾಗೂ ಚಿಕ್ಕಬಳ್ಳಾಪುರಕ್ಕೆ ಅವಿನಾಭಾವ ನಂಟಿದ್ದು, 1986 ರಲ್ಲಿ ಅವರು ಚಿಕ್ಕಬಳ್ಳಾಪುರದ ಅಲಿಪುರಕ್ಕೆ ಬಂದಿದ್ದರು.

ವೈದ್ಯಕೀಯ ಶಿಕ್ಷಣ, ಧಾರ್ಮಿಕ ಶಿಕ್ಷಣದ ಕಾರಣಕ್ಕೆ ಅಲೀಪುರದ ಶಿಯಾ ಮುಸ್ಲಿಮರಿಗೆ ಇರಾನ್ ಅಚ್ಚುಮೆಚ್ಚಿನ ತಾಣ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರದ್ದೇ ಪ್ರಾಬಲ್ಯ. ಇರಾನ್ ತಮ್ಮ ಪವಿತ್ರ ಧಾರ್ಮಿಕ ಭೂಮಿ ಎನ್ನುವ ಪೂಜ್ಯ ಭಾವನೆ ಇಲ್ಲಿನ ಜನರದ್ದು. ಅಯಾತೊಲ್ಲಾ ಖಮೇನಿ ಧಾರ್ಮಿಕ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವ ದೊಡ್ಡ ವರ್ಗವೇ ಇಲ್ಲಿದೆ.

1986 ರಲ್ಲಿ ಖಮೇನಿ ಹೆಸರಿನಲ್ಲಿ ಅಲೀಪುರದಲ್ಲಿ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಲಾಗಿತ್ತು. ಇದರ ಉದ್ಘಾಟನೆಗಾಗಿ ಖಮೇನಿಯವರೇ ಸ್ವತಃ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲಿಪುರದ ಕೆಲವು ಯುವಕರು ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರೆ, ಹೆಚ್ಚಿನವರು ಇಸ್ಲಾಮಿಕ್ ಧರ್ಮಗುರುಗಳಾಗಲು ಪ್ರತಿಷ್ಠಿತ ಶಿಯಾ ಸೆಮಿನರಿಗಳು ಮತ್ತು ಇಸ್ಲಾಮಿಕ್ ಸಂಶೋಧನಾ ಸಂಸ್ಥೆಗಳಲ್ಲಿ ದಾಖಲಾಗಿದ್ದಾರೆ. ಇರಾನ್‌ನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪವಿತ್ರ ನಗರವಾದ ಮಷಾದ್‌ಗೆ ವಾರ್ಷಿಕ ತೀರ್ಥಯಾತ್ರೆಗೆ ಹೋಗಿದ್ದಾರೆ. "ಇರಾನ್ ಮತ್ತು ಇಸ್ರೇಲ್ ನಡುವೆ ಉದ್ವಿಗ್ನತೆ ಹೆಚ್ಚಾದಾಗಿನಿಂದ ಗ್ರಾಮದಲ್ಲಿ ಭೀತಿ ಆವರಿಸಿದ್ದರಿಂದ, ತಮ್ಮ ಊರುಗಳಿಗೆ ಹಿಂತಿರುಗಿರುವ ಕುಟುಂಬಗಳು ಆತಂಕಗೊಂಡಿದ್ದವು. ಅಲಿಪುರದ ಸುಮಾರು 105 ನಾಗರಿಕರು ಪ್ರಸ್ತುತ ಇರಾನ್‌ನಾದ್ಯಂತ ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಮೆರಿಕ-ಇಸ್ರೇಲ್ ಜಂಟಿ ದಾಳಿ; ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತ್ಯೆ

ಪ್ರಸ್ತುತ, ಟೆಹ್ರಾನ್‌ನಲ್ಲಿ ಸುಮಾರು 15 ವಿದ್ಯಾರ್ಥಿಗಳು ವೈದ್ಯಕೀಯ (MBBS) ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 30 ನಾಗರಿಕರು ತೀರ್ಥಯಾತ್ರೆಗೆ ಹೋಗಿದ್ದಾರೆ ಮತ್ತು 50 ಕ್ಕೂ ಹೆಚ್ಚು ಯುವಕರು ಧಾರ್ಮಿಕ ತರಬೇತಿ ಪಡೆಯುತ್ತಿದ್ದಾರೆ. ಗ್ರಾಮವು ರತ್ನಗಳು ಮತ್ತು ಆಭರಣ ವ್ಯಾಪಾರದ ಕೇಂದ್ರವಾಗಿರುವುದರಿಂದ ಇನ್ನೂ ಕೆಲವರು ವ್ಯಾಪಾರ ಪ್ರವಾಸಗಳಿಗೂ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಗ್ರಾಮಸ್ಥರ ಸುರಕ್ಷಿತ ವಾಪಸಾತಿಗಾಗಿ ರಾಜ್ಯ ಸರ್ಕಾರವು ವಿದೇಶಾಂಗ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸುತ್ತಿದೆ. ಅವರನ್ನು ಇರಾನ್‌ನಿಂದ ವಿಮಾನದ ಮೂಲಕ ಕರೆತರಲಾಗುವುದು ಎಂದು ಭರವಸೆ ನೀಡಲಾಗಿದೆ.