World Environment Day: ಪರಿಸರ ಸಂರಕ್ಷಣೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ಲಕ್ಷ ಗಿಡಗಳ ನೆಡುವ ಮಹಾ ಅಭಿಯಾನಕ್ಕೆ ಕೈಜೋಡಿಸಿ : ನ್ಯಾಯಾಧೀಶೆ ಲತಾ ಕುಮಾರಿ ಎಂ
ಜಿಲ್ಲೆಯ ವಿವಿಧೆಡೆ, ರಸ್ತೆ ಬದಿಗಳು, ಸರ್ಕಾರಿ ಜಾಗಗಳು, ಶಾಲಾ ಆವರಣಗಳು, ಕೆರೆಗಳ ಸುತ್ತಮುತ್ತ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಈ ಅಭಿಯಾನದ ಪ್ರಮುಖ ಉದ್ದೇಶ ಪರಿಸರ ಸಮತೋಲನ ಕಾಪಾಡುವುದು, ಭೂಗರ್ಭ ಜಲಮಟ್ಟ ಹೆಚ್ಚಿಸುವುದು, ಹಸಿರು ಹೊದಿಕೆ ಯನ್ನು ವಿಸ್ತರಿಸುವುದು ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಗ್ಗಿಸುವು ದಾಗಿದೆ.
-
ಚಿಕ್ಕಬಳ್ಳಾಪುರ: ವಿಶ್ವ ಪರಿಸರ ದಿನದ(World Environment Day) ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ 5 ಲಕ್ಷ ಗಿಡಗಳನ್ನು ನೆಡುವ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಲತಾ ಕುಮಾರಿ ಎಂ (Additional District and Sessions Judge Latha Kumari M.) ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ, ಸಾಮಾಜಿಕ ಕಲ್ಯಾಣ ಇಲಾಖೆ, ವಕೀಲರ ಸಂಘ ಚಿಕ್ಕಬಳ್ಳಾಪುರ,ದರೆ ಫೌಂಡೇಶನ್ ಹಾಗೂ ಸಾರ್ವಜನಿಕರ ಸಹಭಾಗಿತ್ವ ದಲ್ಲಿ ಶುಕ್ರವಾರ ನಗರದ ಸಾಯಿ ರಾಮ್ ಇಂಟರ್ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ವಿವಿಧೆಡೆ, ರಸ್ತೆ ಬದಿಗಳು, ಸರ್ಕಾರಿ ಜಾಗಗಳು, ಶಾಲಾ ಆವರಣಗಳು, ಕೆರೆಗಳ ಸುತ್ತಮುತ್ತ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಈ ಅಭಿಯಾನದ ಪ್ರಮುಖ ಉದ್ದೇಶ ಪರಿಸರ ಸಮತೋಲನ ಕಾಪಾಡುವುದು, ಭೂಗರ್ಭ ಜಲಮಟ್ಟ ಹೆಚ್ಚಿಸುವುದು, ಹಸಿರು ಹೊದಿಕೆ ಯನ್ನು ವಿಸ್ತರಿಸುವುದು ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಗ್ಗಿಸುವು ದಾಗಿದೆ.
ಇದನ್ನೂ ಓದಿ: World Environment Day: ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಬಿಜೆಪಿ ಯುವಮೋರ್ಚಾ
ಮಾವು, ಹೊಂಗೆ, ನೇರಳೆ, ಬೇವು, ಅರಳಿ, ಆಲದಮರ ಸೇರಿದಂತೆ ಸ್ಥಳೀಯ ಪರಿಸರಕ್ಕೆ ಹೊಂದಿ ಕೊಳ್ಳುವ ವಿವಿಧ ಜಾತಿಯ ಸಸಿಗಳನ್ನು ಆಯ್ಕೆ ಮಾಡಲಾಗಿದೆ. ಗಿಡ ನೆಟ್ಟ ನಂತರ ಅವುಗಳ ಸಂರಕ್ಷಣೆಗೂ ವಿಶೇಷ ಯೋಜನೆ ರೂಪಿಸಲಾಗಿಲಾಗಿದೆ. “ಮರಗಳು ಕೇವಲ ಪರಿಸರದ ಅಲಂಕಾರ ವಲ್ಲ, ಅವು ಜೀವಿಗಳ ಉಸಿರು. ಪ್ರತಿಯೊಬ್ಬ ನಾಗರಿಕನು ಕನಿಷ್ಠ ಒಂದು ಗಿಡ ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿ ವಹಿಸಬೇಕು” ಎಂದು ಕರೆ ನೀಡಿದರು.
ಪರಿಸರ ತಜ್ಞರು ಕೂಡ ಮರಗಳ ಸಂಖ್ಯೆ ಹೆಚ್ಚಿಸುವುದು ವಾಯುಮಾಲಿನ್ಯ ನಿಯಂತ್ರಣ, ಮಣ್ಣಿನ ಸಂರಕ್ಷಣೆ ಮತ್ತು ಮಳೆಯ ಪ್ರಮಾಣದ ಸಮತೋಲನಕ್ಕೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ ಎಂಬ ಅರಿವು ಮೂಡಿಸುವಲ್ಲಿ ಇಂತಹ ಅಭಿ ಯಾನಗಳು ಮಹತ್ವದ ಪಾತ್ರ ವಹಿಸುತ್ತವೆ. 5 ಲಕ್ಷ ಗಿಡ ನೆಡುವ ಈ ಬೃಹತ್ ಯೋಜನೆಯು ಯಶಸ್ವಿಯಾದರೆ, ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲೇ ಹಸಿರು ಅಭಿವೃದ್ಧಿಗೆ ಮಾದರಿ ಜಿಲ್ಲೆಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ-ಸಂಸ್ಥೆ ಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದು, ಹಸಿರು ಚಿಕ್ಕಬಳ್ಳಾಪುರ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ನ್ಯಾಯದೀಶರು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಮಾತನಾಡಿ, ರಾಜ್ಯದಲ್ಲಿ 5 ಕೋಟಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿಯ ಕಾರ್ಯಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ದರೆ ಫೌಂಡೇಶನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಆ ಮೂಲಕ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜವಬ್ದಾರಿಯನ್ನು ತೋರುತ್ತಿದೆ. ಇದರ ಭಾಗವಾಗಿ ಈಗಾಗಲೇ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾ ಗಾಂಧಿ ವಸತಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಕಳೆದ ಏಪ್ರಿಲ್ ಮಾಹೆಯಲ್ಲಿ ಚಾಲನೆ ದೊರಕಿದೆ. ಅದರ ಮುಂದುವರೆದ ಭಾಗವಾಗಿ ಸರ್.ಎಂ.ವಿಶ್ವೇಶ್ವರಯ್ಯ ನವರ ಸ್ಮಾರಕದ ಬಳಿ 5 ಗುಂಟೆ ಜಮೀನಿನಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು ಇಂದು ವಿವಿಧ ಕಡೆ ಸಸಿ ನೆಡಲಾಗುತ್ತಿದೆ. ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧೆಡೆ ಅನುಷ್ಠಾನವಾಗಿ ಒಟ್ಟು 5 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಯೋಜಿತ ಗುರಿಯನ್ನು ಹೊಂದಲಾಗಿದೆ ಆ ಮೂಲಕ ಅಂತರ್ಜಲ ವೃದ್ಧಿಸಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲಾಗುವುದು. ಈ ಕಾರ್ಯಕ್ಕೆ ಜಿಲ್ಲೆಯ ಸರ್ಕಾರೇತರ ಸಂಸ್ಥೆಗಳು, ಸಮಸ್ತ ಸಾರ್ವಜನಿಕರು, ಸಹಕಾರ ನೀಡಬೇಕು. ಗಿಡ ಬೆಳೆಸುವ ಜವಬ್ದಾರಿಯನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕಾಗಿದೆ.
ಗಿಡ ನೆಟ್ಟು ಮರ ಬೆಳೆಸುವುದರಿಂದ ಬರಗಾಲಗಳನ್ನು ತಪ್ಪಿಸಬಹುದು. ಮಳೆಯ ಪ್ರಮಾಣದಲ್ಲಿ ಸಮತೋಲನದ ಹಂಚಿಕೆಯನ್ನು ಕಾಪಾಡಿಕೊಳ್ಳಬಹುದು. ಆ ಮೂಲಕ ಅಂತರ್ಜಲ ವೃದ್ಧಿಯಾಗಿ ಪರಿಸರ ಸಂರಕ್ಷಣೆ ಆಗಲಿದೆ. ಈ ಬಗ್ಗೆ ಜಿಲ್ಲೆಯ ಸಮಸ್ತ ನಾಗರಿಕರು ಅರಿವು ಹೊಂದಿ ತಮ್ಮ ವ್ಯಾಪ್ತಿಯಲ್ಲಿ ಗಿಡ ನೆಟ್ಟು ಬೆಳೆಸುವಂತೆ ಕರೆ ನೀಡಿದರು.
ಗಣ್ಯರು ಮೊದಲಿಗೆ ತಿಪ್ಪೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು ನಂತರ ಸಾಯಿ ರಾಮ್ ಇಂಟರ್ ನ್ಯಾಷನಲ್ ಸ್ಕೂಲ್ ನ ಅವರಣದಲ್ಲಿ ಗಿಡ ನೆಡಲಾಯಿತು ಕೊನೆಯದಾಗಿ ಅಣಕನೂರು ಗ್ರಾಮದ ಅಂಬೇಡ್ಕರ್ ಪದವಿ ಪೂರ್ವ ವಿದ್ಯಾರ್ಥಿಗಳ ವಸತಿ ನಿಯಲದ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾ ಚರಣೆಯನ್ನು ಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ದಣ್ಣ ಬಿ ಹಂದ್ರಾಳ್, ಜಿಲ್ಲಾ ಕಾನೂನು ಸೇವಾಗಳ ಪ್ರಾಧಿಕಾರದ ಕಾರ್ಯದರ್ಶಿ ಬಿ ಶಿಲ್ಪ, ಎಲ್ಲ ಅರಣ್ಯ ಅಧಿಕಾರಿ ಗಿರೀಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಶ್, ತಿಪ್ಪೇನಹಳ್ಳಿಯ ಹಿರಿಯ ಪ್ರಾಥಮಿಕ ಪಾಠಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸ್ಥಳೀಯ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.