ಜು.೧೨ ರ ರಾಷ್ಟ್ರೀಯ ಲೋಕ್ ಅದಾಲತ್ ಸದುಪಯೋಗಕ್ಕಾಗಿ ನ್ಯಾ.ನೇರಳೆ ವೀರಭದ್ರಯ್ಯ ಭವಾನಿ ಮನವಿ
ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಸ್ವಯಂಪ್ರೇರಿತರಾಗಿ ಇತ್ಯರ್ಥಪಡಿಸಿಕೊಳ್ಳಲು ಎರಡೂ ಕಡೆಯವರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಇಬ್ಬರ ನಡುವಿನ ಬಾಂಧ ವ್ಯ ಉಳಿದು ವಿವಾದವು ಸುಖಾಂತ್ಯಗೊಳ್ಳುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿರುತ್ತದೆ

ಜುಲೈ ೧೨ ರ ರಾಷ್ಟ್ರೀಯ ಲೋಕ್ ಅದಾಲತ್ ಸದುಪಯೋಗಪಡಿಸಿಕೊಳ್ಳಿ ಎಂದು ನ್ಯಾ. ನೇರಳೆ ವೀರಭದ್ರಯ್ಯ ಭವಾನಿ ಮನವಿ ಮಾಡಿದರು.

ಚಿಕ್ಕಬಳ್ಳಾಪುರ : ಜಿಲ್ಲೆಯ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಇದ್ದು ರಾಜಿಯಾಗಬಲ್ಲ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಕ್ಷಿದಾರರ ಸಮ್ಮುಖದಲ್ಲಿ ಜು.12ರ ಲೋಕ ಅದಾಲತ್ ನಲ್ಲಿ ಇತ್ಯರ್ಥ ಪಡಿಸಲಾಗುತ್ತಿದ್ದು, ಸಾರ್ವಜನಿಕರು ಈ ಅದಾಲತ್ನ ಪ್ರಯೋಜನ ಪಡೆದುಕೊಳ್ಳ ಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಅವರು ಮನವಿ ಮಾಡಿದರು.
ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋ ಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇದನ್ನೂ ಓದಿ: Chikkaballapur News: 14ನೇ ಸಚಿವ ಸಂಪುಟದ ತೀರ್ಮಾನಗಳಿಗೆ ಅಂತಿಮ ಗಡುವು ನೀಡಿ : ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನಿರಂತರವಾಗಿ ರಾಜಿ ಪಂಚಾಯಿತಿ ಮೂಲಕ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಾ ಬರಲಾಗುತ್ತಿದೆ, ಈ ಬಾರಿ ಅದಾಲತ್ನಲ್ಲಿ ಜಿಲ್ಲಾ ನ್ಯಾಯಾಲಯವೂ ಸೇರಿದಂತೆ ಜಿಲ್ಲೆಯ ತಾಲ್ಲೂಕು ಹಂತದ ನ್ಯಾಯಾಲಯಗಳಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ದಲ್ಲಿನ ಪ್ರಕರಣಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಪ್ರಕರಣಗಳು, ವಿಚ್ಛೇದನ ವನ್ನು ಹೊರತುಪಡಿಸಿ ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣಗಳನ್ನು ಕಕ್ಷಿದಾರರು ಹಾಗೂ ವಕೀಲರ ಸಹಕಾರದೊಂದಿಗೆ ಇತ್ಯರ್ಥಪಡಿಸಲಾಗುವುದು ಎಂದರು.
ಅಲ್ಲದೇ, ಚೆಕ್ಕು ಅಮಾನ್ಯ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧಿಕರಣದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಕಾರ್ಮಿಕರ ವಿವಾದಗಳು, ಭೂಸ್ವಾಧೀನ ಪ್ರಕರಣಗಳು ಹಾಗೂ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಸಿವಿಲ್ ಪಿಂಚಣಿ ಪ್ರಕರಣಗಳನ್ನು ರಾಜಿ ಮೂಲಕ ಇಬ್ಬರೂ ಕಕ್ಷಿದಾರರ ಮನವೊಲಿಸಿ ಇತ್ಯರ್ಥ ಪಡಿಸಲಾಗುವುದು. ಜೊತೆಗೆ ರಾಜಿಯಾಗಬಲ್ಲ ಸಿವಿಲ್ ಹಾಗೂ ಖಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳನ್ನೂ ಇತ್ಯರ್ಥ ಪಡಿಸಲಾಗುವುದು. ನ್ಯಾಯಾಲಯ ಗಳಲ್ಲಿನ ಪ್ರಕರಣಗಳನ್ನು ಉಭಯ ಕಕ್ಷಿದಾರರು ರಾಜಿ ಮಾಡಿಕೊಳ್ಳಲು ಸೂಕ್ತ ಕಾನೂನು ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು ಎಂದರು.
ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಸ್ವಯಂಪ್ರೇರಿತರಾಗಿ ಇತ್ಯರ್ಥಪಡಿಸಿಕೊಳ್ಳಲು ಎರಡೂ ಕಡೆಯವರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಇಬ್ಬರ ನಡುವಿನ ಬಾಂಧವ್ಯ ಉಳಿದು ವಿವಾದವು ಸುಖಾಂತ್ಯಗೊಳ್ಳುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿರುತ್ತದೆ. ಸಂಧಾನಕಾರರು ಸೂಚಿಸುವ ಪರಿಹಾರ ಸಮ್ಮತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಲೋಕ ಅದಾಲತ್ ವಿಶೇಷ ಅವಕಾಶವಾಗಿರುತ್ತದೆ ಎಂದರು.
ಪ್ರಸ್ತುತ ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಟ್ಟು ೪೩೭೭೦ ಪ್ರಕರಣಗಳು ಬಾಕಿ ಇದ್ದು, ಈ ಪೈಕಿ ಲೋಕ್ ಅದಾಲತ್ ಗೆ ೮೫೦೨ ಪ್ರಕರಣಗಳನ್ನು ಪ್ರಸ್ತುತ ತೆಗೆದುಕೊಳ್ಳಲಾಗಿದೆ ಅಲ್ಲದೆ ಜುಲೈ ೧೨ರ ಒಳಗಡೆ ಬರುವ ಪ್ರಕರಣಗಳನ್ನು ಸಹ ಲೋಕ್ ಅದಾಲತ್ ಗೆ ತೆಗದುಕೊಳ್ಳಲಾಗುವುದು. ಜುಲೈ ೧೨ ರವರೆಗೂ ಪ್ರಕರಣಗಳ ಸಂಖ್ಯೆ ಮತ್ತಷ್ಟು ಲಭ್ಯವಾಗುವ ಸಾಧ್ಯತೆ ಇದ್ದು, ಸಾಧ್ಯವಾದಷ್ಟು ಹೆಚ್ಚಿನ ಪ್ರಕರಣಗಳನ್ನು ಅದಾಲತ್ ನಲ್ಲಿ ವಿಲೇವಾರಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಪದೇ ಪದೇ ನ್ಯಾಯಾ ಲಯಕ್ಕೆ ಅಲೆಯುವುದು ತಪ್ಪುತ್ತದೆ. ಕಕ್ಷಿದಾರರ ಸಮಯ ಮತ್ತು ಹಣ ಉಳಿತಾಯವಾಗಿ ಇಬ್ಬರಿಗೂ ನ್ಯಾಯ ದೊರೆತಂತಾಗಿ ನೆಮ್ಮದಿಯೂ ದೊರೆಯುತ್ತದೆ. ಅಲ್ಲದೇ ನ್ಯಾಯಾಲಯದ ಅಮೂಲ್ಯ ಸಮಯವೂ ಉಳಿತಾಯವಾಗಿ ಆ ಸಮಯವನ್ನು ಬಾಕಿ ಇರುವ ಇತರೆ ಪ್ರಕರಣಗಳ ವಿಚಾರಣೆ ಮತ್ತು ಇತ್ಯರ್ಥಕ್ಕೆ ನೀಡಲು ಸಹಕಾರಿಯಾಗುತ್ತದೆ. ರಾಜಿ ಮೂಲಕ ಇತ್ಯರ್ಥಪಡಿಸಿ ಕೊಳ್ಳುವು ದರಿಂದ ಕಕ್ಷಿದಾರರ ನಡುವಿನ ವೈಮನ್ಯಸ್ಸು,ಭಿನ್ನಾಭಿಪ್ರಾಯ, ದ್ವೇಷ ಕಡಿಮೆಯಾಗಿ ಇಬ್ಬರ ನಡುವೆ ಸಾಮರಸ್ಯ, ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿ ಸಮಾಜದಲ್ಲಿ ಶಾಂತಿ ನೆಮ್ಮದಿಯೂ ನಿರ್ಮಾಣವಾಗುತ್ತದೆ ಎಂದರು.
ಜು.12ರ ಅದಾಲತ್ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಸಾರ್ವಜನಿಕರು ಮುಂಚಿತವಾಗಿ ಸಂಬಂಧ ಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕುಗಳ ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ಈ ವೇಳೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪ ರವರು ಉಪಸ್ಥಿತರಿದ್ದರು.