Chikkaballapur News: ಮೋದಿ ಸರ್ಕಾರದ ಸಾಧನೆ ಜನಜನಿತವಾಗಲಿ; ಜಿಲ್ಲೆಯ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ದೊರೆಯಲಿ: ಸೀಕಲ್ ರಾಮಚಂದ್ರಗೌಡ
ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣದ ವಿರುದ್ಧವೇ ಬಿಜೆಪಿ ಜನ್ಮ ತಾಳಿದ್ದು, ಇಂದು ದೇಶದ ಶೇ.75 ರಷ್ಟು ರಾಜ್ಯಗಳಲ್ಲಿ ಬಿಜೆಪಿ ಅಥವಾ ಬಿಜೆಪಿ ಬೆಂಬಲಿತ ಸರ್ಕಾರಗಳು ಆಡಳಿತ ನಡೆಸುತ್ತಿವೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮಾದರಿಯನ್ನು ದೇಶಕ್ಕೆ ನೀಡಿದ್ದು, ಈಗ ಮೋದಿ ಮಾದರಿಯ ಆಡಳಿತವನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದಾರೆ
ಮೋದಿ ಸರ್ಕಾರದ ಸಾಧನೆ ಜನಜನಿತವಾಗಲಿ, ಜಿಲ್ಲೆಯ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ದೊರೆಯಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮುಖಂಡರಲ್ಲಿ ಮನವಿ ಮಾಡಿದರು. -
ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ನೇತೃತ್ವದ ಕೇಂದ್ರ ಸರ್ಕಾರ(Union Govt)ದ 12 ವರ್ಷಗಳ ಸಾಧನೆ, ದೇಶದ ಅಭಿವೃದ್ಧಿಗೆ ನೆಟ್ಟ ಮೈಲುಗಲ್ಲು ಗಳು ಹಾಗೂ ಕೈಗೊಂಡ ದಿಟ್ಟ ಹೆಜ್ಜೆಗಳು ಕಟ್ಟಕಡೆಯ ವ್ಯಕ್ತಿಗೂ ಮಾಧ್ಯಮಗಳ ಮೂಲಕ ತಲುಪಬೇಕು ಎಂಬ ಮಹದಾಸೆಯಿಂದ ಈ ಸುದ್ದಿಗೋಷ್ಠಿ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಸರ್ಕಾರದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಭಾಗವಹಿಸಿರುವ ಎಲ್ಲಾ ಮಾಧ್ಯಮ ಮಿತ್ರರು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣದ ವಿರುದ್ಧವೇ ಬಿಜೆಪಿ ಜನ್ಮ ತಾಳಿದ್ದು, ಇಂದು ದೇಶದ ಶೇ.75ರಷ್ಟು ರಾಜ್ಯಗಳಲ್ಲಿ ಬಿಜೆಪಿ ಅಥವಾ ಬಿಜೆಪಿ ಬೆಂಬಲಿತ ಸರ್ಕಾರಗಳು ಆಡಳಿತ ನಡೆಸುತ್ತಿವೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮಾದರಿಯನ್ನು ದೇಶಕ್ಕೆ ನೀಡಿದ್ದು, ಈಗ ಮೋದಿ ಮಾದರಿಯ ಆಡಳಿತವನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: Chikkaballapur News: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು: ನ್ಯಾ ಟಿ.ಪಿ.ರಾಮಲಿಂಗೇಗೌಡ
ಸ್ವಾಭಿಮಾನಿ ಸೇವಕರು ಮತ್ತು ಕೃಷಿಕರನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಅನ್ನ ನೀಡುವ ರೈತರ ಮಕ್ಕಳು ನೀರಿನ ಕೊರತೆಯಿಂದ ಬದುಕು ಕಟ್ಟಿಕೊಳ್ಳಲು ನಗರಗಳತ್ತ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವರನ್ನು ನಂಬಿರುವ ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ದುಸ್ಥಿತಿ ನಿವಾರಣೆಗೆ ಜಿಲ್ಲೆಯ ಎಲ್ಲಾ ಬಿಜೆಪಿ ಮುಖಂಡರು ಪ್ರಧಾನ ಮಂತ್ರಿಗಳ ಗಮನಕ್ಕೆ ಜಿಲ್ಲೆಯ ನೀರಿನ ಸಮಸ್ಯೆಯನ್ನು ತರಬೇಕು ಎಂದು ಮನವಿ ಮಾಡಿದರು.
ಶುದ್ಧ ಕುಡಿಯುವ ನೀರಿನ ಬೇಡಿಕೆಗೆ ಪ್ರತಿಯಾಗಿ ಹೆಚ್.ಎನ್. ವ್ಯಾಲಿ(H N Valley)ಯಿಂದ ವಿಷಕಾರಿ ನೀರನ್ನು ಹರಿಸಿ ಕೆರೆಗಳನ್ನು ಮಲಿನಗೊಳಿಸಲಾಗಿದೆ. ಹೆಚ್.ಎನ್. ವ್ಯಾಲಿ ಯೋಜನೆಯ ಮೂರನೇ ಹಂತದ ಶುದ್ಧೀಕರಣಕ್ಕೆ ಆಗ್ರಹಿಸಿ ನೀರಾವರಿ ಹೋರಾಟಗಾರರು ಎರಡು ದಶಕಗಳಿಗೂ ಹೆಚ್ಚು ಕಾಲ ಹೋರಾಟ ನಡೆಸಿದ್ದರೂ ಇದುವರೆಗೆ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.
ಕೃಷ್ಣಾ ನದಿ(Krishna River)ಯ ನೀರು ಜಿಲ್ಲೆಯ ಗಡಿಯಲ್ಲಿರುವ ಆಂಧ್ರಪ್ರದೇಶದ ಹಿಂದೂ ಪುರದ ವರೆಗೆ ತಲುಪಿದೆ. ಅದೇ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯ ಬೇಕು. ರೈತರು ಹಾಗೂ ರೈತರ ಮಕ್ಕಳು ಸಂಕಷ್ಟ ಅನುಭವಿಸದಂತೆ ಮಾಡಲು ಈ ವಿಷಯದ ಗಂಭೀರತೆಯನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತರಬೇಕಾಗಿದೆ ಎಂದು ಹೇಳಿದರು.
ಮಿಲ್ಕ್ ಅಂಡ್ ಸಿಲ್ಕ್ಗೆ ಹೆಸರುವಾಸಿಯಾದ ಜಿಲ್ಲೆಯ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದ ಎರಡು ವರ್ಷಗಳಿಂದ ರೈತ ಸಂಘಟನೆಗಳು ಅಧಿಸೂಚನೆ ಕೈಬಿಡಿ ಎಂದು ಇದರ ವಿರುದ್ಧ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ತರುವುದು, ಹೆಚ್.ಎನ್. ವ್ಯಾಲಿ ಯೋಜನೆಯ ಮೂರನೇ ಹಂತದ ಶುದ್ಧೀಕರಣ ಜಾರಿಗೊಳಿಸುವುದು ಹಾಗೂ ಕೆಐಎಡಿಬಿ(KIADB) ಅತಿಕ್ರಮಣ ಮತ್ತು ಅಟ್ಟಹಾಸಕ್ಕೆ ಕಡಿವಾಣ ಹಾಕುವುದು ಸೇರಿದಂತೆ ರೈತರ ಪರವಾದ ಕ್ರಮ ಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಶಿಡ್ಲಘಟ್ಟ ಮಾಜಿ ಶಾಸಕರಾದ ರಾಜಣ್ಣ(Former Shidlaghatta MLA Rajanna), ಚಿಂತಾಮಣಿ ಮುಖಂಡರಾದ ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್ ಮುರಳಿಧರ್, ಕೆ.ಬಿ.ಮುರಳಿ ಮತ್ತು ಮಧು ಸೂರ್ಯನಾರಾಯಣ ರೆಡ್ಡಿ, ರಾಷ್ಟ್ರೀಯ ಪರಿಷತ್ ಸದಸ್ಯರಾದ ಲಕ್ಷ್ಮೀನಾರಾಯಣ ಗುಪ್ತ, ಜಿಲ್ಲಾ ಕಾರ್ಯದರ್ಶಿ ಅಶೋಕ್, ಎಸ್ಸಿ ಮೋರ್ಚಾ ಅಧ್ಯಕ್ಷರಾದ ವೆಂಕಟೇಶ್, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷರಾದ ಆಂಜನೇಯ ಗೌಡ, ಗೌರಿಬಿದ ನೂರು ಗ್ರಾ. ಮಾಜಿ ಅಧ್ಯಕ್ಷರಾದ ರಮೇಶ್ ರಾವ್ ಶಿಲ್ಕೆ, ಜಿಲ್ಲಾ ಮಾಧ್ಯಮ ಸಂಚಾಲಕರಾದ ವಿ ಮಧುಚಂದ್ರ ಹಾಗೂ ಜಿಲ್ಲೆಯ ಎಲ್ಲಾ ಮಂಡಲದ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ದ್ದರು.