Sri Madhusudan Sai: ಧ್ವನಿ ಇಲ್ಲದವರಿಗೆ ಮಾಧ್ಯಮಗಳು ಧ್ವನಿಯಾಗಿ ಮುಖ್ಯ ವಾಹಿನಿಗೆ ತರಬೇಕು: ಮಧುಸೂದನ ಸಾಯಿ
Sathya Sai Grama: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ' ದ 94ನೇ ದಿನವಾದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಆಶೀರ್ವಚನ ನೀಡಿದ್ದಾರೆ. ಮಾಧ್ಯಮಗಳಲ್ಲಿ ಉತ್ತಮ ಸುದ್ದಿಗಳ ಕೊರತೆ ಕಾಣಿಸುತ್ತಿದೆ. ಮಾಧ್ಯಮಗಳು ಸತ್ಯ ಹೇಳಬೇಕು ಎನ್ನುವುದರಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ ಜಗತ್ತಿನಲ್ಲಿ ಸಿಹಿ ಸತ್ಯಗಳೂ ಸಾಕಷ್ಟು ಇವೆ. ಅದರ ಕಡೆಯೂ ಮಾಧ್ಯಮಗಳು ಗಮನ ಕೊಡಬೇಕು ಎಂದು ತಿಳಿಸಿದ್ದಾರೆ.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ' ದ 94ನೇ ದಿನವಾದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಎಲ್ಲ ಸಾಧಕ ಪತ್ರಕರ್ತರನ್ನು ಅಭಿನಂದಿಸಿದರು. -
ಚಿಕ್ಕಬಳ್ಳಾಪುರ, ನ.17: ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ, ಅಧ್ಯಾತ್ಮ ಜಗತ್ತಿನಲ್ಲಿ ತಮ್ಮದೇ ಆದ ಕೊಡುಗೆ ಕೊಟ್ಟಿರುವ ಪತ್ರಕರ್ತರಿಗೆ ಸೋಮವಾರ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ವಾಯ್ಸ್ ಆಫ್ ದಿ ಪೀಪಲ್ ಅವಾರ್ಡ್' ನೀಡಿ ಗೌರವಿಸಲಾಯಿತು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ' ದ 94ನೇ ದಿನವಾದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಅವರು ಎಲ್ಲ ಸಾಧಕ ಪತ್ರಕರ್ತರನ್ನು ಅಭಿನಂದಿಸಿದರು.
ಸಾಧಕ ಪತ್ರಕರ್ತರ ಆಯ್ಕೆಗಾಗಿ ಸಮಿತಿಯೊಂದನ್ನು ರೂಪಿಸಲಾಗಿತ್ತು. ಈ ಸಮಿತಿಯಲ್ಲಿ ಉತ್ತರಾಖಂಡ ಸರ್ಕಾರದ ಮಾಧ್ಯಮ ಸಲಹಾ ಸಮಿತಿ ಅಧ್ಯಕ್ಷ ಪ್ರೊ. ಗೋವಿಂದ್ ಸಿಂಗ್, 'ಸನ್ಮಾರ್ಗ್' ಹಿಂದಿ ದಿನಪತ್ರಿಕೆಯ ಉತ್ತರ ಭಾರತದ ಮುಖ್ಯಸ್ಥೆ ಸಂಜನಾ ಶರ್ಮಾ ಮತ್ತು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ (ಐಐಎಂಸಿ) ಸಂಸ್ಥೆಯಲ್ಲಿ ಭಾರತೀಯ ಭಾಷೆಗಳ ವಿಭಾಗದ ನಿರ್ದೇಶಕ ಡಾ. ರಾಕೇಶ್ ಉಪಾಧ್ಯಾಯ ಸದಸ್ಯರಾಗಿದ್ದರು. ಈ ಮೂವರನ್ನೂ ಸಮಾರಂಭದಲ್ಲಿ ಸದ್ಗುರುಗಳು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಮಾಧ್ಯಮಗಳಲ್ಲಿ ಉತ್ತಮ ಸುದ್ದಿಗಳ ಕೊರತೆ ಕಾಣಿಸುತ್ತಿದೆ. ಮಾಧ್ಯಮಗಳು ಸತ್ಯ ಹೇಳಬೇಕು ಎನ್ನುವುದರಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ ಜಗತ್ತಿನಲ್ಲಿ ಸಿಹಿ ಸತ್ಯಗಳೂ ಸಾಕಷ್ಟು ಇವೆ. ಅದರ ಕಡೆಯೂ ಮಾಧ್ಯಮಗಳು ಗಮನ ಕೊಡಬೇಕು ಎಂದು ಹೇಳಿದರು.
ನಮ್ಮ ಆಸ್ಪತ್ರೆಯ ಬಗ್ಗೆ ಜನರಿಗೆ ತಿಳಿಸುವಲ್ಲಿ ಮಾಧ್ಯಮಗಳ ಕೊಡುಗೆ ಬಹಳ ದೊಡ್ಡದು. ಮಾಧ್ಯಮಗಳು ಸಕ್ರಿಯ ಪಾತ್ರ ವಹಿಸಿದ್ದರಿಂದ ಕರ್ನಾಟಕದ ವಿವಿಧ ಜಿಲ್ಲೆಗಳು, ಪಕ್ಕದ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಹಲವು ರೋಗಿಗಳು ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಳ್ಳೆಯ ವಿಚಾರಗಳು ಹರಡಲು ಮಾಧ್ಯಮಗಳ ಪಾತ್ರ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಹತ್ತು ಜನರ ಬದುಕಿಗೆ ನೆಮ್ಮದಿ ಕೊಡುವ ಯಾವುದೇ ಕೆಲಸ ಮಹತ್ತರವಾದುದು. ಧ್ವನಿಯಿಲ್ಲದವರಿಗೆ ಧ್ವನಿಯಾಗಿ, ಮುಖವಿಲ್ಲದವರಿಗೆ ಮುಖವಾಗಿ, ಹೆಸರು ಇಲ್ಲದವರಿಗೆ ಹೆಸರಾಗಿ ಅಸಹಾಯಕರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಪ್ರತಿನಿಧಿಸುವ ಮಾಧ್ಯಮಗಳ ಪ್ರಯತ್ನವು ನಮ್ಮ ದೇಶ ಮತ್ತು ಜಗತ್ತಿನಲ್ಲಿ ಮುಂದುವರಿಯಬೇಕು. ನಾವು ನಗಬೇಕು, ನಮ್ಮ ಕಾರಣಕ್ಕೆ ಇನ್ನೊಬ್ಬರ ಮುಖದಲ್ಲಿಯೂ ನಗು ಮೂಡುವಂತೆ ನಮ್ಮ ಬದುಕು ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವಾಯ್ಸ್ ಆಫ್ ದಿ ಪೀಪಲ್ ಅವಾರ್ಡ್ ಪುರಸ್ಕೃತರ ವಿವರ
'ಮೀಡಿಯಾ ಅಂಡ್ ಜರ್ನಲಿಸಮ್ ಎಕ್ಸಲೆನ್ಸ್' (ಮಾಧ್ಯಮ ಮತ್ತು ಪತ್ರಿಕೋದ್ಯಮ) ವಿಭಾಗದಲ್ಲಿ 'ಸಿಎನ್ಎನ್-ನ್ಯೂಸ್ 18'ನ ಹಿರಿಯ ನಿರೂಪಕ ಆನಂದ್ ನರಸಿಂಹನ್, ಟಿವಿ9 ಭರತ್ ವರ್ಷ್ ಮಾಧ್ಯಮ ಸಂಸ್ಥೆಯ ನಿರ್ದೇಶಕ ಹೇಮಂತ್ ಶರ್ಮಾ, ಇಂಡಿಯಾ ಟಿವಿಯ ಸಹ ಸಂಪಾದಕಿ ವಿಜಯಲಕ್ಷ್ಮಿ, ಹಿರಿಯ ಪತ್ರಕರ್ತರಾದ ಜೀತೇಂದ್ರ ತಿವಾರಿ, 'ಲಿಟರರಿ ಅಂಡ್ ಅಡ್ವೊಕಸಿ ಇಂಪ್ಯಾಕ್ಟ್' ವಿಭಾಗದಲ್ಲಿ ಖ್ಯಾತ ವಾಯ್ಸ್ ಓವರ್ ಆರ್ಟಿಸ್ಟ್ ಹರೀಶ್ ಭೀಮಾನಿ, ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಶೈಲಜಾ ಸಿಂಗ್, 'ಕಲ್ಚರಲ್ ಪ್ರಿಸರ್ವೇಷನ್ ಅಂಡ್ ಪ್ರಮೋಷನ್' ವಿಭಾಗದಲ್ಲಿ 'ಟೈಮ್ಸ್ ಆಫ್ ಇಂಡಿಯಾ' ದ ಮಾಜಿ ಸಹ ಸಂಪಾದಕಿ ನಾರಾಯಣಿ ಗಣೇಶ್ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ವಾಯ್ಸ್ ಆಫ್ ದಿ ಪೀಪಲ್ ಅವಾರ್ಡ್' ನೀಡಿ ಗೌರವಿಸಿದರು.
ಲಿಟ್ರರಿ ಅಂಡ್ ಅಡ್ವಕಸಿ ಇಂಪ್ಯಾಕ್ಟ್ ವಿಭಾಗದಲ್ಲಿ ರಸ್ಕಿನ್ ಬಾಂಡ್, ಡಾ ವಿಕ್ರಮ್ ಸಂಪತ್, ಅಮಿಶ್ ತ್ರಿಪಾಠಿ ಅವರಿಗೂ ಒಂದು ಜಗತ್ತು ಒಂದು ಕುಟುಂಬ 'ವಾಯ್ಸ್ ಆಫ್ ದಿ ಪೀಪಲ್ ಅವಾರ್ಡ್ ಪುರಸ್ಕಾರ' ಘೋಷಿಸಲಾಯಿತು.
ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ
ಅನ್ನಪೂರ್ಣ ಟ್ರಸ್ಟ್‌ಗೆ ಬೆಂಬಲ ನೀಡುತ್ತಿರುವ 'ಜೋಹೊ ಕಾರ್ಪೊರೇಷನ್' ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಕಾರ್ಯತಂತ್ರ ಪಾಲುದಾರಿಕೆ ವಿಭಾಗದ ಮುಖ್ಯಸ್ಥ ಬಿಷನ್ ಸಿಂಗ್ ಪ್ರಶಸ್ತಿ ಸ್ವೀಕರಿಸಿದರು. ಅನ್ನಪೂರ್ಣ ಬೆಳಿಗ್ಗಿನ ಪೌಷ್ಟಿಕ ಆಹಾರ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿರುವ ಏರ್ ಇಂಡಿಯಾ ಸ್ಯಾಟ್ಸ್ (ಎಐಸ್ಯಾಟ್ಸ್) ಕಂಪನಿಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಪ್ರತಿನಿಧಿಗಳಾದ ಸತೀಸ್ ಬಾಬು ಮತ್ತು ತಮ್ಮಯ್ಯ ಅವರು ಪ್ರಶಸ್ತಿ ಸ್ವೀಕರಿಸಿದರು.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ: ಶ್ರೀ ಮಧುಸೂದನ ಸಾಯಿ
'ಈಚ್ ಒನ್ ಎಜುಕೇಚ್ ಒನ್' ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿರುವ ಎಪೊಟೆಕ್ಸ್ ಫಾರ್ಮಾಕೆಮ್ ಇಂಡಿಯಾ ಕಂಪನಿಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಕಾರ್ಯದರ್ಶಿ ಇಂದ್ರಾಜ್ಯೋತಿ ಬೋಸ್ ಮತ್ತು ತಾಂತ್ರಿಕ ಸೇವೆಗಳ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ ಪ್ರಶಸ್ತಿ ಸ್ವೀಕರಿಸಿದರು.