ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗಿಲ್ಲ ಶೂ, ಸಾಕ್ಸ್, ನೋಟ್‌ಬುಕ್ಸ್; ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ
Chikkaballapur News: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ನೋಟ್‌ಬುಕ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ವಿತರಿಸಬೇಕು ಎಂದು ಆಗ್ರಹಿಸಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಓ) ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಎಐಡಿಎಸ್ಓ ವತಿಯಿಂದ ಬಿಇಒಗೆ ಮನವಿ ಪತ್ರ. -
ಚಿಕ್ಕಬಳ್ಳಾಪುರ, ಜು.31: ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದಿದ್ದರೂ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ನೋಟ್‌ಬುಕ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳು ಇನ್ನೂ ದೊರೆತಿಲ್ಲ ಎಂದು ಆರೋಪಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಓ) ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ನಗರದ ಡಿಡಿಪಿಐ ಕಚೇರಿ ಆವರಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಗೆ ತೆರಳಿದ ಸಂಘಟನೆಗಳ ಮುಖಂಡರು, ಬಿಇಒ ಶಾಂತಲಾ ಅವರಿಗೆ ಮನವಿ ಪತ್ರ ಸಲ್ಲಿಸಿ, ವಿದ್ಯಾರ್ಥಿಗಳಿಗೆ ಬಾಕಿ ಉಳಿದಿರುವ ಎಲ್ಲ ಸೌಲಭ್ಯಗಳನ್ನು ತಕ್ಷಣ ಒದಗಿಸುವಂತೆ ಒತ್ತಾಯಿಸಿದರು.
ಬಳಿಕ ಮಾತನಾಡಿದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಅಧ್ಯಕ್ಷ ಆನಂದ್ ಬಿ.ವಿ. ಹಾಗೂ ಎಐಡಿಎಸ್ಓ ಜಿಲ್ಲಾ ಸಂಚಾಲಕಿ ತುಳಸಿ, ಈ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರವೇ ನೋಟ್‌ಬುಕ್ ವಿತರಿಸುವುದಾಗಿ ಘೋಷಿಸಿದ್ದರೂ, ಇದುವರೆಗೆ ಶಾಲೆಗಳಿಗೆ ತಲುಪಿಲ್ಲ. ಶೂ ಮತ್ತು ಸಾಕ್ಸ್ ವಿತರಣೆಯೂ ವಿಳಂಬವಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಿತರಿಸಲಾಗುತ್ತಿರುವ ಮೊಟ್ಟೆ ಮತ್ತು ಬಾಳೆಹಣ್ಣಿಗೆ ಸರ್ಕಾರ ನಿಗದಿಪಡಿಸಿರುವ ಅನುದಾನ ಮಾರುಕಟ್ಟೆ ದರಕ್ಕಿಂತ ಕಡಿಮೆಯಿರುವುದರಿಂದ, ಹೆಚ್ಚುವರಿ ವೆಚ್ಚವನ್ನು ಶಿಕ್ಷಕರೇ ಭರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಶಿಕ್ಷಣ ಇಲಾಖೆಗೆ ಇನ್ನೂ ಪೂರ್ಣ ಪ್ರಮಾಣದ ಸಚಿವರ ನೇಮಕವಾಗದಿರುವುದು ಈ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಟೀಕಿಸಿದ ಅವರು, ಬಡವರು, ರೈತರು ಮತ್ತು ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಬಾರದು ಎಂದು ಆಗ್ರಹಿಸಿದರು.
ಆಧಾರ್ ದೃಢೀಕರಣ ವ್ಯವಸ್ಥೆಯ ಭದ್ರತೆ ಮತ್ತಷ್ಟು ಬಲಪಡಿಸಲು ಎಚ್‌ಎಸ್‌ಎಂ ಉನ್ನತೀಕರಣ: ಪ್ರಿಯಾಂಕ್ ಖರ್ಗೆ
ಕೂಡಲೇ ಶಿಕ್ಷಣ ಸಚಿವರನ್ನು ನೇಮಿಸಿ, ಶೂ, ಸಾಕ್ಸ್, ನೋಟ್‌ಬುಕ್ ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ತುರ್ತಾಗಿ ವಿತರಿಸಬೇಕು. ಜತೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ನೀಡುತ್ತಿರುವ ಅನುದಾನವನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.