S N Subbareddy: ಸಾಮೂಹಿಕ ವಿವಾಹದಲ್ಲಿ ಸರಳತೆಗೆ ಹೊಸ ಭಾಷ್ಯ ಬರೆದ ಶಾಸಕ ಸುಬ್ಬಾರೆಡ್ಡಿ
ಸಾಮೂಹಿಕ ವಿವಾಹದಲ್ಲಿ ಕ್ಷೇತ್ರದ ವಿವಿಧೆಡೆಯಿಂದ ಆಗಮಿಸಿದ್ದ 135 ಜೋಡಿಗಳು ಸಂಪ್ರದಾಯ ಬದ್ಧವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧು-ವರರಿಗೆ ಮದುವೆ ವಸ್ತ್ರ, ತಾಳಿ ಹಾಗೂ ಕಾಲುಂಗುರ ಗಳನ್ನು ನೀಡಲಾಯಿತು. ಇದರೊಂದಿಗೆ ಪ್ರತಿ ನವದಂಪತಿಗೂ ಸುಮಾರು 50 ಸಾವಿರ ಮೌಲ್ಯದ ಸೀಮೆಹಸುವನ್ನು ಉಡುಗೊರೆಯಾಗಿ ನೀಡಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
-
ಚಿಕ್ಕಬಳ್ಳಾಪುರ/ಬಾಗೇಪಲ್ಲಿ : ಮದುವೆ ಎಂದರೆ ದುಂದು ವೆಚ್ಚ, ಆಡಂಬರ ಹಾಗೂ ಸಾಲದ ಹೊರೆ ಎಂಬ ಕಲ್ಪನೆಗೆ ಬದಲಾಗಿ ಸರಳ ವಿವಾಹಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಾಗೇಪಲ್ಲಿ ಯಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವ ವಿಶೇಷಗಳ ಕಾರಣ ರಾಜ್ಯದ ಗಮನ ಸೆಳೆದಿದೆ.
ಪಟ್ಟಣದ ಗಡಿದಂ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ಎಸ್.ಎನ್. ಸುಬ್ಬಾರೆಡ್ಡಿ ಚಾರಿಟೇಬಲ್ ಟ್ರಸ್ಟ್, ಚಿನ್ನಕಾಯಲಪಲ್ಲಿ ವತಿಯಿಂದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(MLA S N Subbareddy) ನೇತೃತ್ವದಲ್ಲಿ 23ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಸಾವಿರಾರು ಜನರ ಸಾಕ್ಷಿಯಲ್ಲಿ ಅದ್ಧೂರಿಯಾಗಿ ನಡೆಯಿತು.
ಸಾಮೂಹಿಕ ವಿವಾಹದಲ್ಲಿ ಕ್ಷೇತ್ರದ ವಿವಿಧೆಡೆಯಿಂದ ಆಗಮಿಸಿದ್ದ 135 ಜೋಡಿಗಳು ಸಂಪ್ರದಾಯ ಬದ್ಧವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧು-ವರರಿಗೆ ಮದುವೆ ವಸ್ತ್ರ, ತಾಳಿ ಹಾಗೂ ಕಾಲುಂಗುರಗಳನ್ನು ನೀಡಲಾಯಿತು. ಇದರೊಂದಿಗೆ ಪ್ರತಿ ನವದಂಪತಿಗೂ ಸುಮಾರು 50 ಸಾವಿರ ಮೌಲ್ಯದ ಸೀಮೆಹಸುವನ್ನು ಉಡುಗೊರೆಯಾಗಿ ನೀಡಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಇದನ್ನೂ ಓದಿ: S N Subbareddy: ಶೀಘ್ರದಲ್ಲೇ ಎಲ್ಲಾ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ: ಶಾಸಕ ಸುಬ್ಬಾರೆಡ್ಡಿ
ಕಳೆದ 23 ವರ್ಷಗಳಿಂದ ಕೇವಲ ಸಾಮೂಹಿಕ ಮದುವೆ ಸಮಾರಂಭಕ್ಕೆ ಮಾತ್ರ ಈ ಕಾರ್ಯಕ್ರಮ ಸೀಮಿತವಾಗದೆ, ನವದಂಪತಿಗಳ ಬದುಕು ಹಸನಾಗಲಿ, ಅವರ ಮುಂದಿನ ಜೀವನ ಹಸುವಿನ ಹಾಲಿನಂತೆ ಸಂತೋಷದಿಂದಿರಲಿ ಎಂಬ ಉದ್ದೇಶದಿಂದ ಹಸು ನೀಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹೈನುಗಾರಿಕೆ ಮೂಲಕ ಜಿಲ್ಲೆಯ ಕೀರ್ತಿಯನ್ನು ಬೆಳಗಿರುವ ರೈತಾಪಿಗಳ ಸಾಲಿಗೆ ಇವರೂ ಸೇರಲಿ ಎಂಬ ಸದುದ್ದೇಶದಿಂದ ಈ ಪ್ರಯತ್ನವನ್ನು ಸರಳ ವಿವಾಹದ ಜೊತೆಗೆ ಬೆಸೆದಿರುವುದು ಶಾಸಕ ರೊಬ್ಬರ ಸಾಮಾಜಿಕ ಕಳಕಳಿಯ ಬಹುದೊಡ್ಡ ಮಾದರಿಯಂತಿದೆ.
ಈ ಬಗ್ಗೆ ಮಾತನಾಡಿರುವ ಶಾಸಕ ಸುಬ್ಬಾರೆಡ್ಡಿ ಮದುವೆ ವಿಚಾರದಲ್ಲಿ ಪೋಷಕರು ಅನಗತ್ಯ ಆಡಂಬರಕ್ಕೆ ಜೋತುಬಿದ್ದು ಸಾಲದ ಸುಳಿಗೆ ಸಿಲುಕಿ ಜೀವನ ಪೂರಾ ಅದೇ ಕಹಿನೆನಪಲ್ಲಿ ಕೊರಗು ವವರನ್ನು ಕಂಡಿದ್ದೇನೆ. ಇದರ ಬದಲು ಇಂತಹ ಸರಳ ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವ ಮೂಲಕ ಮದುವೆಗೆ ವ್ಯಯಿಸುವ ಹಣವನ್ನು ನೆಮ್ಮದಿಯ ಜೀವನಕ್ಕೆ ಬಳಸಿಕೊಂಡು ಬದುಕು ಕಟ್ಟಿಕೊಳ್ಳಲಿ ಎಂಬುದೇ ನನ್ನ ಆಸೆ.
ಇದಕ್ಕಾಗಿಯೇ, 23 ವರ್ಷಗಳಿಂದ ಸರಳ ಸಾಮೂಹಿಕ ವಿವಾಹ ನಡೆಸುತ್ತಾ ಬರಲಾಗಿದೆ ಮೊದ ಮೊದಲು ಮದುವೆ ಮಾತ್ರ ಮಾಡಲಾಗುತ್ತಿತ್ತು ನಂತರದಲ್ಲಿ ನವದಂಪತಿಗಳ ಭವಿಷ್ಯಕ್ಕೆ ಆಧಾರ ವಾಗುವ ರೀತಿಯಲ್ಲಿ ಹಸುವನ್ನು ಉಡುಗೊರೆಯಾಗಿ ನೀಡುತ್ತಾ ಬರಲಾಗಿದೆ. ನಾವು ಕೊಡುವ ಹಸುವನ್ನು ದಯವಿಟ್ಟು ಮಾರಬೇಡಿ ಎಂದು ಮನವಿ ಮಾಡುತ್ತಾರೆ.
ಹೀಗೆ ಬಾಗೇಪಲ್ಲಿಯ ಸಾಮೂಹಿಕ ವಿವಾಹ ಮಹೋತ್ಸವವು ಹಸುವನ್ನು ಉಡುಗೊರೆಯಾಗಿ ನೀಡುವ ಮೂಲಕ ಶ್ರೀನಿವಾಸ ಕಲ್ಯಾಣಕ್ಕಿಂತಲೂ ಸಾರ್ಥಕತೆ ಮರೆದಿದೆ ಎಂಬುದು ನಾಗರೀಕರ ಅಭಿಪ್ರಾಯವಾಗಿದೆ.
ಕಾರ್ಯಕ್ರಮದಲ್ಲಿ ಮಂಗಳನಾಥ ಸ್ವಾಮೀಜಿ, ಸಚಿವ ಕೆ.ಹೆಚ್.ಮುನಿಯಪ್ಪ(K H Muniyappa), ಬಮೂಲ್ ಅಧ್ಯಕ್ಷರು ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್(D K Suresh), ಬಂಗಾರಪೇಟೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(S N Subbareddy), ಮಾಜಿ ಸಚಿವ ಶಿವಶಂಕರ್‌ರೆಡ್ಡಿ ಸೇರಿ ಗಣ್ಯರು, ಮುಖಂಡರು, ಟ್ರಸ್ಟ್ ಪದಾಧಿಕಾರಿಗಳು, ನವದಂಪತಿಗಳ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.