ಸರಕಾರಿ ಶಾಲೆಗಳ ಬಲವರ್ಧನೆಗೆ ಬೇಕಿದೆ ಶಾಸಕರು ಸಚಿವರು ಸಂಸದರೆಂಬ ಜನಪ್ರತಿನಿಧಿಗಳ ಉದಾರ ನೆರವು
ಕಾಲ ಬದಲಾದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯ ನಡುವೆ ಹಲವಾರು ಸರ್ಕಾರಿ ಶಾಲೆಗಳು ತಮ್ಮ ಶತಮಾನ ಕ್ಕೂ ಮೀರಿದ ಇತಿಹಾಸದ ಹಿರಿಮೆಯನ್ನು ಹೊತ್ತು ಸಾಗಿರುವುದು ಸಾಮಾನ್ಯ ಸಂಗತಿಯಲ್ಲ. ಅಂತಹ ಐತಿಹಾಸಿಕ ಸಾಧನೆಗೆ ಗುರಿಯಾದ ಸರ್ಕಾರಿ ಶಾಲೆಗಳಿಗೆ ಗೌರವ ಸಲ್ಲಿಸಲು ಚಿಕ್ಕಬಳ್ಳಾ ಪುರ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.
-
50, 100 ಮತ್ತು 150 ವರ್ಷ ಪೂರೈಸಿರುವ-738 ಶಾಲೆಗಳ ಐತಿಹಾಸಿಕ ಸಾಧನೆಗೆ ಬೇಕಿದೆ ಪ್ರೋತ್ಸಾಹ
ಮುನಿರಾಜು ಎಂ. ಅರಿಕೆರೆ
ಚಿಕ್ಕಬಳ್ಳಾಪುರ: ಪ್ರಸ್ತುತ ಶಿಕ್ಷಣ ಎಂಬುದು ಉಳ್ಳವರ ಸ್ವತ್ತಾಗುತ್ತಾ ವಾಣಿಜ್ಯೀಕರಣ ವಾಗಿರುವ ಹೊತ್ತಿನಲ್ಲಿ ಕಾಯಕವೇ ಕೈಲಾಸ ಎಂಬಂತೆ ಜಿಲ್ಲೆಯ ನೂರಾರು ಸರ್ಕಾರಿ ಶಾಲೆಗಳು 50100, 150 ವರ್ಷಗಳಿಗೂ ಮೀರಿದ ಇತಿಹಾಸ ಹೊತ್ತು ಹಳ್ಳಿ, ನಗರ, ಪಟ್ಟಣ ಎನ್ನದೆ ಸರ್ವರಿಗೂ ಸಮವಾದ ಶಿಕ್ಷಣದ ನೀಡುತ್ತಿರುವುದು ಸಾಮಾನ್ಯ ಮಾತಲ್ಲ.
ಗುಣಾತ್ಮಕ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಸಾರ್ಥಕ ಇತಿಹಾಸ ಬರೆದಿರುವ 738 ಸರ್ಕಾರಿ ಶಾಲೆಗಳ ಸಾಧನೆಯನ್ನು ಜಗತ್ತಿಗೆ ಸಾರಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ವಿಚಾರವಾಗಿದೆ.
ಹೌದು ಜಿಲ್ಲೆಯಲ್ಲಿ 848 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 512 ಹಿರಿಯ ಪ್ರಾಥಮಿಕ ಶಾಲೆಗಳು, ಮತ್ತು 111 ಪ್ರೌಢಶಾಲೆ ಸೇರಿ ಒಟ್ಟು 1471 ಸರಕಾರಿ ಶಾಲೆಗಳಿವೆ.
ಇದನ್ನೂ ಓದಿ: Chikkaballapur News: ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ್ ಆಯ್ಕೆ
ಈ ಪೈಕಿ 738 ಶಾಲೆಗಳು 50 ವರ್ಷ, 100 ವರ್ಷ ಮತ್ತು 150ರಿಂದ 195ಕ್ಕೂ ಹೆಚ್ಚು ಸಾರ್ಥಕ ವಸಂತಗಳನ್ನು ಪೂರೈಸಿದ ಹಿರಿಮೆಗೆ ಪಾತ್ರವಾಗಿವೆ.ಇಂತಹ ಶಾಲೆಗಳ ಕಡೆ ಬೆಳಕು ಚೆಲ್ಲುವುದು ಈ ವರದಿಯ ಉದ್ದೇಶವಾಗಿದೆ.
ಕಾಲ ಬದಲಾದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯ ನಡುವೆ ಹಲವಾರು ಸರ್ಕಾರಿ ಶಾಲೆಗಳು ತಮ್ಮ ಶತಮಾನ ಕ್ಕೂ ಮೀರಿದ ಇತಿಹಾಸದ ಹಿರಿಮೆಯನ್ನು ಹೊತ್ತು ಸಾಗಿರುವುದು ಸಾಮಾನ್ಯ ಸಂಗತಿ ಯಲ್ಲ. ಅಂತಹ ಐತಿಹಾಸಿಕ ಸಾಧನೆಗೆ ಗುರಿಯಾದ ಸರ್ಕಾರಿ ಶಾಲೆಗಳಿಗೆ ಗೌರವ ಸಲ್ಲಿಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಇದಕ್ಕೆ ಶಾಸಕರು,ಸಚಿವರು ಸಂಸದರೇ ಮೊದಲಾಗಿ ಎಲ್ಲಾ ಜನಪ್ರತಿನಿಧಿ ಗಳು ಕೈಜೋಡಿಸಬೇಕಿರುವುದು ಅವರವರ ಕರ್ತವ್ಯ ಎಂದರೆ ತಪ್ಪಾಗ ಲಾರದು.
ಅದೇ ರೀತಿ, ಗುಡಿಬಂಡೆ ತಾಲೂಕಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 1864ರಲ್ಲಿ ಆರಂಭವಾಗಿ 162 ವರ್ಷಗಳನ್ನು ಪೂರೈಸಿದೆ. ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1837ರಲ್ಲಿ ಆರಂಭವಾಗಿ ಸುಮಾರು 188 ವರ್ಷಗಳ ಇತಿಹಾಸವನ್ನು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದೆ. ಚಿಂತಾಮಣಿ, ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ 150 ವರ್ಷ ಮೀರಿದ ಶಾಲೆ ಗಳಿಲ್ಲ ಎಂಬುದು ಗಮನಾರ್ಹ ಸಂಗತಿ.
ಈ ಐತಿಹಾಸಿಕ ಶಾಲೆಗಳ ಸಾಧನೆಯನ್ನು ನಾಗರೀಕರು, ಸಂಘಸಂಸ್ಥೆಗಳು, ಎಲ್ಲಾ ಜನಪ್ರತಿ ನಿಧಿಗಳ ಸಹಯೋಗದಲ್ಲಿ ಸಂಭ್ರಮಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ. ಇದರ ಜನತೆ ಜಿಲ್ಲಾಡಳಿತ, ಶಾಲಾ ಶಿಕ್ಷಣ ಉಪನಿರ್ದೇಶಕರ ಕಚೇರಿ ಹಾಗೂ ಎಎಸ್‌ಡಿಎಂಸಿಗಳ ಸಹಕಾರದಲ್ಲಿ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಗೊಳಿಸಲು ಸಂಕಲ್ಪ ಕೈಗೊಳ್ಳಲಾಗಿದ್ದು ಎಲ್ಲರ ಸಹಕಾರ ಪಡೆದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಿ, ಶಿಕ್ಷಣ ಸಚಿವರ ಸಹಕಾರವನ್ನೂ ಪಡೆಯಲಿ ಆಮೂಲಕ ಶಾಲೆಗಳ ಬಲವರ್ಧ ನೆಗೆ ಮುನ್ನುಡಿ ಬರೆಯಲಿ ಎಂಬುದು ಪತ್ರಿಕೆಯ ಕಳಕಳಿ ಮತ್ತು ಕಾಳಜಿಯಾಗಿದೆ.
ಖಾಸಗಿ ಶಾಲೆಗಳ ಅಬ್ಬರ ಹೆಚ್ಚುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಆದರೆ ಶತಮಾನಗಳ ಪರಂಪರೆ ಹೊಂದಿರುವ ಸರ್ಕಾರಿ ಶಾಲೆಗಳ ಸಾಧನೆಯನ್ನು ಸಮಾಜದ ಮುಂದೆ ಅನಾವರಣಗೊಳಿಸುವ ಮೂಲಕ ಪೋಷಕರಲ್ಲಿ ವಿಶ್ವಾಸ ಹೆಚ್ಚಿಸಿ, ಸರ್ಕಾರಿ ಶಾಲೆಗಳ ಬಗ್ಗೆ ಸಕಾರಾತ್ಮಕ ಮನೋಭಾವ ಮೂಡಿಸಲು ಸಾಧ್ಯವಾಗಲಿದೆ ಎಂಬುದು ಹಳೆಯ ವಿದ್ಯಾರ್ಥಿಗಳ ಹಂಬಲವಾಗಿದೆ.
ಇದು ಕೇವಲ ಸಂಭ್ರಮದ ಕಾರ್ಯಕ್ರಮ ಮಾತ್ರವಲ್ಲ. ಬದಲಿಗೆ ಸರಕಾರಿ ಶಾಲೆಗಳು ಕೇವಲ ಶಿಕ್ಷಣವನ್ನಷ್ಟೇ ಅಲ್ಲ, ಹಲವು ತಲೆಮಾರುಗಳ ಕನಸು, ನೆನಪು ಮತ್ತು ಸಾಮಾಜಿಕ ಬದಲಾವಣೆಗೆ ಸಾಕ್ಷಿಯಾಗಿ ಈ ಶಾಲೆಗಳಿವೆ. ಅಂತಹ 738 ಶಾಲೆಗಳ ಸಾಧನೆಯ ಸಂಭ್ರಮ ವನ್ನು ಇಡೀ ಜಿಲ್ಲೆ ಒಗ್ಗೂಡಿ ಆಚರಿಸುವಂತಾಗಬೇಕಿದೆ. ಇದು ಆಗುವುದೋ ಇಲ್ಲವೋ ಎಂಬುದನ್ನು ಕಾಲವೇ ಉತ್ತರಿಸಲಿದೆ.
*
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 50 ರಿಂದ 2 ವರ್ಷ ಪೂರೈಸಿರುವ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಂಖ್ಯೆ ಒಟ್ಟು 738 ಇದೆ. 100 ರಿಂದ 149 ವರ್ಷ ಪೂರೈಸಿರುವ ಶಾಲೆಗಳ ಸಂಖ್ಯೆ 67 ಆಗಿದ್ದರೆ, 150 ವರ್ಷ ಹಾಗೂ ಅದಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಶಾಲೆಗಳು ಕೇವಲ ಮೂರು ಮಾತ್ರ ಇರುವುದೇ ವಿಶೇಷ.
*
ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಅತಿ ಹೆಚ್ಚು 187 ಶಾಲೆಗಳು 50 ರಿಂದ 99 ವರ್ಷಗಳ ಇತಿಹಾಸ ಹೊಂದಿದ್ದು ಮೊದಲ ಸ್ಥಾನದಲ್ಲಿದೆ. ಚಿಂತಾಮಣಿ ತಾಲೂಕಿನಲ್ಲಿ 137 ಹಾಗೂ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 126 ಶಾಲೆಗಳು ಈ ಪಟ್ಟಿಯಲ್ಲಿ ಸೇರಿವೆ. ಬಾಗೇಪಲ್ಲಿ ತಾಲೂಕಿನಲ್ಲಿ 123 ಮತ್ತು ಶಿಡ್ಲಘಟ್ಟದಲ್ಲಿ 113 ಶಾಲೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಗುಡಿಬಂಡೆ ತಾಲೂಕಿನಲ್ಲಿ 52 ಶಾಲೆಗಳು ಅರ್ಧಶತಮಾನದಿಂದ ಶತಮಾನದ ಗಡಿ ತಲುಪಿವೆ.
*
ಇನ್ನೂ 150 ವರ್ಷ ಹಾಗೂ ಅದಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಶಾಲೆಗಳ ಪೈಕಿ ಬಾಗೇಪಲ್ಲಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟಗಲ್ ಅತ್ಯಂತ ಹಳೆಯ ಶಾಲೆಯಾಗಿದೆ. 1831ರಲ್ಲಿ ಆರಂಭವಾದ ಈ ಶಾಲೆ ಇಂದಿಗೆ ಸುಮಾರು 195 ವರ್ಷಗಳ ಇತಿಹಾಸ ಹೊಂದಿದೆ.
![]()
50,100,150,200 ವರ್ಷಗಳ ಸನಿಹದಲ್ಲಿರುವ ಸರಕಾರಿ ಶಾಲೆಗಳ ಸಾಧನೆಯನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಸಾರ್ಥಕವಾದ ಕಾರ್ಯಕ್ರಮ ಮಾಡಲು ಶಾಲಾ ಶಿಕ್ಷಣ ಇಲಾಖೆ ನೀಲನಕ್ಷೆ ತಯಾರಿಸಿ ವಿಸ್ತೃತ ಯೋಜನೆ ರೂಪಿಸಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲಾ ತಾಲೂಕುಗಳ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು,ಹಳೇ ವಿದ್ಯಾರ್ಥಿಗಳು ಸ್ಥಳೀಯ ಸಂಸ್ಥೆಗಳ ಮುಖಂಡರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ. ಶತಮಾನಗಳ ಸಾಧನೆ ಮಾಡಿರುವ ಶಾಲೆಗಳ ಬಲವರ್ಧನೆ ಮಾಡುವುದೇ ಈ ಕಾರ್ಯಕ್ರಮದ ಹಿಂದಿನ ಉದ್ದೇಶವಾಗಿದೆ. ಶೀಘ್ರವೇ ಇದಕ್ಕೊಂದು ಸ್ಪಷ್ಟ ಆಕಾರ ನೀಡಲಾಗುವುದು.
-ಎ.ರಮೇಶ್. ಉಪನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿಕ್ಕಬಳ್ಳಾಪುರ.