ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀರಾವರಿ ಯೋಜನೆಗಳ ಭರವಸೆ, ಕೃಷಿಯ ಸಾಮರ್ಥ್ಯಕ್ಕೆ ಕೈಗಾರಿಕೆಯ ಕೊರತೆ; ಮೂಲಸೌಕರ್ಯಕ್ಕೆ ಕಾಯಕಲ್ಪದ ನಿರೀಕ್ಷೆ

ಬೆಂಗಳೂರು ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಜಿಲ್ಲೆಗೆ ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಸಂಸ್ಕರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ. ಆದರೆ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕಾರ್ಯಕ್ಕೆ ಇನ್ನಷ್ಟು ವೇಗದ ಅಗತ್ಯವಿದೆ.

ಚಿಕ್ಕಬಳ್ಳಾಪುರಕ್ಕೆ 20ರ ಹರೆಯ; ಅಭಿವೃದ್ಧಿಯ ದಾಹ ಇನ್ನೂ ನೀಗಿಲ್ಲ!

-

Profile
Ashok Nayak Aug 24, 2026 7:01 AM

ಮುನಿರಾಜು ಎಂ. ಅರಿಕೆರೆ

ಚಿಕ್ಕಬಳ್ಳಾಪುರ: ಅಖಂಡ ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ರಾಜ್ಯದ 30ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಚಿಕ್ಕಬಳ್ಳಾಪುರ ಜಿಲ್ಲೆ ಆಗಸ್ಟ್ 23ರಂದು 19 ವರ್ಷಗಳನ್ನು ಪೂರೈಸಿ 20ನೇ ವರ್ಷಕ್ಕೆ ಕಾಲಿಟ್ಟಿದೆ. ಎರಡು ದಶಕಗಳ ಪಯಣದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ಸೇರಿ ದಂತೆ ಹಲವು ಕ್ಷೇತ್ರಗಳಲ್ಲಿ ಜಿಲ್ಲೆ ಹೆಜ್ಜೆ ಇಟ್ಟಿದೆ. ಆದರೂ ತನ್ನ ಸಾಮರ್ಥ್ಯಕ್ಕೆ ತಕ್ಕ ಅಭಿವೃದ್ಧಿಯ ವೇಗವನ್ನು ಪಡೆಯಲು ಇನ್ನೂ ಹಲವು ಅಡೆತಡೆಗಳನ್ನು ದಾಟಬೇಕಿದೆ.

ಬೆಂಗಳೂರು ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಜಿಲ್ಲೆಗೆ ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಸಂಸ್ಕರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ. ಆದರೆ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕಾರ್ಯಕ್ಕೆ ಇನ್ನಷ್ಟು ವೇಗದ ಅಗತ್ಯವಿದೆ.

ನೀರಿಗಾಗಿ ಎರಡು ದಶಕಗಳ ನಿರೀಕ್ಷೆ

ಬಯಲುಸೀಮೆಯ ಜಿಲ್ಲೆಯಾದ ಚಿಕ್ಕಬಳ್ಳಾಪುರಕ್ಕೆ ನದಿ–ನಾಲೆಗಳಿಲ್ಲ. ಮಳೆಯನ್ನೇ ಅವಲಂಬಿ ಸಿರುವ ಜಿಲ್ಲೆಯ ಜನರಿಗೆ ಶಾಶ್ವತ ನೀರಾವರಿ ಮತ್ತು ಶುದ್ಧ ಕುಡಿಯುವ ನೀರು ಇಂದಿಗೂ ದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ: Chikkaballapur News: ಪಾಲಿಹೌಸ್‌ಗಳಿಗೆ ಭೇಟಿ ನೀಡಿ ಕೃಷಿ ಯೋಜನೆಗಳ ಪ್ರಗತಿ ಪರಿಶೀಲನೆ

ಬರಪೀಡಿತ ಜಿಲ್ಲೆಯ ಜನರ ನೀರಿನ ದಾಹ ನೀಗಿಸುವ ಉದ್ದೇಶದಿಂದ ರೂಪಿಸಲಾದ ಎತ್ತಿನಹೊಳೆ ಯೋಜನೆಯ ಯೋಜನಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಇದೀಗ 25 ಸಾವಿರ ಕೋಟಿ ರೂಪಾಯಿಗಳ ಮಟ್ಟ ತಲುಪಿದೆ ಎಂಬುದು ಚರ್ಚೆಯ ವಿಷಯವಾಗಿದೆ. 

ಆದರೆ ವೆಚ್ಚದ ಏರಿಕೆಗೆ ತಕ್ಕಂತೆ ಜಿಲ್ಲೆಯ ಜನರಿಗೆ ಶುದ್ಧ ನೀರಿನ ಖಾತರಿ ದೊರೆತಿಲ್ಲ ಎಂಬ ಅಸಮಾಧಾನವಿದೆ. ಯೋಜನೆ ಯಾವಾಗ ಪೂರ್ಣಗೊಳ್ಳುವುದೋ  ಜಿಲ್ಲೆಯ ಪಾಲಿನ ನೀರು ಯಾವಾಗ ಬರುವುದು ಕಾಲವೇ ಹೇಳಬೇಕಿದೆ.

ಇನ್ನು ಎಚ್‌.ಎನ್‌. ವ್ಯಾಲಿ ಯೋಜನೆಯಡಿ ಎರಡು ಹಂತದಲ್ಲಿ ಶುದ್ಧೀಕರಿಸಿದ ನೀರನ್ನೇ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಗೆ ಹರಿಸಲು ಸಾಧ್ಯವಾಗಿಲ್ಲ. ತ್ಯಾಜ್ಯ ನೀರಿನ ಮೂರನೇ ಹಂತದ ಶುದ್ಧೀಕರಣದ ಬೇಡಿಕೆಯೂ ವರ್ಷಗಳಿಂದ ಈಡೇರಿಲ್ಲ. 

ಈ ನಡುವೆ ನೀರಿನ ಗುಣಮಟ್ಟದ ಬಗ್ಗೆ ಸಾರ್ವಜನಿಕರ ಆತಂಕ ನಿವಾರಿಸಿ, ವೈಜ್ಞಾನಿಕ ಶುದ್ಧೀಕರಣ ದೊಂದಿಗೆ ಯೋಜನೆಯ ಪೂರ್ಣ ಪ್ರಯೋಜನ ಜಿಲ್ಲೆಯ ಕೆರೆಗಳಿಗೆ ದೊರೆಯುವಂತೆ ಮಾಡಬೇಕಿದೆ.

ನೀರಾವರಿ ಯೋಜನೆಗಳ ಜೊತೆಗೆ ಜಿಲ್ಲೆಯ ಕೆರೆಗಳ ಪುನಶ್ಚೇತನಕ್ಕೂ ಆದ್ಯತೆ ಬೇಕು. ಒತ್ತುವರಿ ತೆರವು, ಹೂಳು ತೆಗೆಯುವುದು, ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಮಳೆನೀರನ್ನು ಸಮರ್ಪಕವಾಗಿ ಸಂಗ್ರಹಿಸುವ ವ್ಯವಸ್ಥೆ ರೂಪಿಸಿದರೆ ಅಂತರ್ಜಲ ಸಂರಕ್ಷಣೆಗೆ ಶಾಶ್ವತ ನೆಲೆ ಸಿಗಲಿದೆ.

ಕೃಷಿಯಿದೆ; ಮೌಲ್ಯವರ್ಧನೆಗೆ ಕೈಗಾರಿಕೆಗಳಿಲ್ಲ

ಹೂವು, ಹಣ್ಣು, ಹಾಲು ಮತ್ತು ರೇಷ್ಮೆ ಉತ್ಪಾದನೆಯಲ್ಲಿ ಜಿಲ್ಲೆ ಪ್ರಮುಖ ಸ್ಥಾನದಲ್ಲಿದೆ. ದ್ರಾಕ್ಷಿ, ಟೊಮೆಟೊ, ಮಾವು, ಆಲೂಗಡ್ಡೆ, ದಾಳಿಂಬೆ, ಗೋಡಂಬಿ ಸೇರಿದಂತೆ ವೈವಿಧ್ಯಮಯ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಹನಿ ನೀರಾವರಿ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನವನ್ನು ಬಳಸುವ ಸಾವಿರಾರು ಪ್ರಗತಿಪರ ರೈತರು ಜಿಲ್ಲೆಯಲ್ಲಿದ್ದಾರೆ.

ಇಷ್ಟೊಂದು ಕೃಷಿ ಸಾಮರ್ಥ್ಯವಿದ್ದರೂ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಕೈಗಾರಿಕೆಗಳು ಇಲ್ಲದಿರುವುದು ದೊಡ್ಡ ಕೊರತೆ. ದ್ರಾಕ್ಷಿ, ಟೊಮೆಟೊ, ಮಾವು, ಆಲೂಗಡ್ಡೆ, ದಾಳಿಂಬೆ, ಗೋಡಂಬಿ ಹಾಗೂ ಹೂವಿನ ಕೃಷಿ ಆಧಾರಿತ ಸಂಸ್ಕರಣಾ ಘಟಕಗಳು, ಶೀತಲಗೃಹಗಳು, ಸಂಗ್ರಹಣಾ ಕೇಂದ್ರ ಗಳು ಮತ್ತು ಪ್ಯಾಕಿಂಗ್ ಘಟಕಗಳನ್ನು ಸ್ಥಾಪಿಸಬೇಕು.

ಇದರಿಂದ ರೈತರು ಬೆಳೆಗಳನ್ನು ಕಚ್ಚಾ ರೂಪದಲ್ಲೇ ಮಾರಾಟ ಮಾಡುವ ಅನಿವಾರ್ಯತೆ ಕಡಿಮೆ ಯಾಗುತ್ತದೆ. ಸ್ಥಳೀಯವಾಗಿ ಮೌಲ್ಯವರ್ಧನೆಗೊಂಡರೆ ರೈತರಿಗೆ ಉತ್ತಮ ಬೆಲೆ, ಯುವಕರಿಗೆ ಉದ್ಯೋಗ ಹಾಗೂ ಜಿಲ್ಲೆಗೆ ಹೆಚ್ಚುವರಿ ಆದಾಯ ಸಿಗಲಿದೆ. ಕೃಷಿ ಮತ್ತು ಕೈಗಾರಿಕೆಯನ್ನು ಬೆಸೆದು ಜಿಲ್ಲೆಯ ಆರ್ಥಿಕತೆಗೆ ಹೊಸ ವೇಗ ನೀಡಬೇಕು ಎಂಬುದು ರೈತ ಸಂಘಟನೆಗಳು ಹಾಗೂ ಮುಖಂಡರ ಆಗ್ರಹವಾಗಿದೆ.

ದೊಡ್ಡ ಕೈಗಾರಿಕೆಗಳಿಗೆ ಇನ್ನೂ ಕಾಯುವಿಕೆ

ರಾಜಧಾನಿ ಬೆಂಗಳೂರು ಮತ್ತು ವಿಮಾನ ನಿಲ್ದಾಣದ ಸಮೀಪವಿದ್ದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಕೃಷಿ ಆಧಾರಿತ ಘಟಕಗಳ ಜೊತೆಗೆ ಸಣ್ಣ–ಮಧ್ಯಮ ಕೈಗಾರಿಕೆ, ಆಹಾರ ಸಂಸ್ಕರಣೆ, ಶೀತಲ ಸರಪಳಿ ಹಾಗೂ ಇತರ ಉದ್ಯಮಗಳಿಗೆ ಅನುಕೂಲ ಕರ ವಾತಾವರಣ ಸೃಷ್ಟಿಸಬೇಕು.

ಕೈಗಾರಿಕೆಗಳಿಗೆ ಅಗತ್ಯ ರಸ್ತೆ, ವಿದ್ಯುತ್, ನೀರು ಮತ್ತು ಸಂಪರ್ಕ ಸೌಲಭ್ಯಗಳನ್ನು ಕಲ್ಪಿಸಿದರೆ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗುವುದರ ಜೊತೆಗೆ ವಲಸೆ ಪ್ರಮಾಣವೂ ಕಡಿಮೆಯಾಗ ಬಹುದು.

ಆಸ್ಪತ್ರೆ ಸಿದ್ಧ; ಸೇವೆ ಆರಂಭವಾಗಲಿ

ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ದೊರೆತಿರುವುದು ಪ್ರಮುಖ ಸಾಧನೆ. ಆದರೆ ಕಾಲೇಜಿಗೆ ಸಂಬಂಧಿಸಿದ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದಿರುವುದು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗಿದೆ.

ಸುಸಜ್ಜಿತ ಕಟ್ಟಡ ಸಿದ್ಧವಿದ್ದರೂ ಅಗತ್ಯ ವೈದ್ಯರು, ಸಿಬ್ಬಂದಿ, ಉಪಕರಣ ಮತ್ತು ಮೂಲಸೌಕರ್ಯ ಒದಗಿಸಿ ಸಂಶೋಧನೆಯ ಜೊತೆಗೆ ಆಸ್ಪತ್ರೆ ಶೀಘ್ರ ಕಾರ್ಯಾರಂಭಿಸುವಂತೆ ಸರ್ಕಾರ ಕ್ರಮ ಕೈಗೊಳ್ಳ ಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಹಾಗೂ ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ.

ಜಿಲ್ಲಾ ಕೇಂದ್ರಕ್ಕೆ ಮೂಲಸೌಕರ್ಯದ ಕಾಯಕಲ್ಪ

ಚಿಕ್ಕಬಳ್ಳಾಪುರ ನಗರದ ಹಲವು ರಸ್ತೆಗಳು ದೀರ್ಘಕಾಲದಿಂದ ಹದಗೆಟ್ಟಿವೆ. ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಿಂದ ಕಂದವಾರದ ಹೊರಭಾಗದ ರಸ್ತೆ, ನಂದಿ ಗ್ರಾಮಕ್ಕೆ  ಸಂಪರ್ಕ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳ ಅಭಿವೃದ್ಧಿ ಅಗತ್ಯವಾಗಿದೆ.

ನಗರದ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದ ಕೊಳಚೆ ನೀರು ರಸ್ತೆಗೆ ಹರಿಯುವ ಸಮಸ್ಯೆ ಯೂ ಮುಂದುವರಿದಿದೆ. ಬಜಾರ್ ರಸ್ತೆ ಗಂಗಮ್ಮನ ಗುಡಿ ರಸ್ತೆ  ಅಗಲೀಕರಣ ಆಗುವುದೇ ಇಲ್ಲವೋ ಗೊತ್ತಿಲ್ಲ. ಇಂತಹ ಅಭಿವೃದ್ಧಿಯ ಜೊತೆಗೆ ವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ರೂಪಿಸಿ ನಗರದ ಮೂಲಸೌಕರ್ಯಕ್ಕೆ ಸಮಗ್ರ ಕಾಯಕಲ್ಪ ನೀಡಬೇಕಿದೆ.

ಜನಪ್ರತಿನಿಧಿಗಳಿಂದ ಒಗ್ಗಟ್ಟಿನ ಪ್ರಯತ್ನ ಅಗತ್ಯ

ಜಿಲ್ಲೆಯ ಅಭಿವೃದ್ಧಿಗೆ ವಿವಿಧ ಅವಧಿಯಲ್ಲಿ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಹಲವು ಯೋಜನೆಗಳನ್ನು ತಂದಿದ್ದಾರೆ. ಆದರೆ ಜಿಲ್ಲೆಯ ಸಾಮರ್ಥ್ಯಕ್ಕೆ ತಕ್ಕ ಅಭಿವೃದ್ಧಿ ಸಾಧಿಸಲು ಇನ್ನಷ್ಟು ಸಂಘಟಿತ ಪ್ರಯತ್ನ ಬೇಕಾಗಿದೆ.

ಜಿಲ್ಲೆಯ ಸಂಸದರು, ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಬದಿಗಿಟ್ಟು ಜಿಲ್ಲೆಯ ಪ್ರಮುಖ ಬೇಡಿಕೆಗಳಿಗಾಗಿ ಸರ್ಕಾರದ ಮೇಲೆ ಒತ್ತಡ ತರಬೇಕು. ನೀರಾವರಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕಾಲಮಿತಿಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಿಸುವ ಹೊಣೆಗಾರಿಕೆ ಅವರ ಮೇಲಿದೆ.

ಅಭಿವೃದ್ಧಿಯ ದಶಕವಾಗಲಿ

20ನೇ ವರ್ಷಕ್ಕೆ ಕಾಲಿಟ್ಟಿರುವ ಚಿಕ್ಕಬಳ್ಳಾಪುರಕ್ಕೆ ಮುಂದಿನ ಹತ್ತು ವರ್ಷಗಳು ನಿರ್ಣಾಯಕ. ಜಿಲ್ಲೆಯ ಭವಿಷ್ಯವನ್ನು ರೂಪಿಸುವಲ್ಲಿ ಶಾಶ್ವತ ನೀರಿನ ಭದ್ರತೆ, ಕೆರೆಗಳ ಸಂರಕ್ಷಣೆ, ಕೃಷಿ ಆಧಾರಿತ ಕೈಗಾರಿಕೆ, ಉದ್ಯೋಗ ಸೃಷ್ಟಿ, ಉತ್ತಮ ರಸ್ತೆ–ಚರಂಡಿ ವ್ಯವಸ್ಥೆ, ಆರೋಗ್ಯ–ಶಿಕ್ಷಣದ ಬಲವರ್ಧನೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿ ಪ್ರಮುಖ ಆದ್ಯತೆಗಳಾಗಬೇಕು.

ಚಿಕ್ಕಬಳ್ಳಾಪುರದ ದೊಡ್ಡ ಶಕ್ತಿ ಅದರ ಕೃಷಿ, ರೈತರ ಜ್ಞಾನ, ಭೌಗೋಳಿಕ ಸ್ಥಾನ ಮತ್ತು ಮಾನವ ಸಂಪನ್ಮೂಲ. ಈ ಶಕ್ತಿಯನ್ನು ಸರಿಯಾದ ನೀತಿ ಹಾಗೂ ಮೂಲಸೌಕರ್ಯದೊಂದಿಗೆ ಜೋಡಿಸಿದರೆ ಜಿಲ್ಲೆಯ ಆರ್ಥಿಕತೆಗೆ ಹೊಸ ದಿಕ್ಕು ನೀಡಬಹುದು.

ಎರಡು ದಶಕಗಳನ್ನು ಪೂರೈಸಿದ ಜಿಲ್ಲೆ ಇನ್ನು ಭರವಸೆಗಳಿಗಾಗಿ ಕಾಯುವ ಬದಲು ಫಲಿತಾಂಶ ಗಳನ್ನು ಕಾಣುವ ಕಾಲ ಇದು. ಯೋಜನೆಗಳ ಘೋಷಣೆಗಿಂತ ಅನುಷ್ಠಾನ, ವೆಚ್ಚಕ್ಕಿಂತ ಜನರಿಗೆ ತಲುಪುವ ಪ್ರಯೋಜನ ಮತ್ತು ಭರವಸೆಗಿಂತ ಅಭಿವೃದ್ಧಿಯ ಫಲ—ಇವೇ 20ನೇ ವರ್ಷಕ್ಕೆ ಕಾಲಿಟ್ಟ ಚಿಕ್ಕಬಳ್ಳಾಪುರದ ಮುಂದಿನ ಪಯಣದ ಮಾನದಂಡವಾಗಬೇಕಿದೆ.