Sadguru Sri Madhusudan Sai: ಸತ್ಯ ಸಾಯಿ ವೈದ್ಯಕೀಯ ಕಾಲೇಜು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಕೊಡುಗೆ: ಶ್ರೀ ಮಧುಸೂದನ ಸಾಯಿ
Sadguru Sri Madhusudan Sai: ಸತ್ಯ ಸಾಯಿ ಗ್ರಾಮದಲ್ಲಿರುವ ವೈದ್ಯಕೀಯ ಕಾಲೇಜು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಒಂದು ಕೊಡುಗೆಯಾಗಿದೆ. ಜಗತ್ತಿನ ಯಾವುದೇ ಭಾಗದ ಜನರು ಇಲ್ಲಿಗೆ ಬಂದು ಉಚಿತವಾಗಿ ಚಿಕಿತ್ಸೆ ಪಡೆಯಲಿ ಎಂಬುದು ನಮ್ಮ ಆಲೋಚನೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಿಳಿಸಿದ್ದಾರೆ.

-

ಚಿಕ್ಕಬಳ್ಳಾಪುರ: ಸತ್ಯ ಸಾಯಿ ಗ್ರಾಮದಲ್ಲಿರುವ ವೈದ್ಯಕೀಯ ಕಾಲೇಜು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಒಂದು ಕೊಡುಗೆಯಾಗಿದೆ. ಜಗತ್ತಿನ ಯಾವುದೇ ಭಾಗದ ಜನರು ಇಲ್ಲಿಗೆ ಬಂದು ಉಚಿತವಾಗಿ ಚಿಕಿತ್ಸೆ ಪಡೆಯಲಿ ಎಂಬುದು ನಮ್ಮ ಆಲೋಚನೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ'ದ 53ನೇ ದಿನವಾದ ಮಂಗಳವಾರ (ಅ.7) ಆಶೀರ್ವಚನ ನೀಡಿದ ಸದ್ಗುರು ಅವರು, ಇಲ್ಲಿ ಓದಿದ ನಮ್ಮ ಮಕ್ಕಳು ಜಗತ್ತಿನ ನಾನಾ ಭಾಗಗಳಿಗೆ ಹೋಗಿ ಸೇವೆ ಸಲ್ಲಿಸುತ್ತಾರೆ. ಇದು ವಸುಧೈವ ಕುಟುಂಬಕಂ ಪರಿಕಲ್ಪನೆಯ ಹೆಜ್ಜೆಗಳು ಎಂದು ಹರ್ಷ ವ್ಯಕ್ತಪಡಿಸಿದರು.
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಿತು. ಸಚಿವ ಎಚ್.ಕೆ. ಪಾಟೀಲ್ ಇಲ್ಲಿಗೆ ಭೇಟಿ ಕೊಟ್ಟು ಹಲವು ಮೌಲಿಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡು ಸರ್ಕಾರದಲ್ಲಿದ್ದ ಇತರರಿಗೆ ಮನವರಿಕೆ ಮಾಡಿಕೊಟ್ಟರು. ಇಲ್ಲಿ ವ್ಯಾಸಂಗ ಮಾಡುತ್ತಿರುವ ಹೆಚ್ಚಿನ ಮಕ್ಕಳು ಬಡತನದ ಹಿನ್ನೆಲೆಯಿಂದ ಬಂದವರು, ಸಣ್ಣ ರೈತರು, ವ್ಯಾಪಾರಿಗಳು, ಚಾಲಕರ ಮಕ್ಕಳಾಗಿದ್ದಾರೆ ಎಂದು ವಿವರಿಸಿದರು.
ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಉಚಿತ ವೈದ್ಯಕೀಯ ಕಾಲೇಜು ಆಗಿ ಸ್ಥಾಪನೆಯಾಗಿರುವುದು ಭಾರತೀಯ ವೈದ್ಯಕೀಯ ಶಿಕ್ಷಣದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ವೈದ್ಯಕೀಯ ಶ್ರೇಷ್ಠತೆಯ ಜೆತೆಗೆ ನೈತಿಕತೆ ಮತ್ತು ಕರುಣೆಯ ಮೌಲ್ಯಗಳನ್ನೂ ಹೊಂದಿದೆ ಎಂದು ಶ್ಲಾಘಿಸಿದರು.
ಇಂಥ ಸಂಸ್ಥೆಯನ್ನು ಆರಂಭಿಸಿ ಸೇವೆಯನ್ನು ನೀಡುವುದು ಸರ್ಕಾರಕ್ಕೂ ಕಷ್ಟವಾಗುತ್ತದೆ. ವೈದ್ಯಕೀಯ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿ 5 ವರ್ಷ ವ್ಯಾಸಂಗ ಮಾಡಬೇಕಾದರೆ ಎಷ್ಟು ವೆಚ್ಚವಾಗುತ್ತದೆ ಎಂದು ನಮಗೆ ತಿಳಿದಿದೆ. ಹೀಗಾಗಿ ಈ ಸಂಸ್ಥೆಯು ಉಚಿತ ಶಿಕ್ಷಣ ನೀಡುತ್ತಿರುವುದು ನಮಗೆ ಯಾವಾಗಲೂ ಆಶ್ಚರ್ಯವಾಗಿದೆ. ಮಧುಸೂದನ ಸಾಯಿ ಅವರ ಬದ್ಧತೆ, ಧೈರ್ಯ ಹಾಗೂ ದೃಢ ಸಂಕಲ್ಪ ಬೆರಗುಗೊಳಿಸುತ್ತಿದೆ. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬಗ್ಗೆ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಸಲ್ಲಿಸಿದಾಗ ಸಚಿವ ಸಂಪುಟದ ಎಲ್ಲಾ ಸದಸ್ಯರು ಕೊಡಬೇಕು, ತಕ್ಷಣವೇ ಅನುಮತಿ ಕೊಡಬೇಕೆಂದು ಸಹಮತ ವ್ಯಕ್ತಪಡಿಸಿದರು. ಈ ರೀತಿ ಸಚಿವ ಸಂಪುಟದಲ್ಲಿ ಯಾವುದೇ ವೈದ್ಯಕೀಯ ಸಂಸ್ಥೆಗೆ ಬೆಂಬಲ ನೀಡಿದನ್ನು ನಾನು ನನ್ನ ಸಾರ್ವಜನಿಕ ಜೀವನದಲ್ಲಿ ನೋಡಿಯೇ ಇಲ್ಲ ಎಂದು ಸ್ಮರಿಸಿದರು.
'ಅಖಿಲ ಭಾರತೀಯ ಒಸ್ವಾಲ್ ಪರಿಷತ್' ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕ ಅಧ್ಯಕ್ಷ ರೇ ಚಂದ್ ಖಟರ್ (Ray Chand Khater) ಅವರು ಪ್ರಶಸ್ತಿ ಸ್ವೀಕರಿಸಿದರು. ಫಿಲಿಪೈನ್ಸ್ ದೇಶದಲ್ಲಿ ಸಂಗೀತ ಮತ್ತು ಲಲಿತಕಲೆಗೆ ಕೊಡುಗೆ ನೀಡಿರುವ ಕಲಾವಿದ ಸ್ಟಾನ್ಲಿ ಫೆರ್ರಿ ಫೆರ್ನಾಂಡಿಸ್ (Stanley Feery Fernandiz) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು.
ಈ ಸುದ್ದಿಯನ್ನೂ ಓದಿ | Sathya Sai Grama: ಆರೋಗ್ಯ ಕ್ಷೇತ್ರದಲ್ಲಿ ಎಐ ಕ್ರಾಂತಿ ಸ್ವಾಗತಿಸಲು ಸಜ್ಜಾದ ಸತ್ಯ ಸಾಯಿ ಸಂಸ್ಥೆಗಳು
ಸಾಮಾಜಿಕ ಕಾರ್ಯಕರ್ತೆ ವೀನಸ್ ಕೈಲ್ ಬಾಸಾ (Dr Venus Ae Kaiel Basa), ಚೆನ್ನೈನಲ್ಲಿರುವ ಫಿಲಿಪೈನ್ಸ್ ಕಾನ್ಸುಲ್ ಬೀಮ್ ಸಿಂಗ್ ನರೇಂದ್ರನ್, ಭಾರತದಲ್ಲಿರುವ ಫಿಲಿಪೈನ್ಸ್ ರಾಯಭಾರಿ ಕಚೇರಿಯ ಉಪ ಕಾನ್ಸುಲ್ ರಾನ್ ಬೌಟಿಸ್ಟಾ (Ronn Bautista) ಅವರು ಉಪಸ್ಥಿತರಿದ್ದರು.