ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುದ್ದೇನಹಳ್ಳಿ ಆಸ್ಪತ್ರೆಯಲ್ಲಿ ಶೀಘ್ರ ಹೆಲ್ತ್ ಡೇಟಾ ಕಮಾಂಡ್ ಸೆಂಟರ್‌, ಕ್ಯಾಥ್‌ ಲ್ಯಾಬ್ ಆರಂಭ: ಶ್ರೀ ಮಧುಸೂದನ ಸಾಯಿ ಘೋಷಣೆ

Sathya Sai Grama: 'ಸಿಸ್ಕೊ' ಕಂಪನಿಯ ನೆರವಿನಿಂದ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಶೀಘ್ರವೇ ಕಮಾಂಡ್ ಸೆಂಟರ್ ಆರಂಭವಾಗಲಿದೆ. ನಮ್ಮ ಎಲ್ಲ ಆಸ್ಪತ್ರೆಗಳಲ್ಲಿರುವ ದತ್ತಾಂಶಗಳು ಇಲ್ಲಿ ಪ್ರಕ್ರಿಯೆಗೊಳ್ಳಲಿವೆ. ಆರೋಗ್ಯ ಸೇವೆಯ ದೃಷ್ಟಿಯಿಂದ ಇದು ಮಹತ್ವದ ಉಪಕ್ರಮ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಿಳಿಸಿದ್ದಾರೆ.

ಮುದ್ದೇನಹಳ್ಳಿ ಆಸ್ಪತ್ರೆಯಲ್ಲಿ ಶೀಘ್ರ ಹೆಲ್ತ್ ಡೇಟಾ ಕಮಾಂಡ್ ಸೆಂಟರ್‌ ಆರಂಭ

-

Profile Siddalinga Swamy Oct 13, 2025 8:05 PM

ಚಿಕ್ಕಬಳ್ಳಾಪುರ: ಆರೋಗ್ಯ ಸೇವೆಗಳು ಮನುಷ್ಯರ ಘನತೆಯನ್ನು ಪುನಃ ಸ್ಥಾಪಿಸುತ್ತವೆ. ಹೀಗಾಗಿಯೇ ಅದಕ್ಕೆ ಸಮಾಜದಲ್ಲಿ ಮಹತ್ವ ಸಿಗಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು. ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 59ನೇ ದಿನವಾದ ಸೋಮವಾರ ಆಶೀರ್ವಚನ ನೀಡಿದ ಅವರು, ಅನಾರೋಗ್ಯವು ಮನುಷ್ಯರನ್ನು ಅವಲಂಬಿತರನ್ನಾಗಿಸುತ್ತದೆ. ಅಂದುಕೊಂಡ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಒಮ್ಮೆ ಕಳೆದುಕೊಂಡಿದ್ದ ಆರೋಗ್ಯವು ಮರಳಿದರೆ ಅಂಥವರ ಮನಸ್ಸಿನಲ್ಲಿ ಹೊಸ ಆತ್ಮವಿಶ್ವಾಸ ಮೂಡುತ್ತದೆ. ಮನುಷ್ಯರ ಘನತೆ ಸ್ಥಾಪಿಸುವಲ್ಲಿ ಅನ್ನ, ಅಕ್ಷರ ಮತ್ತು ಆರೋಗ್ಯದ ಪಾತ್ರ ಮಹತ್ವವಾದುದು ಎಂದು ತಿಳಿಸಿದರು.

ಹೃದ್ರೋಗದ ಕಾರಣಕ್ಕೆ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಸಂದರ್ಭ ಬಂದರೆ ಗಾಯದ ಕಲೆಯು ಉಳಿಯದಂತೆ ಅಥವಾ ಅತ್ಯಂತ ಕಡಿಮೆ ಇರುವಂತೆ ಎಚ್ಚರವಹಿಸುವಂತೆ ನಮ್ಮ ವೈದ್ಯರಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾರೂ ಕಳಂಕ ಅನುಭವಿಸುವಂತೆ ಆಗಬಾರದು. ಆಸ್ಪತ್ರೆಯಲ್ಲಿರುವ ಸುಸಜ್ಜಿತ ಕ್ಯಾಥ್‌ ಲ್ಯಾಬ್ ಈ ಉದ್ದೇಶಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಹೊಸದಾಗಿ ಮತ್ತೊಂದು ಕ್ಯಾಥ್‌ ಲ್ಯಾಬ್ ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.

'ಸಿಸ್ಕೊ' ಕಂಪನಿಯ ನೆರವಿನಿಂದ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಶೀಘ್ರವೇ ಕಮಾಂಡ್ ಸೆಂಟರ್ ಆರಂಭವಾಗಲಿದೆ. ನಮ್ಮ ಎಲ್ಲ ಆಸ್ಪತ್ರೆಗಳಲ್ಲಿರುವ ದತ್ತಾಂಶಗಳು ಇಲ್ಲಿ ಪ್ರಕ್ರಿಯೆಗೊಳ್ಳಲಿವೆ. ಆರೋಗ್ಯ ಸೇವೆಯ ದೃಷ್ಟಿಯಿಂದ ಇದು ಮಹತ್ವದ ಉಪಕ್ರಮ ಎಂದು ಸದ್ಗುರು ಅವರು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ವೃದ್ಧ ಪೋಷಕರನ್ನು ಪರಿತ್ಯಜಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವೃದ್ಧಾಪ್ಯದಲ್ಲಿರುವವರನ್ನು ಹೀಗಳೆದು ಮಾತನಾಡುವುದು, ಅವರಿಂದ ಏನಿದೆ ಪ್ರಯೋಜನ ಎಂದು ಕೇಳುವುದು ಕಂಡು ಬರುತ್ತಿದೆ. ಈಗ ವೃದ್ಧರಾಗಿರುವವರೂ ಹಿಂದೆ ಸಾಕಷ್ಟು ಕೆಲಸ ಮಾಡಿದ್ದಾರೆ. ನಮ್ಮನ್ನು ಬೆಳೆಸಿದ್ದಾರೆ, ಸಮಾಜಕ್ಕೆ ಅವರಿಂದ ಆದಷ್ಟು ಕೊಡುಗೆ ಕೊಟ್ಟಿದ್ದಾರೆ. ಪೋಷಕರನ್ನು ಅನಾಥರಾಗಿ ಬಿಟ್ಟು ಬಿಡುವುದು ಕಾನೂನು ಪ್ರಕಾರ ಅಪರಾಧವೂ ಹೌದು ಎಂದು ವಿಷಾದ ವ್ಯಕ್ತಪಡಿಸಿದರು.

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಶಿಕ್ಷಣ ಸಂಸ್ಥೆಯ ಶಿಶು ಹೃದ್ರೋಗಶಾಸ್ತ್ರ ವಿಭಾಗದ ಡಾ. ಅನ್ನಿ ಅರವಿಂದ್ ಅವರು ತಮ್ಮ ವಿಭಾಗದ ಕಾರ್ಯವೈಖರಿ ಮತ್ತು ಸಾಧನೆಗಳ ಕುರಿತು ವಿವರಿಸಿದರು. ಮಕ್ಕಳ ಜೀವ ಉಳಿಸಿದ ಚಿಕಿತ್ಸಾ ಕ್ರಮಗಳು ಮತ್ತು ಘಟನೆಗಳ ಕುರಿತು ಡಾ. ಅನ್ನಿ ಅವರು ಪ್ರಸ್ತುತಪಡಿಸಿದಾಗ ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

'ಹೆಕ್ಸಾಗನ್ ಕೇಪಬಿಲಿಟಿ ಸೆಂಟರ್‌ ಇಂಡಿಯಾ' ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ಹಣಕಾಸು ಅಧಿಕಾರಿ ಬಲ್ಲವ್ ಮುಂದ್ರ ಹಾಗೂ ರೋಟರಿ ಬೆಂಗಳೂರು ಸೌತ್ ಪರೇಡ್‌ನ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಆನಂದ್ ರಾಮಚಂದ್ರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಸಿಎಸ್‌ಆರ್ ಮತ್ತು ಇಎಸ್‌ಜಿ ವಿಭಾಗದ ಉನ್ನತ ಅಧಿಕಾರಿ ಸೌಮ್ಯಾ ನಿಂಗಪ್ಪ, ಸಿಸ್ಕೋ ಕಂಪನಿಯ ಹಿರಿಯ ಅಧಿಕಾರಿಗಳಾದ ಪ್ರದೀಪ್ ಜೇಕಬ್ ಹಾಗೂ ಪ್ರತಾಪ್ ಚೆಲ್ಲೆ ಅವರಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು.

ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಮಕ್ಕಳ ಮೇಲೆ ಒತ್ತಡ ಹೇರುವ 'ಪ್ರೆಶರ್ ಕುಕ್ಕರ್' ವ್ಯವಸ್ಥೆ ಸರಿಯಲ್ಲ: ಸದ್ಗುರು ಶ್ರೀ ಮಧುಸೂದನ ಸಾಯಿ

'ತ್ರಿವೇಣಿ ಅರ್ತ್‌ಮೂವರ್ಸ್‌' ಕಂಪನಿಯ ಸಂಸ್ಥಾಪಕರಾದ ಬಿ. ಪ್ರಭಾಕರನ್ ಮತ್ತು ಬಿ. ಕಾರ್ತಿಕೇಯನ್ ಅವರಿಗೆ 'ಒನ್ ವರ್ಲ್ಡ್ ಒನ್ ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್‌' ನೀಡಲಾಯಿತು. ಕೀನ್ಯಾ ದೇಶದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಫ್ಲೋವಿಯಾನ್ಸ್ ಅನ್ಯಾಂಗೊ ಅಕುಕು ಅವರಿಗೆ 'ಒಂದು ಒಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ಪ್ರದಾನ ಮಾಡಲಾಯಿತು.

Sathya Sai Grama

ಮಾರುತಿ ಸುಜುಕಿ ಅಧ್ಯಕ್ಷರಿಗೆ ಸ್ಮರಣಿಕೆ ಕೊಟ್ಟು ಅಭಿನಂದಿಸಿದ ಸುನಿಲ್ ಗವಾಸ್ಕರ್

ಭಾರತದ ಪ್ರಮುಖ ಕಾರು ತಯಾರಿಕಾ ಕಂಪನಿ 'ಮಾರುತಿ ಸುಜುಕಿ' ಅಧ್ಯಕ್ಷ ಆರ್‌.ಸಿ. ಭಾರ್ಗವ ಅವರಿಗೆ ಖ್ಯಾತ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್ ಅವರು ದೆಹಲಿಯಲ್ಲಿ ಇತ್ತೀಚೆಗೆ 'ಒನ್ ವರ್ಲ್‌ ಒನ್ ಫ್ಯಾಮಿಲಿ ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್‌' ನೀಡಿ ಗೌರವಿಸಿದರು. ಸುನಿಲ್ ಗವಾಸ್ಕರ್ ಅವರು 'ಒಂದು ಜಗತ್ತು ಕುಟುಂಬ ಪ್ರತಿಷ್ಠಾನ' ದ ನಿರ್ದೇಶಕರ ಮಂಡಳಿ ಸದಸ್ಯರೂ ಆಗಿದ್ದಾರೆ. ಭಾರತದ ಮುಂಚೂಣಿ ಉದ್ಯಮಿಗಳಲ್ಲಿ ಒಬ್ಬರಾದ ಭಾರ್ಗವ ಅವರು ವಾಹನ ತಯಾರಿಕಾ ಉದ್ಯಮವನ್ನು ರೂಪಾಂತರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹಿರಿಯರು. ಅವರ ದೂರದೃಷ್ಟಿಯು ಹಲವು ಕುಟುಂಬಗಳಿಗೆ ಸುರಕ್ಷಿತ, ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಸಾರಿಗೆ ಸೌಲಭ್ಯ ಸಿಗಲು ಕಾರಣವಾಗಿದೆ.