Chikkaballlapur News: ಎರಡನೇ ದಿನದ ಕರ್ನಾಟಕ ಲೋಕಾಯುಕ್ತ ಸಾರ್ವಜನಿಕ ಕುಂದು ಕೊರತೆಗಳ ವಿಚಾರಣಾ ಸಭೆ
ಶಿಡ್ಲಘಟ್ಟ ತಾಲೂಕಿನ ರೈತ ಚೌಡಪ್ಪ ಎಂಬುವರು ನಮ್ಮ ಜಮೀನು ದುರಸ್ತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದೇವೆ. ಇದುವರೆಗೆ ದುರಸ್ತು ಮಾಡಿಕೊಟ್ಟಿಲ್ಲ. ಅರಣ್ಯ ಇಲಾಖೆಯವರು ಅದು ಅರಣ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಆದರೂ ದುರಸ್ತು ಮಾಡಿಕೊಡುತ್ತಿಲ್ಲ. ಕಚೇರಿ ಅಲೆಸುತ್ತಿದ್ದಾರೆ ಎಂದು ತಹಶೀಲ್ದಾರ್ ಹಾಗೂ ಎಡಿಎಲ್‌ಆರ್ ವಿರುದ್ಧ ದೂರಿದರು.


ಚಿಕ್ಕಬಳ್ಳಾಪುರ: ಗೋಕಾಡು ಎಂಬುದು ಇಡೀ ರಾಜ್ಯದ ಜನರ ಸಮಸ್ಯೆ. ಪ್ರಸ್ತುತ ಈ ಪ್ರಕರಣ ಹೈಕೋರ್ಟ್‌ನಲ್ಲಿದೆ. ಉಚ್ಚ ನ್ಯಾಯಾಲಯವು ಅನುಭವದಲ್ಲಿರುವ ರೈತರಿಗೆ ಆ ಭೂಮಿ ಕೊಡ ಬಹುದು ಎಂದು ತೀರ್ಪು ನೀಡಿದರೆ, ಇಡೀ ರಾಜ್ಯದ ರೈತರಿಗೆಲ್ಲಾ ಅನುಕೂಲವಾಗಲಿದೆ. ಆಗ ಗೋಕಾಡಿನ ಜಾಗದಲ್ಲಿ ಸ್ವಾಧೀನದಲ್ಲಿರುವ ರೈತರಿಗೆ ದುರಸ್ತು ಮಾಡಿಕೊಡಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಹೇಳಿದರು. ನಗರ ಹೊರವಲಯದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಎರಡನೇ ದಿನದ ಕರ್ನಾಟಕ ಲೋಕಾಯುಕ್ತ ಸಾರ್ವಜನಿಕ ಕುಂದು ಕೊರತೆಗಳ ವಿಚಾರಣಾ ಸಭೆಯಲ್ಲಿ ದೂರುದಾರರೊಬ್ಬ ರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲೂಕಿನ ರೈತ ಚೌಡಪ್ಪ ಎಂಬುವರು ನಮ್ಮ ಜಮೀನು ದುರಸ್ತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದೇವೆ. ಇದುವರೆಗೆ ದುರಸ್ತು ಮಾಡಿಕೊಟ್ಟಿಲ್ಲ. ಅರಣ್ಯ ಇಲಾಖೆಯವರು ಅದು ಅರಣ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಆದರೂ ದುರಸ್ತು ಮಾಡಿಕೊಡುತ್ತಿಲ್ಲ. ಕಚೇರಿ ಅಲೆಸುತ್ತಿದ್ದಾರೆ ಎಂದು ತಹಶೀಲ್ದಾರ್ ಹಾಗೂ ಎಡಿಎಲ್‌ಆರ್ ವಿರುದ್ಧ ದೂರಿದರು.
ಇದನ್ನೂ ಓದಿ: Chikkaballapur News: ಪರಿಶಿಷ್ಟಜಾತಿಯ ಜಾತಿ ಸಮೀಕ್ಷೆಯ ವೇಳೆ ಯಾವುದೇ ಗೊಂದಲವಿಲ್ಲದೆ ಮಾದಿಗ ಎಂದೇ ನಮೂದಿಸಿ
ತಹಶೀಲ್ದಾರ್ ರಾಜೀವ್ ಮಾತನಾಡಿ, ಕಂದಾಯ ಇಲಾಖೆಯಲ್ಲಿರುವ 1919ರ ಕಡತದ ಪ್ರಕಾರ ಆ ಜಾಗ ಗೋಕಾಡು. ಆದ್ದರಿಂದ, ದುರಸ್ತು ಮಾಡಿಕೊಟ್ಟಿಲ್ಲ. ಗೋಕಾಡಿನ ವಿಚಾರವಾಗಿ ಪ್ರಕರಣ ಹೈಕೋರ್ಟ್‌ನಲ್ಲಿದೆ ಎಂದು ತಿಳಿಸಿದರು.
ಪ್ರಕರಣ ಹೈಕೋರ್ಟ್‌ನಲ್ಲಿದ್ದಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬೇಕಿದ್ದಲ್ಲಿ ನೀವು ಅದೇ ಪ್ರಕರಣದಲ್ಲಿ ಸೇರಿಕೊಳ್ಳಲು ಅವಕಾಶವಿದೆ. ಕೋರ್ಟ್ ತೀರ್ಪಿನ ಬಳಿಕ ನಿಮಗೆ ಸೂಕ್ತ ಉತ್ತರ ದೊರೆಯಲಿದೆ ಎಂದು ಹೇಳಿದರು.
ಇದೇ ವಿಚಾರವಾಗಿ ಕೆಲಕಾಲ ರೈತ ಚೌಡಪ್ಪ ನ್ಯಾಯಮೂರ್ತಿಗಳೊಂದಿಗೆ ವಾದ ನಡೆಸಿದರು. ಕೊನೆಗೆ ಸಿಟ್ಟಾದ ನ್ಯಾಯಮೂರ್ತಿ ಫಣೀಂದ್ರ, ಜಾಸ್ತಿ ಮಾತನಾಡಬೇಡಿ ಸುಮ್ಮನೆ ಇರಿ ಎಂದು ಏರುಧ್ವನಿಯಲ್ಲಿ ದೂರದಾರರ ವಿರುದ್ಧ ಗುಡುಗಿದರು.
ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರಿ ಗೋಮಾಳದಲ್ಲಿ ಸರಕಾರದಿಂದ ಸಾರ್ವಜನಿಕ ಉಪಯೋಗಕ್ಕಾಗಿ ಕೊಳವೆ ಬಾವಿ ಕೊರೆಸಲಾಗಿದೆ. ಅದರಿಂದ 10 ಅಡಿ ಅಂತರದಲ್ಲೇ ಖಾಸಗಿ ವ್ಯಕ್ತಿಯೊಬ್ಬ ಮತ್ತೊಂದು ಕೊಳವೆ ಬಾವಿ ಕೊರೆಸಿದ್ದಾನೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ನ್ಯಾ.ಫಣೀಂದ್ರ ಅವರು, ತಹಶೀಲ್ದಾರ್ ಬಿ ಎಂ ಸ್ವಾಮಿ ಹಾಗೂ ಪಿಡಿಒ ವಜ್ರೇಶ್ ಕುಮಾರ್ ಇಬ್ಬರೂ ಸ್ಥಳ ಪರಿಶೀಲನೆ ನಡೆಸಬೇಕು. ಸರಕಾರಿ ಗೋಮಾಳದಲ್ಲಿದ್ದರೆ ಸಾರ್ವಜನಿಕ ಬಳಕೆಗೆ ಅನುಕೂಲವಾಗುವಂತೆ ಅದನ್ನು ಪಂಚಾಯಿತಿ ವ್ಯಾಪ್ತಿಗೆ ನೀಡಿ ಎಂದು ಆದೇಶಿಸಿದರು.
ಎರಡನೇ ದಿನದ ಸಭೆಯಲ್ಲಿ ನಡೆದ ಕೆಲ ಪ್ರಕರಣಗಳ ವಿಚಾರಣೆಯಲ್ಲಿ ನ್ಯಾ.ಫಣೀಂದ್ರ ಅವರು ದೂರುದಾರರ ವಿರುದ್ಧವೇ ಹರಿಹಾಯ್ದರು. ಸಾರ್ವಜನಿಕ ಅಧಿಕಾರಿಗಳ ವಿರುದ್ಧ ವಿನಾಕಾರಣ ಕೇಸು ಹಾಕುತ್ತೀರಿ. ಅವರು ನಿಮ್ಮ ಪರವಾಗಿಯೇ ಇರುತ್ತಾರೆ ಎಂಬುದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು ಎಂದು ಬುದ್ದಿವಾದದ ಪಾಠ ಮಾಡಿದರು.
ಎರಡನೇ ದಿನ ನಡೆದ ದೂರುಗಳ ವಿಚಾರಣಾ ಸಭೆಯಲ್ಲಿ ಸುಮಾರು 26 ಪ್ರಕರಣಗಳು ಇತ್ಯರ್ಥಗೊಂಡವು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಎಂ ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾದ ಶಿಲ್ಪ, ಲೋಕಾಯುಕ್ತದ ಎಸ್ ಪಿ ಆಂಟೋನಿ ಜಾನ್, ಡಿ.ವೈ.ಎಸ್.ಪಿ ಜಗನ್ನಾಥ್, ಅಪಾರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.