SN Subbareddy: ಇ.ಡಿ. ಸ್ವತಂತ್ರ ಸಂಸ್ಥೆ, ತನಿಖೆ ನಡೆಸೋದರಲ್ಲಿ ತಪ್ಪಿಲ್ಲ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
SN Subbareddy: ಇ.ಡಿ. ಸ್ವತಂತ್ರ ಸಂಸ್ಥೆಯಾಗಿದ್ದು, ತನಿಖೆ ನಡೆಸೋದರಲ್ಲಿ ತಪ್ಪಿಲ್ಲ. ದಾಳಿ ಸಂಬಂಧ ಇಡಿ ಕಚೇರಿಗೆ ಜು.14ರಂದು ಬರಲು ತಿಳಿಸಿದ್ದಾರೆ. ಜಾರಿ ನಿರ್ದೇಶನಾಯಲಯದ ಕಚೇರಿಗೆ ಅಂದು ಭೇಟಿ ನೀಡಿ ನನಗೆ ಗೊತ್ತಿರುವ ಎಲ್ಲಾ ಮಾಹಿತಿಯನ್ನು ಮುಕ್ತವಾಗಿ ತಿಳಿಸುತ್ತೇನೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದ್ದಾರೆ.


ಬಾಗೇಪಲ್ಲಿ: ಜಾರಿ ನಿರ್ದೇಶನಾಲಯ (ED) ಸ್ವತಂತ್ರ ಸಂಸ್ಥೆಯಾಗಿದ್ದು, ತನಿಖೆ ನಡೆಸೋದರಲ್ಲಿ ತಪ್ಪಿಲ್ಲ. ದಾಳಿ ಸಂಬಂಧ ಇಡಿ ಕಚೇರಿಗೆ ಜು.14ರಂದು ಬರಲು ತಿಳಿಸಿದ್ದಾರೆ. ಜಾರಿ ನಿರ್ದೇಶನಾಯಲಯದ ಕಚೇರಿಗೆ ಅಂದು ಭೇಟಿ ನೀಡಿ ನನಗೆ ಗೊತ್ತಿರುವ ಎಲ್ಲಾ ಮಾಹಿತಿಯನ್ನು ಮುಕ್ತವಾಗಿ ತಿಳಿಸುತ್ತೇನೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ (SN Subbareddy) ತಿಳಿಸಿದರು. ಬಾಗೇಪಲ್ಲಿ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನತಾ ದರ್ಶನದ ನಂತರ ಇ.ಡಿ ದಾಳಿಯ ಬಗ್ಗೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಜು.14ಕ್ಕೆ ಇಡಿ ಕಚೇರಿಗೆ ಹೋಗುವೆ
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನಗೆ ಸಂಬಂಧಪಟ್ಟ ನಾಲ್ಕು ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ. ಅವರ ತಪಾಸಣೆಯ ವೇಳೆ ವಿದೇಶಿ ವ್ಯವಹಾರವಾಗಲೀ, ನಿಯಮ ಬಾಹಿರವಾದಂತಹ ವ್ಯವಹಾರಗಳು ನಡೆದಿರುವ ಬಗ್ಗೆ ದಾಖಲೆ ಸಿಕ್ಕಿಲ್ಲ. ಈ ಸಂಬಂಧ ಅಧಿಕಾರಿಗಳಿಗೆ ಅನುಮಾನವಿರುವಂತಹ ಕೆಲವು ದಾಖಲೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದು ಜು.14 ರಂದು ಇಡಿ ಕಚೇರಿಗೆ ಬರಲು ತಿಳಿಸಿದ್ದಾರೆ ಎಂದು ಹೇಳಿದರು. ನಾನು ಜು.14ರಂದು ಜಾರಿ ನಿರ್ದೇಶನಾಲಯದ ಕಚೇರಿಗೆ ಹೋಗುತ್ತೇನೆ. ನನಗೆ ತಿಳಿದಿರುವ ಸತ್ಯಾಂಶವನ್ನು ಅವರ ಮುಂದೆ ಇಡುತ್ತೇನೆ ಎಂದು ತಿಳಿಸಿದರು.
ನನ್ನ ಮೇಲೆ ವಿಶ್ವಾಸವಿಟ್ಟು ಸತತವಾಗಿ ನನ್ನನ್ನು ಗೆಲ್ಲಿಸಿದಂತಹ ಜನರ ವಿಶ್ವಾಸಕ್ಕೆ ಎಂದೂ ಕೂಡ ನಾನು ಮೋಸ ಮಾಡುವ ಕೆಲಸ ಮಾಡುವುದಿಲ್ಲ. ಅಲ್ಲದೆ ಈ ಜನರ ವಿಶ್ವಾಸಕ್ಕೆ ಕೂಡ ಧಕ್ಕೆ ತರುವಂತಹ ಕೆಲಸ ಮಾಡುವುದಿಲ್ಲ. ನಿಮ್ಮ ಶಾಸಕನಾಗಿ ಸದಾ ಜನರಿಗಾಗಿ ಕೆಲಸ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಸಹ ಪೋನ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ. ಏನೇ ಆಗಲಿ ಸರ್ಕಾರ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿದ್ದಾರೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಈ ಸುದ್ದಿಯನ್ನೂ ಓದಿ | Karnataka Rains: ನಾಳೆ ದಕ್ಷಿಣ ಕನ್ನಡ, ಉಡುಪಿ ಸೇರಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ