ಗ್ರೇಟರ್ ನೋಯ್ಡಾ ವರದಕ್ಷಿಣೆ ಸಾವಿನ ಪ್ರಕರಣಕ್ಕೆ ಹೊಸ ತಿರುವು; ಸಿಲಿಂಡರ್ ಬ್ಲಾಸ್ಟ್ ಆಗಿ ಹೊತ್ತಿಕೊಂಡಿತ್ತಾ ಬೆಂಕಿ?
ಗ್ರೇಟರ್ ನೋಯ್ಡಾದ ನಿಕ್ಕಿ ಭಾಟಿ ವರದಕ್ಷಿಣೆ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆಸ್ಪತ್ರೆಗೆ ಸೇರಿಸುವ ಮುನ್ನ ಆಕೆ ತನ್ನ ಮಾವನ ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಸುಟ್ಟ ಗಾಯಗಳಾಗಿದ್ದವು ಎಂದು ವೈದ್ಯರಿಗೆ ಹೇಳಿದ್ದಳು ಎಂದು ತಿಳಿದುಬಂದಿದೆ. ಆಗಸ್ಟ್ 21ರಂದು ಆಸ್ಪತ್ರೆಗೆ ಕರೆತಂದಾಗ ನಿಕ್ಕಿ ಮಾತನಾಡುವ ಸ್ಥಿತಿಯಲ್ಲಿದ್ದಳು ಎಂದು ವೈದ್ಯರು ಮತ್ತು ನರ್ಸ್ ತಿಳಿಸಿದ್ದಾರೆ.


ಲಖನೌ: ಗ್ರೇಟರ್ ನೋಯ್ಡಾದ (Greater Noida) ನಿಕ್ಕಿ ಭಾಟಿ (Nikki Bhati) ವರದಕ್ಷಿಣೆ (Dowry) ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆಸ್ಪತ್ರೆಗೆ ಸೇರಿಸುವ ಮುನ್ನ ಅವರು ತನ್ನ ಮಾವನ ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದ (Cylinder Blast) ಸುಟ್ಟ ಗಾಯಗಳಾದವು ಎಂದು ವೈದ್ಯರಿಗೆ ಹೇಳಿದ್ದರು ಎಂದು ತಿಳಿದುಬಂದಿದೆ. ಆಗಸ್ಟ್ 21ರಂದು ಆಸ್ಪತ್ರೆಗೆ ಕರೆತಂದಾಗ ನಿಕ್ಕಿ ಮಾತನಾಡುವ ಸ್ಥಿತಿಯಲ್ಲಿದ್ದರು ಎಂದು ವೈದ್ಯರು ಮತ್ತು ನರ್ಸ್ ತಿಳಿಸಿದ್ದಾರೆ. ಆದರೆ ಪೊಲೀಸರು ಭಾಟಿ ಮನೆಯಲ್ಲಿ ಸಿಲಿಂಡರ್ ಸ್ಫೋಟದ ಯಾವುದೇ ಸಾಕ್ಷ್ಯವನ್ನು ಕಂಡಿಲ್ಲ. ಈ ಹೇಳಿಕೆಯನ್ನು ಒತ್ತಾಯದಿಂದ ಹೇಳಿಸಲಾಗಿತ್ತೇ ಎಂದು ತನಿಖೆ ನಡೆಯುತ್ತಿದೆ.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ನಿಕ್ಕಿಯು ಶೇ. 80ರಷ್ಟು ಸುಟ್ಟ ಗಾಯಗಳಿಂದ ಸಾವು ಸಂಭವಿಸಿದೆ. ಆಕೆಯ ಸಹೋದರಿ ಕಾಂಚನ್, ನಿಕ್ಕಿಯ ಪತಿ ವಿಪಿನ್‌ನ ಸಹೋದರ ರೋಹಿತ್‌ನನ್ನು ಮದುವೆಯಾಗಿದ್ದಾಳೆ. ಕಾಂಚನ್, ನಿಕ್ಕಿಗೆ ಆಕೆಯ ಪತಿ ವಿಪಿನ್ ಮತ್ತು ಮಾವ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾಳೆ. ಘಟನೆಯ ನಂತರ ಬಂದ ಆಘಾತಕಾರಿ ವಿಡಿಯೊಗಳಲ್ಲಿ ವಿಪಿನ್ ನಿಕ್ಕಿಯನ್ನು ಹೊಡೆಯುವುದು, ಕೂದಲು ಹಿಡಿದು ಎಳೆಯುವುದು ಕಂಡುಬಂದಿದೆ. ಈ ವೇಳೆ ಆಕೆಯ ದೇಹದ ಮೇಲೆ ರಕ್ತದ ಕಲೆಗಳು ಕಾಣಿಸಿವೆ. ಮತ್ತೊಂದು ವಿಡಿಯೊದಲ್ಲಿ ನಿಕ್ಕಿ ಬೆಂಕಿಯಿಂದ ಸುಟ್ಟು ಮೆಟ್ಟಿಲಿನಿಂದ ಕುಸಿದು ಕೆಳಗೆ ಕುಳಿತಿರುವ ದೃಶ್ಯವಿದೆ.
ನಿಕ್ಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ, ಕೆಲವೇ ಗಂಟೆಗಳಲ್ಲಿ ಅವರು ಮೃತಪಟ್ಟಳು. ಅವರ ಎಂಟು ವರ್ಷದ ಮಗ ಘಟನೆಯ ಸಾಕ್ಷಿಯಾಗಿದ್ದ. “ಅಮ್ಮನ ಮೇಲೆ ಏನನ್ನೋ ಸುರಿದರು, ಕಪಾಳಕ್ಕೆ ಹೊಡೆದು, ಲೈಟರ್‌ನಿಂದ ಬೆಂಕಿ ಹಚ್ಚಿದರು” ಎಂದು ಮಗ ತಿಳಿಸಿದ್ದಾನೆ. ತಂದೆ ತಾಯಿಯನ್ನು ಕೊಂದಿದ್ದಾನೆಯೇ ಎಂದು ಕೇಳಿದಾಗ ಆತ ಹೌದು ಎಂದು ತಲೆಯಾಡಿಸಿದ್ದಾನೆ.
ಕಾಂಚನ್ ಅವರ ದೂರಿನ ಆಧಾರದ ಮೇಲೆ ವಿಪಿನ್, ಆತನ ತಂದೆ, ತಾಯಿ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಚನ್, ನಾನು ಮತ್ತು ನಿಕ್ಕಿ 36 ಲಕ್ಷ ರೂ. ವರದಕ್ಷಿಣೆ ಬೇಡಿಕೆಯೊಂದಿಗೆ ನಿರಂತರ ಕಿರುಕುಳಕ್ಕೆ ಒಳಗಾಗಿದ್ದೆವು ಎಂದು ಆರೋಪಿಸಿದ್ದಾರೆ. ಈ ಘಟನೆಯ ಫೋರೆನ್ಸಿಕ್ ವರದಿಯಿಂದ ಸಾವಿನ ನಿಖರ ಕಾರಣ ತಿಳಿಯಲಿದೆ.