Chikkaballapur News: ಎಲ್ಲರನ್ನೂ ಒಳಗೊಂಡ ಸಂಘಟನೆ ಕಟ್ಟಿದಾಗಲೇ ಸಾಮಾಜಿಕ ಬದಲಾವಣೆ ಸಾಧ್ಯ: ಕೋಟಿಗಾನಹಳ್ಳಿ ರಾಮಯ್ಯ
ಹುಣಸೀಕೋಟೆ ಹೋರಾಟ ಯಶಸ್ವಿಯಾಗಲು ಎಲ್ಲರನ್ನು ಒಳಗೊಂಡ ಸಂಘಟನೆಯೇ ಕಾರಣ ವಾಗಿತ್ತು. ಅದೇ ಮಾದರಿಯಲ್ಲಿ ಇಂದು ಕೂಡ ಬಹುತ್ವದ ನೆಲೆಗಟ್ಟಿನಲ್ಲಿ ಚಳವಳಿಯನ್ನು ಕಟ್ಟಬೇಕಿದೆ. ಕಣ್ಣಿಗೆ ಕಾಣುವ ಅಸಮಾನತೆಗಿಂತ ಸಮಾಜದೊಳಗಿನ ವಿಭಜನೆ ಮತ್ತು ಬಹಿಷ್ಕಾರ ವೇ ಹೆಚ್ಚು ಅಪಾಯಕಾರಿ. ದಸಂಸದೊಳಗಿನ ಬಹಿಷ್ಕೃತ ಮನೋಭಾವವನ್ನು ಮೊದಲು ನಿವಾರಿಸಬೇಕಿದೆ
-
ಚಿಕ್ಕಬಳ್ಳಾಪುರದಲ್ಲಿ ದಸಂಸ ಕಾರ್ಯಕರ್ತರ ಅಧ್ಯಯನ ಶಿಬಿರ; ಸಂಘಟನೆಯ ಪುನರುತ್ಥಾನಕ್ಕೆ ಆತ್ಮಾವಲೋಕನದ ಕರೆ
ಚಿಕ್ಕಬಳ್ಳಾಪುರ: ದಲಿತ ಸಂಘರ್ಷ ಸಮಿತಿಯು ಕಳೆದ ಐದು ದಶಕಗಳಲ್ಲಿ ತೆಗೆದುಕೊಂಡ ರಾಜಕೀಯ ಹಾಗೂ ಸಾಂಘಿಕ ನಿರ್ಧಾರಗಳನ್ನು ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಚಳವಳಿಯ ಭವಿಷ್ಯವೇ ಅಪಾಯಕ್ಕೆ ಸಿಲುಕಲಿದೆ. ದಸಂಸ ಎಲ್ಲರನ್ನೂ ಒಳಗೊಂಡ ಸಮಗ್ರ ಚಳವಳಿಯಾಗಿ ಮರುಸಂಘಟನೆಯಾಗಬೇಕಿದ್ದು, ನಾಯಕರು ಹಣ ಮತ್ತು ಅಧಿಕಾರದ ಆಮಿಷದಿಂದ ದೂರವಿದ್ದು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ದಸಂಸದ ಹಿರಿಯ ಮುಖಂಡ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ತಾಲೂಕಿನ ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಿನಾಥಬೆಟ್ಟದಲ್ಲಿ ದಲಿತ ಸಂಘರ್ಷ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ ಆಯೋಜಿಸಿದ್ದ ಕಾರ್ಯಕರ್ತರ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹುಣಸೀಕೋಟೆ ಹೋರಾಟ ಯಶಸ್ವಿಯಾಗಲು ಎಲ್ಲರನ್ನು ಒಳಗೊಂಡ ಸಂಘಟನೆಯೇ ಕಾರಣ ವಾಗಿತ್ತು. ಅದೇ ಮಾದರಿಯಲ್ಲಿ ಇಂದು ಕೂಡ ಬಹುತ್ವದ ನೆಲೆಗಟ್ಟಿನಲ್ಲಿ ಚಳವಳಿಯನ್ನು ಕಟ್ಟಬೇಕಿದೆ. ಕಣ್ಣಿಗೆ ಕಾಣುವ ಅಸಮಾನತೆಗಿಂತ ಸಮಾಜದೊಳಗಿನ ವಿಭಜನೆ ಮತ್ತು ಬಹಿಷ್ಕಾರ ವೇ ಹೆಚ್ಚು ಅಪಾಯಕಾರಿ. ದಸಂಸದೊಳಗಿನ ಬಹಿಷ್ಕೃತ ಮನೋಭಾವವನ್ನು ಮೊದಲು ನಿವಾರಿಸಬೇಕಿದೆ ಎಂದು ಹೇಳಿದರು.
ಯುವ ಮುಖಂಡ ನರಸಿಂಹಮೂರ್ತಿ ಮಾತನಾಡಿ, ದಲಿತ ಸಮುದಾಯದ ಮೇಲಿನ ದೌರ್ಜನ್ಯ ಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೂ ಸಂಘಟನೆಗಳು ನಿರೀಕ್ಷಿತ ಮಟ್ಟದಲ್ಲಿ ಧ್ವನಿ ಎತ್ತುತ್ತಿಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿ, ಎಸ್‌ಸಿಪಿ–ಟಿಎಸ್‌ಪಿ ಅನುದಾನದ ಸಮರ್ಪಕ ಬಳಕೆ, ಒಳಮೀಸಲಾತಿ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಗಂಭೀರ ಚರ್ಚೆ ಮತ್ತು ಹೋರಾಟ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ದಸಂಸ ಜಿಲ್ಲಾ ಮುಖಂಡ ಗಡ್ಡಂ ವೆಂಕಟೇಶ್ ಮಾತನಾಡಿ, ಸ್ವಘೋಷಿತ ನಾಯಕತ್ವಕ್ಕೆ ಅವಕಾಶ ನೀಡದೆ ಕಾರ್ಯಕರ್ತರ ಆಧಾರಿತ ಸಂಘಟನೆಯನ್ನು ಕಟ್ಟಬೇಕಿದೆ. ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ಚಳವಳಿಯ ಮುಖ್ಯವಾಹಿನಿಗೆ ತಂದು ಹೊಸ ತಲೆಮಾರಿನ ನಾಯಕತ್ವ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಂತಕ ಶಿವಸುಂದರ್, ದು. ಸರಸ್ವತಿ, ದಸಂಸ ಮುಖಂಡರಾದ ರಾಜಾಕಾಂತ್, ಪರಮೇಶ್, ಎನ್. ವೆಂಕಟೇಶ್ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.