ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಹಿರಿಯ ನಾಗರಿಕರ ಕುಂದುಕೊರತೆಗಳ ಆಲಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಅಗತ್ಯವಿದ್ದಲ್ಲಿ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ವಾಪಸ್ಸು ಪಡೆಯಲು ಇರುವ ಕಾನೂನು ಅವಕಾಶಗಳ ಬಗ್ಗೆಯೂ ಮಾರ್ಗದರ್ಶನ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು ದೊರಕುವಂತೆ ಕ್ರಮವಹಿಸಬೇಕು. ಅಲ್ಲದೆ ಹಿರಿಯ ನಾಗರಿಕರ ಇಂತಹ ಸಮಸ್ಯೆಗಳಿಗೆ ಉಪವಿಭಾಗಾಧಿಕಾರಿ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಈ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು

ಹಿರಿಯ ನಾಗರಿಕರ ಕುಂದುಕೊರತೆಗಳ ಆಲಿಸಲು ಸೂಚನೆ

-

Profile
Ashok Nayak Sep 28, 2026 9:31 PM

ಚಿಕ್ಕಬಳ್ಳಾಪುರ: ಹಿರಿಯ ನಾಗರಿಕರ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸೂಚಿಸಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದರು.

ಹಿರಿಯ ನಾಗರಿಕರನ್ನು ಅವರ ಮಕ್ಕಳು, ಅಳಿಯ, ಸೊಸೆ ಅಥವಾ ಕುಟುಂಬದ ಇತರ ಸದಸ್ಯರುಗಳು ಪಾಲನೆ ಪೋಷಣೆ ಮಾಡದಿರುವ ಕುರಿತು ದೂರುಗಳು ಬಂದಲ್ಲಿ, ಅಂತಹ ಪ್ರಕರಣಗಳನ್ನು ಗುರುತಿಸಿ ಸಂಬಂಧಪಟ್ಟ ಕುಟುಂಬದ ಸದಸ್ಯರನ್ನು ಕರೆಸಿ ಹಿರಿಯ ನಾಗರಿಕರನ್ನು ಗೌರವಯುತವಾಗಿ ಪಾಲನೆ–ಪೋಷಣೆ ಮಾಡುವಂತೆ ಮನವೊಲಿಸಬೇಕು. ಮನವೊಲಿಕೆ ಮೂಲಕ ಸಮಸ್ಯೆ ಬಗೆಹರಿಯದಿದ್ದಲ್ಲಿ,ಕಾನೂನಿನಡಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಿಳಿಸಿದರು.

ಇದನ್ನೂ ಓದಿ: Chikkaballapur News: ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ: ಜಿಲ್ಲೆಯಲ್ಲಿ ಸಹಾಯವಾಣಿ ಕೇಂದ್ರಗಳ ಸ್ಥಾಪನೆ: 25,584 ಮತದಾರರು; ಸೆ.29ಕ್ಕೆ ಅಧಿಸೂಚನೆ, ಅ.23ರಂದು ಮತದಾನ

ಹಿರಿಯ ನಾಗರಿಕರ ಪಾಲನೆ ಪೋಷಣೆಗೆ ಸಂಬಂಧಿಸಿದಂತೆ ಮಕ್ಕಳ ಅಥವಾ ಸಂಬಂಧಪಟ್ಟವರ ಸಂಬಳ ಅಥವಾ ಇತರ ಆದಾಯ ಮೂಲದಿಂದ ಹಣ ಕಡಿತಗೊಳಿಸುವುದು, ಆಸ್ತಿ ದಾಖಲೆಗಳಲ್ಲಿ ಬಾಕಿ ನಮೂದಿಸುವುದು ಸೇರಿದಂತೆ ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. 

ಅಗತ್ಯವಿದ್ದಲ್ಲಿ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ವಾಪಸ್ಸು ಪಡೆಯಲು ಇರುವ ಕಾನೂನು ಅವಕಾಶಗಳ ಬಗ್ಗೆಯೂ ಮಾರ್ಗದರ್ಶನ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು ದೊರಕುವಂತೆ ಕ್ರಮವಹಿಸಬೇಕು. ಅಲ್ಲದೆ ಹಿರಿಯ ನಾಗರಿಕರ ಇಂತಹ ಸಮಸ್ಯೆಗಳಿಗೆ ಉಪವಿಭಾಗಾಧಿಕಾರಿ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಈ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಪ್ಯಾನಲ್ ವಕೀಲರ ಸಹಕಾರ ಪಡೆದು ಅರ್ಹ ಹಿರಿಯ ನಾಗರಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು  ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಎರಡು ತಿಂಗಳಿಗೆ ಒಮ್ಮೆಯಂತೆ ನಿರಂತರವಾಗಿ ಹಿರಿಯ ನಾಗರಿಕರ ಕುಂದುಕೊರತೆಗಳ ಸಭೆಗಳನ್ನು ಆಯೋಜಿಸಿ, ಸಮಸ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಯಾವ ಸಮಸ್ಯೆಯನ್ನು ಯಾವ ಇಲಾಖೆಯ ಮೂಲಕ ಪರಿಹರಿಸಬಹುದು ಎಂಬುದನ್ನು ಗುರುತಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಉಚಿತ ಕಾನೂನು ನೆರವು ಪಡೆಯಿರಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಮೂಲಕ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ  ಕಡಿಮೆ ಇರುವ ಅರ್ಹರು ಉಚಿತ ಕಾನೂನು ನೆರವು ಪಡೆಯಬಹುದಾಗಿದೆ. ಈ ಕುರಿತು ಸಾರ್ವಜನಿಕರು ಜಾಗೃತಿ ಹೊಂದಬೇಕು. ಸಮಸ್ಯೆ ಎದುರಾದ ಸಂದರ್ಭದಲ್ಲಿ ಅನಧಿಕೃತ ವ್ಯಕ್ತಿಗಳ ಮೊರೆ ಹೋಗದೆ, ಕಾನೂನು ಸೇವಾ ಸಂಸ್ಥೆಗಳ ಮೂಲಕ ಸೂಕ್ತ ಪರಿಹಾರ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಹಿರಿಯ ನಾಗರಿಕರಿಗೆ ಊರುಗೋಲು ಹಾಗೂ ಗುರುತಿನ ಚೀಟಿಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಪ್ರೇಮಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ವೆಂಕಟೇಶರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚೇತನ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜ್ಯೋತಿಲಕ್ಷ್ಮೀ, ವಿವಿಧ ಇಲಾಖೆಗಳ ಅಧಿಕಾರಿಗಳು, ವಕೀಲರು ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

ಹಿರಿಯ ನಾಗರಿಕರಿಗಾಗಿ ಕ್ರೀಡಾಕೂಟ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆದವು. ನೂರಾರು ಹಿರಿಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು.