ಗೌರಿಬಿದನೂರು : ಸಮಾಜದಲ್ಲಿ ಇಂದಿಗೂ ಜನರಲ್ಲಿ ನಂಬಿಕೆ, ವಿಶ್ವಾಸ, ಮಾನವೀಯತೆ ಮತ್ತು ಸ್ವಾವಲಂಭಿ ಬದುಕನ್ನು ಮೈಗೂಡಿಸಿಕೊಂಡಿರುವ ಏಕೈಕ ಸಮುದಾಯ ಎಂದರೆ ಅದು ಹಿಂದೂ ಸಾದರ ಸಮುದಾಯ ಮಾತ್ರವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್(MP Dr. K.Sudhakar) ತಿಳಿಸಿದರು.
ನಗರದ ಇಡಗೂರು ರಸ್ತೆಯಲ್ಲಿನ ವೀರಂಡಹಳ್ಳಿಯಲ್ಲಿ ಶುಕ್ರವಾರ ಹಿಂದೂ ಸಾದರ ಕ್ಷೇಮಾ ಭಿವೃದ್ಧಿ ಸಂಘದ ಆವರಣದಲ್ಲಿ ಆಯೋಜಿಸಿದ್ದ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಾದರ ಸಮುದಾಯದ ಹಿರಿಯ ಡಾ.ಮುಖ್ಯಮಂತ್ರಿ ಚಂದ್ರು ಈ ಸಮುದಾಯಕ್ಕೆ ದೊಡ್ಡ ನಕ್ಷತ್ರ ವಿದ್ದಂತೆ. ಸಮುದಾಯವು ಮೂಲತಃ ಕೃಷಿ ಚಟುವಟಿಕೆಯನ್ನು ನಂಬಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಸಂತಸದ ವಿಚಾರವಾಗಿದೆ. ನೂತನ ಸಮುದಾಯ ಭವನ ನಿರ್ಮಾಣಕ್ಕಾಗಿ ಸ್ಥಳೀಯ ಸಂಸದರ ನಿಧಿಯಿಂದ ಎರಡು ಕಂತು ಗಳಲ್ಲಿ 50 ಲಕ್ಷ ನೀಡಲು ಬದ್ಧನಾಗಿದ್ದು, ನಂತರ ವೈಯಕ್ತಿಕ ಸಹಾಯ ಮಾಡುವ ಭರವಸೆಯನ್ನು ನೀಡುತ್ತೇನೆ ಎಂದರು.
ಇದನ್ನೂ ಓದಿ: Gauribidanur News: ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ
ಸಮುದಾಯದಲ್ಲಿ ಉತ್ತಮ ನಾಯಕತ್ವದ ಗುಣದ ಜೊತೆಗೆ ಸಂಸ್ಕಾರ, ನಾಗರೀಕತೆ ಮತ್ತು ಪರಂಪರೆ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಭವಿಷ್ಯದಲ್ಲಿ ಸಮುದಾಯವು ಸದೃಢವಾಗಿ ನಿರ್ಮಾಣ ವಾಗಲು ನಾಯಕತ್ವ ಗುಣಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರವಿರುತ್ತದೆ ಎಂದು ಹೇಳಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಹಿಂದೂ ಸಾದರ ಸಮುದಾಯದವರು ದಶಕ ಗಳಿಂದಲೂ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ವಸತಿ ಕೊಡಿಸುವ ನಿಟ್ಟಿನಲ್ಲಿ ಪ್ರತೀ ತಾಲ್ಲೂಕಿನಲ್ಲಿ ಸುಸಜ್ಜಿತವಾದ ವಸತಿ ನಿಲಯಗಳನ್ನು ಮಾಡಿರುವುದು ಸಂತಸದ ವಿಚಾರವಾಗಿದೆ. ನಗರದಲ್ಲಿ ನೂತನವಾಗಿ ಬೃಹತ್ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ದ್ದು ಕಾಮಗಾರಿ ಪೂರ್ಣವಾಗಿರುವವರೆಗೂ ನಾನು ನಿಮ್ಮೊಂದಿಗೆ ಇರುತ್ತೇನೆ. ಇಡೀ ರಾಜ್ಯದಲ್ಲಿ ತನ್ನದೇ ವಿಶಿಷ್ಟ ಅಸ್ಮಿತೆ ಮತ್ತು ಗುರುತನ್ನು ಹೊಂದಿರುವ ಸಾದರ ಸಮುದಾಯವು ಸಮಾಜಕ್ಕೆ ದೊಡ್ಡ ಆಸ್ತಿಯಿದ್ದಂತೆ, ಕ್ಷೇತ್ರದಲ್ಲಿ ರಾಜಕೀಯವಾಗಿ ನೆಲೆ ಕಾಣಲು ಈ ಸಮುದಾಯದ ಸಹಕಾರ ಅಗತ್ಯವಾಗಿದೆ. ಈಗಾಗಲೇ ಸ್ಥಳೀಯ ಶಾಸಕರ ನಿಧಿಯಿಂದ 75 ಲಕ್ಷ ಅನುದಾನ ನೀಡಿದ್ದು, ವೈಯಕ್ತಿಕ ಸಹಕಾರವೂ ನೀಡಲಿದ್ದೇನೆ ಎಂಬ ಭರವಸೆ ನೀಡಿದರು.
ಸಮುದಾಯದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಿ.ಈ.ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಹಿಂದೂ ಸಾದರ ಸಮುದಾಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಗೌರಿಬಿದನೂರು ನಮಗೆ ಶಕ್ತಿ ಕೇಂದ್ರವಾಗಿದೆ. ಈ ಭಾಗದಲ್ಲಿ ನೂತನ ಸಮುದಾಯ ಭವನ ಶಂಕುಸ್ಥಾಪನೆಗೆ ಅನೇಕ ಗಣ್ಯರು ಸಾಕ್ಷಿಯಾಗಿದ್ದಾರೆ. ಎಲ್ಲ ಸಮುದಾಯದವರೊಂದಿಗೆ ಸ್ನೇಹ ಮತ್ತು ಸಾಮರಸ್ಯದೊಂದಿಗೆ ಬೆರೆತು ಬಾಳುವ ಗುಣ ನಮ್ಮ ಸಮುದಾಯದವರಾಗಿದ್ದಾರೆ. ಹಿರಿಯರಾದ ಪೂಜ್ಯ ಮಂಡಿ ಹರಿಯಣ್ಣ ನವರು ಹಾಕಿದ ಅಡಿಪಾಯದಿಂದ ಇಂದು ನಾವೆಲ್ಲರೂ ಸಮುದಾಯದಲ್ಲಿ ಒಗ್ಗಟ್ಟಿನಿಂದ ಸೇರಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟಿತರಾಗಿ ಎಲ್ಲರ ಸಹಕಾರ ಮತ್ತು ಮಾರ್ಗ ದರ್ಶನ ಪಡೆದು ಸಮುದಾಯವನ್ನು ಮುನ್ನೆಲೆಗೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.
ಸಮುದಾಯದ ಹಿರಿಯರು ಮತ್ತು ಮಾಜಿ ಶಾಸಕರಾದ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸಮುದಾಯದ ಅಧ್ಯಕ್ಷರಾಗಿ ಡಿ.ಈ.ರವಿಕುಮಾರ್ ನೇತೃತ್ವ ವಹಿಸಿಕೊಂಡ ಬಳಿಕ ಸಮಾಜದಲ್ಲಿ ನಮ್ಮ ಸಣ್ಣ ಸಮುದಾಯವು ದೊಡ್ಡ ಸಮಯದಾಯಗಳೊಂದಿಗೆ ಸವಾಲೊಡ್ಡಲು ಸಾಧ್ಯವಾಗಿದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಮಂಡಿ ಹರಿಯಣ್ಣ ನವರು ನಂತರ ಮಲ್ಲಯ್ಯನವರು ಸ್ಥಾಪನೆ ಮಾಡಿದ ಈ ಸಂಘದ ಅಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ನೂತನ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳೀಯ ಸಂಸದರು, ಶಾಸಕರು ಸೇರಿದಂತೆ ಇತರ ಗಣ್ಯರು ಉದಾರವಾಗಿ ಅನುದಾನ ನೀಡಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಆರಂಭಿಸಿ ನಿಗದಿತ ಸಮಯಕ್ಕೆ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಹೇಳಿದರು.
ಡಾ.ಎಚ್.ಎನ್ ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ ಹೆಚ್ಚಿನ ಸಮುದಾಯವಿರುವ ಹಿಂದೂ ಸಾದರು ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದು ವರೆದಿದ್ದು ಸ್ಥಳೀಯ ರಾಜಕೀಯವಾಗಿ ಈ ಸಮುದಾಯವು ಸದಾ ಕಿಂಗ್ ಮೇಕರ್ ಆಗಿದೆ. ಈ ಭಾಗದಲ್ಲಿ ಯಾರೇ ಅಧಿಕಾರ ಪಡೆಯಬೇಕಾದರೂ ಸಾದರ ಸಮುದಾಯದ ಬೆಂಬಲ ಅತ್ಯವಶ್ಯಕ ವಾಗಿದೆ. ನೂತನ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳೀಯ ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರೊAದಿಗೆ ಸಮುದಾಯದ ನಿಯೋಗ ತೆರಳಿ ಅಗತ್ಯವಾಗಿ ೧ ಕೋಟಿಯ ಅನುದಾನ ಕೊಡಿಸುವ ಭರವಸೆಯಿದೆ ಎಂದು ಹೇಳಿದರು.
ಸಮುದಾಯದ ಮುಖಂಡರು, ಜಿ.ಪಂ ಮಾಜಿ ಅಧ್ಯಕ್ಷರಾದ ಸಿ.ಆರ್.ನರಸಿಂಹಮೂರ್ತಿ ಮಾತ ನಾಡಿ, ನಾನು ರಾಜಕೀಯವಾಗಿ ಬೆಳೆಯಲು ಈ ಭಾಗದಲ್ಲಿನ ನಮ್ಮ ಸಮುದಾಯವೇ ಪ್ರಮುಖ ಕಾರಣವಾಗಿದೆ. ಸದಾ ಸ್ವಾವಲಂಭಿಗಳಾಗಿ ಎಲ್ಲ ಸಮುದಾಯದ ಜನರೊಂದಿಗೆ ಸಾಮರಸ್ಯದಿಂದ ಬೆರೆತು ಬಾಳುವ ಸ್ವಭಾವ ಹೊಂದಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಆರ್ಥಿಕ ಸಹಕಾರ ನೀಡಿದ ಗಣ್ಯರನ್ನು ಅಭಿನಂಧಿಸಿ ಗೌರವಿಸಿದರು.
ಕಾರ್ಯಕ್ರಮದದಲ್ಲಿ ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ, ಎನ್.ಆರ್.ಐ ಪೋರಂನ ಮಾಜಿ ಉಪಾಧ್ಯಕ್ಷರಾದ ಎಸ್.ವಿ.ಪ್ರಕಾಶ್, ಮಾಜಿ ಕಾರ್ಪೋರೇಟ್ ಎಸ್.ಜಿ.ನಾಗರಾಜ್, ಕೇಂದ್ರ ಸಂಘದ ಗೌರವಾಧ್ಯಕ್ಷರಾದ ಕ್ಯಾಪ್ಟನ್ ಎಂ.ಎಂ.ಹರೀಶ್, ಉಪಾಧ್ಯಕ್ಷರಾದ ಸಿ.ರವಿಶಂಕರ್, ಪ್ರಧಾನ ಕಾರ್ಯದರ್ಶಿ ಆರ್.ಶಿವಶಂಕರ್, ಖಜಾಂಚಿ ಜಿ.ಆರ್.ರಾಜಶೇಖರ್, ಜಂಟಿ ಕಾರ್ಯದರ್ಶಿ ಜಿ.ಸಿ.ಶಶಿಧರ್, ತಾಲ್ಲೂಕು ಸಮಿತಿಯ ಗೌರವಾಧ್ಯಕ್ಷರಾದ ಜಿ.ಎನ್.ಕೃಷ್ಣಯ್ಯ, ಅಧ್ಯಕ್ಷರಾದ ಆರ್.ವೇಣುಗೋಪಾಲ್, ಉಪಾಧ್ಯಕ್ಷ ಆರ್.ಪಿ.ಗೋಪಾಲಗೌಡ, ಕಾರ್ಯದರ್ಶಿ ಟಿ.ಕೆ.ವಿಜಯ ರಾಘವ, ಖಜಾಂಚಿ ಸಂಕೇತ್ ಶ್ರೀರಾಮ್, ಸಮುದಾಯದ ಮುಖಂಡರಾದ ಎ.ಡಿ.ಬಲರಾಮಯ್ಯ, ಎಂ.ಜಿ.ಶ್ರೀನಿವಾಸಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.