ಶಿಡ್ಲಘಟ್ಟ: ಪೌರಾಯುಕ್ತರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ರಾಜೀವ್ ಗೌಡ(Rajiv Gowda) ಅವರನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದೇ ವೇಳೆ, ಪೊಲೀಸರು ಸಲ್ಲಿಸಿದ್ದ ಪೊಲೀಸ್ ಕಸ್ಟಡಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದಲ್ಲಿ ಸಹಾಯ ಮಾಡಿದ್ದ ಆರೋಪದಡಿ ಬಂಧನಕ್ಕೊಳಗಾಗಿದ್ದ ಕೇರಳದ ಮೈಕಲ್ ಜೋಸೆಫ್ ರೇಗೋಗೆ ನ್ಯಾಯಾಲಯ ಷರತ್ತುಬದ್ಧ ಬೇಲ್ ಮಂಜೂರು ಮಾಡಿದೆ.
ಬಂಧನದಲ್ಲಿದ್ದ ಇಬ್ಬರು ಆರೋಪಿಗಳನ್ನು ಶಿಡ್ಲಘಟ್ಟ ನ್ಯಾಯಾಲಯಕ್ಕೆ ಭದ್ರತಾ ಕ್ರಮ ಗಳೊಂದಿಗೆ ಹಾಜರುಪಡಿಸಲಾಯಿತು. ತನಿಖೆಗೆ ಪೊಲೀಸ್ ಕಸ್ಟಡಿ ಅಗತ್ಯವಿದೆ ಎಂದು ಪೊಲೀಸರು ವಾದ ಮಂಡಿಸಿದರೂ, ದಾಖಲೆಗಳು ಹಾಗೂ ಪ್ರಕರಣದ ಪರಿಸ್ಥಿತಿಯನ್ನು ಪರಿಶೀಲಿಸಿದ ನ್ಯಾಯಾಧೀಶರು ಆ ಅರ್ಜಿಯನ್ನು ತಿರಸ್ಕರಿಸಿ, ರಾಜೀವ್ ಗೌಡ ಅವರನ್ನು ಜೆ ಸಿ ಕಸ್ಟಡಿಗೆ ಕಳುಹಿಸುವಂತೆ ಆದೇಶಿಸಿದರು. ಮೈಕಲ್ ಜೋಸೆಫ್ ರೇಗೋ ಪರ ವಕೀಲರು ಮಂಡಿಸಿದ ವಾದಗಳನ್ನು ಪರಿಗಣಿಸಿ ಬೇಲ್ ನೀಡಲಾಯಿತು.
ಇದನ್ನೂ ಓದಿ: Rajeev Gowda Arrested: ಕಾನೂನು ರೀತಿಯಲ್ಲಿಯೇ ರಾಜೀವ್ ಗೌಡರ ಬಂಧನವಾಗಿದೆ: ಎಸ್‌ಪಿ ಕುಶಾಲ್ ಚೌಕ್ಸೆ ಹೇಳಿಕೆ
ವಿಚಾರಣೆ ಬಳಿಕ ಆರೋಪಿಗಳನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯುವ ವೇಳೆ ರಾಜೀವ್ ಗೌಡ ಅವರ ಕೆಲ ಬೆಂಬಲಿಗರು ಜೈಕಾರ ಕೂಗಿ ಗದ್ದಲ ಸೃಷ್ಟಿಸಲು ಯತ್ನಿಸಿದರು.
ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಡಿವೈಎಸ್ಪಿ ಮುರುಡಿ ದಾರ್ ಅವರ ನೇತೃತ್ವದಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ನ್ಯಾಯಾಲಯದ ಆವರಣ ಹಾಗೂ ಸುತ್ತಮುತ್ತ ಹೆಚ್ಚುವರಿ ಭದ್ರತೆ ಒದಗಿಸಲಾಗಿತ್ತು. ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನಿಗದಿತ ದಿನಾಂಕಕ್ಕೆ ಮುಂದೂಡಿದೆ. ಈ ಘಟನೆ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣ ವಾಗಿದೆ.