K H Puttaswamy Gowda: ಸ್ವಾತಂತ್ರ್ಯ, ಸಮಾನತೆಯನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಿ: ಪುಟ್ಟಸ್ವಾಮಿಗೌಡ
ಸ್ವಾತಂತ್ರ್ಯವಿಲ್ಲದೆ ಬೇರೆಯವರ ಅಡಿಯಾಳಾಗಿ ಬದುಕುವುದು ಅತ್ಯಂತ ಕಷ್ಟ. ಇಂದು ಭಾರತದಲ್ಲಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳನ್ನೂ ಟೀಕಿಸುವಷ್ಟು ಸ್ವಾತಂತ್ರ್ಯವಿದೆ. ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹಲವು ಹಕ್ಕುಗಳನ್ನು ಕಲ್ಪಿಸಿದೆ. ಆದರೆ ವಿಶ್ವದ ಹಲವು ದೇಶಗಳಲ್ಲಿ ಜನರು ಇನ್ನೂ ಗುಲಾಮರಂತೆ ಬದುಕುತ್ತಿದ್ದಾರೆ
-
ಗೌರಿಬಿದನೂರು: ದೇಶ ನಮಗೆ ನೀಡಿರುವ ಸ್ವಾತಂತ್ರ್ಯ ಹಾಗೂ ಸಮಾನತೆ ಸ್ವೇಚ್ಛೆಯಾಗಬಾರದು. ಅವುಗಳನ್ನು ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ(MLA K H Puttaswamy Gowda) ಕರೆ ನೀಡಿದರು.
ನಗರದ ನೇತಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ಸ್ವಾತಂತ್ರ್ಯವಿಲ್ಲದೆ ಬೇರೆಯವರ ಅಡಿಯಾಳಾಗಿ ಬದುಕುವುದು ಅತ್ಯಂತ ಕಷ್ಟ. ಇಂದು ಭಾರತದಲ್ಲಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳನ್ನೂ ಟೀಕಿಸುವಷ್ಟು ಸ್ವಾತಂತ್ರ್ಯವಿದೆ. ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹಲವು ಹಕ್ಕುಗಳನ್ನು ಕಲ್ಪಿಸಿದೆ. ಆದರೆ ವಿಶ್ವದ ಹಲವು ದೇಶಗಳಲ್ಲಿ ಜನರು ಇನ್ನೂ ಗುಲಾಮರಂತೆ ಬದುಕುತ್ತಿದ್ದಾರೆ ಎಂದರು.
ಇದನ್ನೂ ಓದಿ: MLA K H Puttaswamy Gowda: ಅಭಿವೃದ್ಧಿ ಕಾರ್ಯ ಮೆಚ್ಚಿ ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ: ಕೆ.ಎಚ್.ಪುಟ್ಟಸ್ವಾಮಿಗೌಡ
80 ವರ್ಷಗಳ ಹಿಂದೆ ಭಾರತವೂ ಗುಲಾಮಗಿರಿಯ ಸಂಕಷ್ಟದಲ್ಲಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ಶಾಂತಿಯುತ ಹೋರಾಟ ನಡೆದರೆ, ಭಗತ್ ಸಿಂಗ್ ಅವರಂತಹ ಕ್ರಾಂತಿಕಾರಿಗಳು ಉಗ್ರ ಹೋರಾಟದ ಮೂಲಕ ಬ್ರಿಟಿಷರ ವಿರುದ್ಧ ಸೆಣಸಿದರು. ಅಸಂಖ್ಯಾತ ಹೋರಾಟಗಾರರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನ ವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಸ್ವಾತಂತ್ರ್ಯಾನಂತರ ಭಾರತ ಶಿಕ್ಷಣ, ಕೃಷಿ, ಕೈಗಾರಿಕೆ, ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡಿದೆ. ಆದರೂ ದೇಶದ ಅಭಿವೃದ್ಧಿಗೆ ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ. ಬಹುಸಂಸ್ಕೃತಿಯ ಭಾರತದಲ್ಲಿ ಎಲ್ಲ ಜಾತಿ, ಧರ್ಮ ಹಾಗೂ ಸಮುದಾಯದ ಜನರು ಒಗ್ಗಟ್ಟಿನಿಂದ ದುಡಿದಾಗ ಮಾತ್ರ ದೇಶ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಯುವಕರು ಶ್ರಮ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ತಹಸೀಲ್ದಾರ್ ಕೆ.ಎಂ. ಅರವಿಂದ್ ಮಾತನಾಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕರು ಮಹತ್ವದ ಪಾತ್ರ ವಹಿಸಿದ್ದಾರೆ. ತಾಲೂಕಿನ ವಿದುರಾಶ್ವತ್ಥದಲ್ಲೂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜಲಿಯನ್ ವಾಲಾಬಾಗ್ ಮಾದರಿಯ ಹತ್ಯಾಕಾಂಡ ನಡೆದಿದ್ದು, ಈ ನೆಲದ ತ್ಯಾಗವನ್ನು ಸ್ಮರಿಸಬೇಕು ಎಂದರು. 80 ವರ್ಷಗಳ ಪಯಣದಲ್ಲಿ ಭಾರತ ಎಲ್ಲ ಕ್ಷೇತ್ರ ಗಳಲ್ಲೂ ಮುಂಚೂಣಿಗೆ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಕೆ.ಹೊನ್ನಯ್ಯ ಮಾತನಾಡಿ, ಭಾರತ ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸುತ್ತಿದ್ದು, ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್, ಗೃಹರಕ್ಷಕ ದಳ ಹಾಗೂ ವಿವಿಧ ಶಾಲೆಗಳ ಬ್ಯಾಂಡ್ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಪೌರಾಯುಕ್ತ ಜಿ.ಕೆ. ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್. ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.