Gauribidanur News: ಕೈವಾರ ಜಯಂತ್ಯುತ್ಸವಕ್ಕೆ ಗೌರಿಬಿದನೂರಿನಿಂದ ತರಕಾರಿ, ದಿನಸಿ ಸಾಮಗ್ರಿಗಳ ರವಾನೆ
ಸೇವಾ ಯೋಗಿನಾರಾಯಣ ಅನ್ನದಾನ ಟ್ರಸ್ಟ್ ವತಿಯಿಂದ ಕಳೆದ 40 ವಾರಗಳಿಂದ ನಿರಂತರ ಅನ್ನದಾನ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಮುಂದೆಯೂ ಪ್ರತಿ ಈ ಸೇವೆ ಮುಂದು ವರಿಯಲಿದ್ದು, ತಾಲೂಕಿನ ಜನರು ಹಾಗೂ ಭಕ್ತರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ.
-
ಗೌರಿಬಿದನೂರು: ಗುರುಪೂರ್ಣಿಮೆ ಅಂಗವಾಗಿ ಶ್ರೀಕ್ಷೇತ್ರ ಕೈವಾರದಲ್ಲಿ ನಡೆಯಲಿರುವ ಯೋಗಿ ನಾರಾಯಣ ತಾತಯ್ಯನವರ ಜಯಂತ್ಯುತ್ಸವ ಹಾಗೂ ಮಹಾ ಅನ್ನದಾಸೋಹ ಕಾರ್ಯಕ್ರಮಕ್ಕಾಗಿ ಗೌರಿಬಿದನೂರಿನಿಂದ ಅಕ್ಕಿ ಮೂಟೆಗಳು, ತರಕಾರಿ ಹಾಗೂ ವಿವಿಧ ದಿನಸಿ ಪದಾರ್ಥಗಳನ್ನು ಭಕ್ತರು ಮತ್ತು ದಾನಿಗಳ ಸಹಕಾರದೊಂದಿಗೆ ರವಾನಿಸಲಾಯಿತು.
ಯೋಗಿನಾರಾಯಣ ಅನ್ನದಾನ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಈ ಸಂದರ್ಭದಲ್ಲಿ ಮಾತನಾಡಿ, ಸೇವಾ ಯೋಗಿನಾರಾಯಣ ಅನ್ನದಾನ ಟ್ರಸ್ಟ್ ವತಿಯಿಂದ ಕಳೆದ 40 ವಾರಗಳಿಂದ ನಿರಂತರ ಅನ್ನದಾನ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಮುಂದೆಯೂ ಪ್ರತಿ ಈ ಸೇವೆ ಮುಂದುವರಿಯ ಲಿದ್ದು, ತಾಲೂಕಿನ ಜನರು ಹಾಗೂ ಭಕ್ತರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯು ತ್ತಿದೆ. ಗುರುಪೂರ್ಣಿಮೆ ಪ್ರಯುಕ್ತ ನಡೆಯುವ ಜಯಂತ್ಯುತ್ಸವ ಹಾಗೂ ಅನ್ನದಾಸೋಹ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ತಾತಯ್ಯನವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ; Gauribidanur News: ವಿಧುರಾಶ್ವತ್ಥದಲ್ಲಿ ದೇಶಿ ಸಾಂಸ್ಕೃತಿಕ ಸಂಭ್ರಮ; ಜಾನಪದ ಕಲೆಗಳ ವೈಭವ ಅನಾವರಣ
ಬಲಿಜ ಸಮುದಾಯದ ಮುಖಂಡ ಅಶ್ವತ್ ಮಾತನಾಡಿ, ಗುರುಪೂರ್ಣಿಮೆ ಪ್ರಯುಕ್ತ ನಡೆಯುವ ಅನ್ನದಾಸೋಹಕ್ಕಾಗಿ ಭಕ್ತರು ಮತ್ತು ಸಾರ್ವಜನಿಕರು ಉದಾರವಾಗಿ ಅಗತ್ಯ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದ್ದು, ಸುಮಾರು 2 ಲಕ್ಷ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಎಂ.ಎಸ್. ಜಯರಾಮ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಕೈವಾರದ ಗುರುಪೂರ್ಣಿಮೆ ಮಹೋತ್ಸವ ದೇಶ-ವಿದೇಶಗಳ ಭಕ್ತರನ್ನು ಸೆಳೆಯುವ ಧಾರ್ಮಿಕ ಕೇಂದ್ರವಾಗಿ ಬೆಳೆದಿದೆ. ಚಿಂತಾಮಣಿ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಭಜನೆ, ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಾತಯ್ಯನವರ ಆಶೀರ್ವಾದ ಪಡೆಯುತ್ತಿದ್ದಾರೆ ಎಂದರು.
ನಗರಸಭೆಯ ಮಾಜಿ ಸದಸ್ಯ ರಮೇಶ್ ಕುಮಾರ್ ಮಾತನಾಡಿ, ಕೈವಾರ ತಾತಯ್ಯನವರ ಕೃಪೆ ಯಿಂದ ಈ ವರ್ಷ ಉತ್ತಮ ಮಳೆಯಾಗಿದ್ದು, ಕಳೆದ ವರ್ಷ ಎದುರಾದ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿರು ವುದು ಸಂತಸದ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಶ್ವತ್, ಮೋಹನ್, ಪ್ರದೀಪ್, ಪರಮೇಶ್, ವೆಂಕಟೇಶ್, ರಾಜು, ರವಿ, ಸಿದ್ದರೂಢ ಸ್ವಾಮಿ, ಮಾರ್ಕೆಟ್ ಮೋಹನ್, ಅನಿಲ್ ಕುಮಾರ್, ರವಿಕುಮಾರ್, ಶ್ರೀಧರ್, ಶಾಂತಮ್ಮ, ಜಯಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.