Chinthamani News: ನೀರಿನ ಅಭಾವ, ಯುಜಿಡಿ ಸಮಸ್ಯೆ: ಉಗ್ರ ಹೋರಾಟದ ಎಚ್ಚರಿಕೆ
ನಗರದಲ್ಲಿರುವ ಬೋರ್‌ವೆಲ್‌ಗಳ ಸಂಖ್ಯೆ, ಕಾರ್ಯ ನಿರ್ವಹಿಸುತ್ತಿರುವ ಹಾಗೂ ನಿಷ್ಕ್ರಿಯವಾಗಿರುವ ಬೋರ್‌ವೆಲ್‌ಗಳ ಕುರಿತು ಅಧಿಕಾರಿಗಳ ಬಳಿ ಸಮರ್ಪಕ ಮಾಹಿತಿ ಇಲ್ಲ. ನೀರಿನ ಪ್ರಮಾಣ ತಿಳಿಯಲು ನೀರಿನ ಹರಿವಿನ ಮಾಪಕ ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು
-
ಚಿಂತಾಮಣಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ನಗರಸಭೆ ಹಾಗೂ ಸ್ಥಳೀಯ ಆಡಳಿತ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ 13ರಿಂದ 18ನೇ ವಾರ್ಡ್‌ಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ 15ರಿಂದ 20 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆಯ ಜೊತೆಗೆ ಯುಜಿಡಿ ಸಮಸ್ಯೆಯೂ ಜನರ ಬದುಕನ್ನು ದುಸ್ತರಗೊಳಿಸಿದೆ ಎಂದರು.
ಇದನ್ನೂ ಓದಿ; Chinthamani News: ಸಾಲ ಮರುಪಾವತಿಗೆ ಒಂದು ವರ್ಷ ಒತ್ತಡ ಹೇರದಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲು ಒತ್ತಾಯ
ನಗರದಲ್ಲಿರುವ ಬೋರ್‌ವೆಲ್‌ಗಳ ಸಂಖ್ಯೆ, ಕಾರ್ಯನಿರ್ವಹಿಸುತ್ತಿರುವ ಹಾಗೂ ನಿಷ್ಕ್ರಿಯವಾಗಿರುವ ಬೋರ್‌ವೆಲ್‌ಗಳ ಕುರಿತು ಅಧಿಕಾರಿಗಳ ಬಳಿ ಸಮರ್ಪಕ ಮಾಹಿತಿ ಇಲ್ಲ. ನೀರಿನ ಪ್ರಮಾಣ ತಿಳಿಯಲು ನೀರಿನ ಹರಿವಿನ ಮಾಪಕ ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ನಗರಸಭೆಯ ಬೋರ್‌ವೆಲ್‌ಗಳ ಮೋಟಾರ್‌ಗಳು ಪದೇಪದೇ ದುರಸ್ತಿಗೊಳಗಾಗುತ್ತಿರುವ ಹೆಸರಿನಲ್ಲಿ ಸುಳ್ಳು ಬಿಲ್‌ಗಳ ಮೂಲಕ ಸಾರ್ವಜನಿಕ ಹಣ ದುರ್ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು. ಖಾಸಗಿ ನೀರು ಪೂರೈಕೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಗರಸಭೆಯ ಬೋರ್‌ವೆಲ್‌ಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ತಕ್ಷಣ ಸಮರ್ಪಕ ನೀರು ಪೂರೈಕೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.