Chikkaballapur News: ಅಂಬೇಡ್ಕರ್ ರೀತಿ ನಿರಂತರ ಅಧ್ಯನಶೀಲರಾಗುವ ಮೂಲಕ ದೇಶದ ಆಸ್ತಿಯಾಗಬೇಕು: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಬಣ್ಣನೆ
ಯಾವುದೇ ವ್ಯಕ್ತಿ ಶಿಕ್ಷಣ ಪಡೆದು ಬುದ್ಧಿವಂತನಾದರೆ ಆತನಿಗೆ ಮೋಸ ಮಾಡುವ ಪ್ರಯತ್ನವನ್ನು ಇತರರು ಮಾಡಲಾರರು. ಕೇವಲ ವಿದ್ಯಾವಂತರಾಗುವುದರಿಂದ ಜೀವನದ ಅರ್ಧ ಸಮಸ್ಯೆಗಳು ಪರಿಹಾರವಾಗುತ್ತವೆ. ಶಿಕ್ಷಣ ಪಡೆದವರು ಹುಲಿ ಹಾಲನ್ನು ಕುಡಿದವರಂತೆ ಶಕ್ತಿವಂತರು ಹಾಗೂ ಯುಕ್ತಿವಂತರು ಆಗುತ್ತಾರೆ ಎನ್ನುವುದು ಅಂಬೇಡ್ಕರ್ ಮಾತಾಗಿದೆ
-
ಚಿಕ್ಕಬಳ್ಳಾಪುರ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ರೀತಿಯಲ್ಲಿ ನಿರಂತರ ಅಧ್ಯಯನ ಶೀಲರಾಗುವ ಮೂಲಕ ವಿದ್ಯಾವಂತರಾಗುವ ಜೊತೆಗೆ ಉನ್ನತ ಸಾಧನೆ ಗಳನ್ನು ಮಾಡಿ ದೇಶದ ಅಸ್ತಿಯಾಗಿ ತಾವೆಲ್ಲರೂ ಹೊರಹೂಮ್ಮಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಜೈ ಭೀಮ್ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಡಾ. ಬಿ.ಆರ್. ಅಂಬೇಡ್ಕರ್ ಅವರ ೬೯ ನೇ ಮಹಾ ಪರಿನಿರ್ವಾಣ ದಿನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿ ಶಿಕ್ಷಣ ಪಡೆದು ಬುದ್ಧಿವಂತನಾದರೆ ಆತನಿಗೆ ಮೋಸ ಮಾಡುವ ಪ್ರಯತ್ನವನ್ನು ಇತರರು ಮಾಡಲಾರರು. ಕೇವಲ ವಿದ್ಯಾವಂತರಾಗುವುದರಿಂದ ಜೀವನದ ಅರ್ಧ ಸಮಸ್ಯೆಗಳು ಪರಿಹಾರವಾಗುತ್ತವೆ. ಶಿಕ್ಷಣ ಪಡೆದವರು ಹುಲಿ ಹಾಲನ್ನು ಕುಡಿದವರಂತೆ ಶಕ್ತಿವಂತರು ಹಾಗೂ ಯುಕ್ತಿವಂತರು ಆಗುತ್ತಾರೆ ಎನ್ನುವುದು ಅಂಬೇಡ್ಕರ್ ಮಾತಾಗಿದೆ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿ ಸಮಯವನ್ನು ವ್ಯರ್ಥ ಮಾಡದೆ. ಅನಗತ್ಯವಾಗಿ ಮೊಬೈಲ್ ಬಳಕೆ ಮಾಡದೆ ನಿರಂತರವಾಗಿ ಶೈಕ್ಷಣಿಕ ಸಾಧನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಯಾವುದೇ ವ್ಯಕ್ತಿ ಮೃತರಾದರೆ ಸಾಮಾನ್ಯವಾಗಿ ವೈಕುಂಠ ಸಮಾರಾಧನೆ ಹಾಗೂ ಶಿವಗಣರಾಧನೆ ಸೇರಿದಂತೆ ಇತರೆ ಕಾರ್ಯಗಳನ್ನು ಮಾಡುತ್ತಾರೆ ಆದರೆ ದೇಶಕ್ಕೆ ಕೊಡುಗೆ ನೀಡಿದ ಮಹಾತ್ಮರು ಮೃತರಾದರೆ “ಮಹಾ ಪರಿನಿರ್ವಾಣ ದಿನ”ವನ್ನಾಗಿ ಆಚರಿಸುತ್ತೇವೆ. ಅಂತಹ ಮಹಾತ್ಮರಿಗೆ ಸಾವಿಲ್ಲ. ಪ್ರತಿಯೊಬ್ಬರ ಹೋರಾಟದ ಶಕ್ತಿಯಾಗಿ, ಒಳ್ಳೆಯ ಕೆಲಸಗಳ ಸಾಕಾರ ಮೂರ್ತಿಯಾಗಿ ಜನರ ಮಧ್ಯೆಯೇ ಮಹಾತ್ಮರು ಚಿರಾಯುವಾಗಿರುತ್ತಾರೆ ಎಂದರು.
ಸಾಧನೆ ಮೂಲಕ ಮಹಾತ್ಮರಾದ ಅಂಬೇಡ್ಕರ್ ಅವರ ಅಪರಿಮಿತ ಜ್ಞಾನಕ್ಕೆ ಅಂಬೇಡ್ಕರ್ ಅವರೇ ಸಾಟಿ, ನಾವೆಲ್ಲ ಒಂದೆರಡು ಪದವಿಗಳನ್ನು ಪಡೆದರೆ ನಮಗೆಲ್ಲ ಅಹಂ ಹಾಗೂ ಕೋಡುಗಳು ಬರುತ್ತವೆ ಅನೇಕ ವಿಶ್ವವಿದ್ಯಾಲಯಗಳಲ್ಲಿ ಅನೇಕ ಅತ್ಯುನ್ನತ ಪದವಿಗಳನ್ನು ಪಡೆದಿದ್ದ ಅಂಬೇಡ್ಕರ್ ರವರಿಗೆ ಯಾವುದೇ ರೀತಿಯ ಅಹಂ ಇರಲಿಲ್ಲ ಬದಲಾಗಿ ಕೊನೆಯ ಜೀವಿತದ ಅವಧಿಯವರೆಗೂ ಅಧ್ಯಯನ ಶೀಲರಾಗಿ ಅಕ್ಷರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿ ದ್ದರು ಎಂದರು.
ಅAಬೇಡ್ಕರ್ ಅವರ ತತ್ವ ಚಿಂತನೆಗಳ ಬೆಳಕಿನಲ್ಲಿ ಇಂದು ದೇಶ ಸಮರ್ಥವಾಗಿ ಮುಂದುವರೆಯು ತ್ತಿದೆ. ಅಪಾರ ಜ್ಞಾನ, ಪಾಂಡಿತ್ಯವನ್ನು ಹೊಂದಿದ್ದ ಅಂಬೇಡ್ಕರ್ ಅವರು ಜಗತ್ತಿನ ಅಪ್ರತಿಮ ಜ್ಞಾನಿಗಳ ಮತ್ತು ಹೋರಾಟಗಾರರ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಭಾರತದಲ್ಲಿದ್ದ ಅನೇಕ ಶೋಷಣೆ, ಮೌಡ್ಯಗಳನ್ನ ವಿರೋಧಿಸಿ ಕಾನೂನು ರಚಿಸಿದ್ದಾರೆ. ಸರ್ವರಿಗೂ ಸಮಪಾಲು ಸಿಗಲಿ ಅನ್ನೋ ಮಹತ್ತರ ಆಶಯವನ್ನ ಹೊಂದಿದ್ದ ಮಹಾನ್ ವ್ಯಕ್ತಿ ಅಂಬೇಡ್ಕರ್. ಅವರೇ ಒಂದು ವಿಶ್ವವಿದ್ಯಾಲಯವಿದ್ದಂತೆ, ಅವರ ಬದುಕಿನ ಪುಟಗಳನ್ನು ತಿರುವಿದಂತೆ ಹೊಸ ಹೊಸ ವಿಚಾರಗಳು, ತಿಳಿದುಕೊಳ್ಳಲೇಬೇಕಾದ ಕಟು ಸತ್ಯಗಳು, ಬದುಕಿಗೆ ಪ್ರೇರಣೆ ತುಂಬುವ ಘಟನೆಗಳು ಸಿಗುತ್ತವೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾದ ಶಿಕ್ಷಕ ಜಗದೀಶ್ ಮುಗಳಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ, ಅವರ ಹೋರಾಟದ ಬದುಕು ಹಾಗೂ ಸಮಾಜಕ್ಕೆ ಅಂಬೇಡ್ಕರ್ ಅವರು ನೀಡಿದ ಕೊಡುಗೆ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾರ್ಹಣಾಧಿಕಾರಿ ಡಾ. ವೈ ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರವೀಣ್ ಪಾಟೀಲ್, ತಹಸೀಲ್ದಾರ್ ರಶ್ಮಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುಂಚಿತವಾಗಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹಾಗೂ ಗಣ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಜೈಭೀಮ್ ವಿದ್ಯಾರ್ಥಿನಿಲಯದ ಆವರಣ ದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.