ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Budget Benefit for Bagepally?: ಬಾಗೇಪಲ್ಲಿಗೆ ಈ ಬಾರಿ ರಾಜ್ಯ ಬಜೆಟ್ ನಲ್ಲಾದರೂ ಅನುದಾನ ಸಿಗಲಿದೆಯೇ ?

ತಾಲ್ಲೂಕಿನ ರೈತರು ಅತಿಹೆಚ್ಚಾಗಿ ಬೆಳೆಯುವ ಬೆಳೆಗಳಿಗೆ ತರಕಾರಿ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಬೇಕಿದೆ. ಕುಡಿಯುವ ಮತ್ತು ಕೃಷಿ ಚಟುವಟಿಕೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕಿದೆ. ಯುವಜನಾಂಗಕ್ಕೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೈಗಾರಿಕೆ ಗಳನ್ನು ಸ್ಥಾಪಿಸಬೇಕಿದೆ. ಹೀಗಾಗಿ, ಈ ಎಲ್ಲ ವಲಯಗಳಿಗೆ ಈ ಬಾರಿಯ ಬಜೆಟ್‌ ನಲ್ಲಿ ಅನುದಾನ ಸಿಗಲಿದೆ ಎಂಬ ಆಕಾಂಕ್ಷೆಯಲ್ಲಿದ್ದಾರೆ ತಾಲ್ಲೂಕಿನ ಜನರು.

ಬಾಗೇಪಲ್ಲಿಗೆ ರಾಜ್ಯ ಬಜೆಟ್ ನಲ್ಲಾದರೂ ಅನುದಾನ ಸಿಗಲಿದೆಯೇ ?

ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್ ಮೇಲೆ ತಾಲ್ಲೂಕಿನ ಜನರು ಭಾರಿ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. -

Ashok Nayak
Ashok Nayak Mar 5, 2026 11:30 PM

ಬಾಗೇಪಲ್ಲಿ: ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್ ಮೇಲೆ ತಾಲ್ಲೂಕಿನ ಜನರು ಭಾರಿ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ.

ಡಾ.ಎಂ.ನಂಜುಂಡಪ್ಪ ವರದಿಯಂತೆ ಅತಿ ಹಿಂದುಳಿದ ತಾಲ್ಲೂಕು ಆಗಿರುವ ಬಾಗೇಪಲ್ಲಿ ಯಲ್ಲಿ ನದಿನಾಲೆಗಳು ಇಲ್ಲ. ಅಂತರ್ಜಲ ಮಟ್ಟ ಕುಸಿತದಿಂದ ತಾಲ್ಲೂಕಿನಲ್ಲಿ 1500 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದ ತಾಲ್ಲೂಕಿನ ರೈತರು ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೃಷಿ ಭೂಮಿಗಳು ಇದೀಗ ಬಂಜರು ಭೂಮಿ ಗಳಾಗಿವೆ. ಇದರಿಂದ ಕೃಷಿ ಕೂಲಿಕಾರ್ಮಿಕರು ಮತ್ತು ಪದವಿ, ಐಟಿಐ ಮಾಡಿದ ಯುವಕ, ಯುವತಿಯರು ವಿವಿಧ ನಗರಗಳಿಗೆ ಗುಳೆ ಹೊರಟಿದ್ದಾರೆ.

ತಾಲ್ಲೂಕಿನ ರೈತರು ಅತಿಹೆಚ್ಚಾಗಿ ಬೆಳೆಯುವ ಬೆಳೆಗಳಿಗೆ ತರಕಾರಿ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಬೇಕಿದೆ. ಕುಡಿಯುವ ಮತ್ತು ಕೃಷಿ ಚಟುವಟಿಕೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕಿದೆ. ಯುವಜನಾಂಗಕ್ಕೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ. ಹೀಗಾಗಿ, ಈ ಎಲ್ಲ ವಲಯಗಳಿಗೆ ಈ ಬಾರಿಯ ಬಜೆಟ್‌ ನಲ್ಲಿ ಅನುದಾನ ಸಿಗಲಿದೆ ಎಂಬ ಆಕಾಂಕ್ಷೆಯಲ್ಲಿದ್ದಾರೆ ತಾಲ್ಲೂಕಿನ ಜನರು.

ಇದನ್ನೂ ಓದಿ: Karnataka Budget 2026: ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ

ತೆರೆದ ಬಾವಿ, ಕೊಳವೆಬಾವಿಗಳ ನೆರವಿನಿಂದ ತಾಲ್ಲೂಕಿನ ರೈತರು ಅತಿ ಹೆಚ್ಚಾಗಿ ಟೊಮೆಟೊ ಸೇರಿ ಇನ್ನಿತರ ತರಕಾರಿಗಳನ್ನು ಬೆಳೆಯುತ್ತಾರೆ. ಹೀಗಾಗಿ ಕೃಷಿ, ತರಕಾರಿ ಬೆಳೆಗಳಿಗೆ ಸಂಸ್ಕರಣ ಘಟಕ ಆರಂಭಿಸಿದರೆ, ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಸಣ್ಣ ಮತ್ತು ಬೃಹತ್ ಮಟ್ಟದ ಕೈಗಾರಿಕೆಗಳು ಸ್ಥಾಪನೆ ಮಾಡಿದರೆ, ಯುವಕ, ಯುವತಿಯ ರಿಗೆ ಉದ್ಯೋಗವಕಾಶಗಳು ಸಿಗಲಿವೆ ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ.

15 ವರ್ಷಗಳ ಹಿಂದೆ ಆರಂಭವಾದ ಒಳಚರಂಡಿ ಕಾಮಗಾರಿಗೆ ಅನುದಾನ ಮೀಸಲಿಡ ಬೇಕು. ಕಾಮಗಾರಿ ಮುಗಿಸಿ, ಜನರ ಬಳಕೆಗೆ ಮುಕ್ತಗೊಳಿಸಬೇಕು. ಚಿತ್ರಾವತಿ ಬಳಿ ಟೊಮೆಟೊ ಮಾರುಕಟ್ಟೆ ಅಭಿವೃದ್ಧಿಪಡಿಸಬೇಕು. ಡಾ.ಎಚ್.ಎನ್. ಉದ್ಯಾನವನ, ರೆಡ್ಡಿ ಕೆರೆ, ಇಕೊ ಉದ್ಯಾನಗಳ ನಿರ್ವಹಣೆಗೆ ಸರ್ಕಾರ ಅನುದಾನ ಕಲ್ಪಿಸಬೇಕು.

ಬಾಗೇಪಲ್ಲಿ ತಾಲ್ಲೂಕಿನ ಗುಮ್ಮನಾಯಕನಪಾಳ್ಯದ ಕೋಟೆ, ಚೋಳರ ಕಾಲದ ಪಂಚ ಲಿಂಗೇಶ್ವರ, ಜಡಲ ಭೈರವೇಶ್ವರ, ಐತಿಹಾಸಿಕ ಗಡಿದಂ ಲಕ್ಷ್ಮಿವೆಂಕಟರಮಣ ಕ್ಷೇತ್ರ, ಸೂಫಿ ಸಂತರಾದ ಹುಸೇನು ಷಾ ವಲಿ ದರ್ಗಾ, ಕಲ್ಲಿಪಲ್ಲಿ ಆದಿನಾರಾಯಣಸ್ವಾಮಿ ಮಠ ಸೇರಿದಂತೆ ವಿವಿಧ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ ಮೀಸಲಿಡ ಬೇಕಿದೆ.

ಚಿತ್ರಾವತಿ ಪುನಶ್ಚೇತನ: ಕೃಷಿ ಪ್ರಧಾನವಾಗಿರುವ ತಾಲ್ಲೂಕಿನಲ್ಲಿ ಮಳೆಯೂ ಉತ್ತಮ ವಾಗಿಲ್ಲ. ತಾಲ್ಲೂಕಿನಲ್ಲಿ ಹರಿಯುತ್ತಿದ್ದ ಚಿತ್ರಾವತಿ ನದಿ ಬತ್ತಿವೆ. ಚಿತ್ರಾವತಿ ನದಿ ಪುನಶ್ಚೇತನಕ್ಕೆ ಸಮಿತಿ ರಚಿಸಲಾಗಿದೆ.ಚಿತ್ರಾವತಿ ನದಿ  ಪುನಶ್ಚೇತನಕ್ಕೆ ಸರ್ಕಾರ ಮನಸ್ಸು ಮಾಡಿದರೆ ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿದೆ. ತಾಲ್ಲೂಕಿನ ಶಾಶ್ವತವಾದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ನಾಗರಿಕರು, ರೈತ ಸಂಘಟನೆಗಳು ಆಗ್ರಹಿಸುತ್ತಲೇ ಇವೆ. ಆದರೆ, ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಮಾತ್ರ ಎಚ್ಚರ ಗೊಂಡಿಲ್ಲ.

ಈ ಎಲ್ಲ ಕಾರಣಗಳಿಂದಾಗಿ ಈ ಬಾರಿಯ ಬಜೆಟ್ ಮೇಲೆ ಈ ಭಾಗದ ಜನರು ಬಹುದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಎಚ್.ಎನ್. ವ್ಯಾಲಿ ನೀರು ತಾಲ್ಲೂಕಿನ ಮೂರು ಕೆರೆಗಳಿಗೆ ಸೀಮಿತವಾಗಿದೆ. ಎತ್ತಿನಹೊಳೆ ಯೋಜನೆ ಬಗ್ಗೆ ಇಲ್ಲಿನ ಜನರು ಬಹುದೊಡ್ಡ ನಿರೀಕ್ಷೆ ಹೊಂದಿದ್ದಾರೆ. ಎತ್ತಿನ ಹೊಳೆ ಯೋಜನೆಯಿಂದ ನೀರು ಹರಿದರೆ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯರು.