ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಂದಿಬೆಟ್ಟದ ಹೋಮ್‌ಸ್ಟೇನಲ್ಲಿ ಬೆಂಗಳೂರಿನ ಯುವತಿ ಅನುಮಾನಾಸ್ಪದ ಸಾವು: ಲವ್ ಜಿಹಾದ್ ಆರೋಪ

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಬಳಿಯ ಹೋಮ್‌ಸ್ಟೇನಲ್ಲಿ ಘಟನೆ ನಡೆದಿದೆ. ಮಗಳ ಸಾವಿನ ಹಿನ್ನೆಲೆಯಲ್ಲಿ ಆಕೆಯ ತಾಯಿ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದು, ಇದೊಂದು ಲವ್ ಜಿಹಾದ್ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಂದಿಬೆಟ್ಟದ ಹೋಮ್‌ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು

-

Prabhakara R
Prabhakara R Jun 29, 2026 6:09 PM

ಚಿಕ್ಕಬಳ್ಳಾಪುರ: ಬೆಂಗಳೂರು ಮೂಲದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ (Chikkaballapur) ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಬಳಿಯ ಹೋಮ್‌ಸ್ಟೇನಲ್ಲಿ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಸಾಯಿ ಸುರಭಿ (Sai Surabhi) ಎಂದು ಗುರುತಿಸಲಾಗಿದೆ. ಇನ್ನು ಈಕೆಯ ಪ್ರಿಯಕರ ಎನ್ನಲಾದ ಕೇರಳ ಮೂಲದ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹೋಮ್‌ಸ್ಟೇನಲ್ಲಿ (Homestay) ಪತ್ತೆಯಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗಳ ಸಾವಿನ ಬೆನ್ನಲ್ಲೇ ತಾಯಿ ಗೀತಾ ಅವರು ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದು, ಇದೊಂದು ಲವ್ ಜಿಹಾದ್ ಕೊಲೆ (Love Jihad Murder) ಎಂದು ಗಂಭೀರ ಆರೋಪ ಮಾಡಿದ್ದಾರೆ.

ಏನಿದು ಘಟನೆ?

ಬೆಂಗಳೂರು ಮೂಲದ ಸಾಯಿ ಸುರಭಿ ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿ, ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಮ್‌ಸ್ಟೇಗೆ ಬಂದು ತಂಗಿದ್ದರು. ಇಂದು ಚೆಕ್-ಔಟ್ ಸಮಯ ಮುಗಿದರೂ ರೂಮ್ ತೆರೆಯದಿದ್ದಾಗ ಹೋಮ್‌ಸ್ಟೇ ಕೇರ್‌ಟೇಕರ್ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನೇಣು ಹಾಕಿದ್ದ ಹಗ್ಗವನ್ನು ಕತ್ತರಿಸಿದ ಸ್ಥಿತಿಯಲ್ಲಿ ಇತ್ತು. ಅಲ್ಲದೆ ಸ್ಥಳದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ವಿಷ ಸೇವಿಸಿರುವ ಸಾಧ್ಯತೆಗಳೂ ದಟ್ಟವಾಗಿವೆ. ರೂಮ್‌ನಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆಯಲಾಗಿದೆ. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಸಂಜೀತ್ ಅಲಿಗೆ ಪ್ರಜ್ಞೆ ಬಂದ ನಂತರವಷ್ಟೇ ಇದು ಕೊಲೆಯೋ ಅಥವಾ ಇಬ್ಬರೂ ಸೇರಿ ಮಾಡಿಕೊಂಡ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಲಿದೆ ಎಂದು ಎಸ್‌ಪಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ. ಪ್ರಸ್ತುತ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಯುವತಿ ತಾಯಿ ಹೇಳಿದ್ದೇನು?

ಸಾಯಿ ಸುರಭಿ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸ್ನೇಹಿತರ ಮೂಲಕ ಕೇರಳ ಮೂಲದ ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಪರಿಚಯವಾಗಿದ್ದ. ಪರಿಚಯ ಬೆಳೆದಂತೆ ಆಕೆಯನ್ನು ಪ್ರೀತಿಸುವುದಾಗಿ ಹೇಳಿ ಸಂಜೀತ್ ಕಿರುಕುಳ ನೀಡಲು ಆರಂಭಿಸಿದ್ದ. ಇದರಿಂದ ಬೇಸತ್ತು ಆಕೆಯನ್ನು ಬೇರೆ ಕಡೆ ಕಾಲೇಜಿಗೆ ಸೇರಿಸಿದರೂ, ಆತ ಅಲ್ಲಿಗೂ ಹುಡುಕಿಕೊಂಡು ಬಂದು ಕಾಟ ಕೊಡುವುದನ್ನು ಮುಂದುವರಿಸಿದ್ದ. ಅವನು ನನ್ನ ಮಗಳನ್ನು ಸಂಪೂರ್ಣವಾಗಿ ಮರಳು ಮಾಡಿದ್ದ. ಅಷ್ಟೇ ಅಲ್ಲದೆ, ಆಕೆಯನ್ನು ಡ್ರಗ್ಸ್ ಅಡಿಕ್ಟ್ ಮಾಡಿದ್ದ. ನಾನು ಕಷ್ಟಪಟ್ಟು ಎರಡು ಮೂರು ಕಡೆ ಚಿಕಿತ್ಸೆ ಕೊಡಿಸಿ ಆಕೆಯನ್ನು ಗುಣಮುಖಳನ್ನಾಗಿ ಮಾಡಿದ್ದೆ. ಇತ್ತೀಚೆಗೆ ಆಕೆ ತುಂಬಾ ಚೆನ್ನಾಗಿ, ಆರೋಗ್ಯವಾಗಿದ್ದಳು ಎಂದು ತಾಯಿ ಗೀತಾ ಕಣ್ಣೀರು ಹಾಕಿದ್ದಾರೆ.

ಇತ್ತೀಚೆಗಷ್ಟೇ ಮುದ್ದೇನಹಳ್ಳಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದ ಸಾಯಿ ಸುರಭಿ, ಶನಿವಾರದಂದು ಅಲ್ಲಿ ಸತ್ಸಂಗ ಇದೆ, ನಾನು ಅಲ್ಲೇ ಇರುತ್ತೇನೆ ಎಂದು ತಾಯಿಗೆ ಹೇಳಿ ಹೋಗಿದ್ದಳು. ಆದರೆ ಸಂಜೀತ್ ಅಲಿ ಮತ್ತೊಮ್ಮೆ ಆಕೆಯನ್ನು ಹುಡುಕಿಕೊಂಡು ಬಂದು ಮರಳು ಮಾಡಿ ಹೋಮ್‌ಸ್ಟೇಗೆ ಕರೆದೊಯ್ದಿದ್ದಾನೆ. ಅವನೇ ಸಂಚು ರೂಪಿಸಿ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ತಾಯಿ ಗೀತಾ ಆಕ್ರೋಶ ಹೊರಹಾಕಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಸಂಜೀತ್‌ ಅಲಿ ವಿರುದ್ಧ ನಾವು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದರೆ ಸುರಭಿ ಬದುಕಿರುತ್ತಿದ್ದಳು ಎಂದು ಮಾವ ಶಂಕರನಾರಾಯಣ ತಿಳಿಸಿದ್ದಾರೆ.

KR Puram Triple Murder Case: ನನ್ನ ಕುಟುಂಬವನ್ನು ರಕ್ಕಸನಂತೆ ಕೊಂದಿದ್ದು ಪ್ರಿಯಕರ ಕೆನೆತ್;‌ ವಿಚಾರಣೆ ವೇಳೆ ಉಲ್ಟಾ ಹೊಡೆದ ಶ್ವೇತಾ!

ಕಳೆದ ವರ್ಷ ದಾಖಲಾಗಿತ್ತು ನಾಪತ್ತೆ ಕೇಸ್‌

ಕಳೆದ ವರ್ಷ ಸುರಭಿ ಮನೆಗೆ ಬಾರದೇ ನಾಪತ್ತೆಯಾಗಿದ್ದಳು. ಪುತ್ರಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್‌ ದಾಖಲಾಗಿತ್ತು. ಬಳಿಕ ಪೊಲೀಸರು ಸ್ನೇಹಿತರ ಮನೆಯಲ್ಲಿದ್ದ ಸುರಭಿಯನ್ನ ಪತ್ತೆ ಮಾಡಿ ಪೋಷಕರ ಬಳಿ ಒಪ್ಪಿಸಿದ್ದರು.