ರಾಜ್ಯದಲ್ಲಿ ಹೆಚ್ಚಿದ ಚಳಿ; ಹಲವೆಡೆ ಶುಷ್ಕ ವಾತಾವರಣ
ರಾಜ್ಯದಾದ್ಯಂತ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ಮಳೆಯ ಅಬ್ಬರಕ್ಕೆ ಇದೀಗ ಸಂಪೂರ್ಣ ವಿರಾಮ ಬಿದ್ದಿದೆ. ಇಂದಿನಿಂದ ಡಿಸೆಂಬರ್ 1ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ರಾಜ್ಯದಾದ್ಯಂತ ಕಳೆದ ಕೆಲವು ದಿನಗಳಿಂದ (Karnataka Weather) ಕಾಣಿಸಿಕೊಂಡಿದ್ದ ಮಳೆಯ ಅಬ್ಬರಕ್ಕೆ ಇದೀಗ ಸಂಪೂರ್ಣ ವಿರಾಮ ಬಿದ್ದಿದೆ. ಇಂದಿನಿಂದ ಡಿಸೆಂಬರ್ 1ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಹವಾಮಾನ ವೈಪರೀತ್ಯಗಳ ಪ್ರಭಾವ ತಗ್ಗಿರುವುದರಿಂದ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಆದರೆ, ಮುಂಜಾನೆ ಮತ್ತು ರಾತ್ರಿಯ ವೇಳೆ ತಂಪಾದ ಗಾಳಿ ಬೀಸುತ್ತಿದ್ದು, ಚಳಿಯ ಅನುಭವ ಹೆಚ್ಚಾಗತೊಡಗಿದೆ.
ಕರಾವಳಿಯ ಮೂರೂ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಇಂದು ಮಳೆಯ ಮುನ್ಸೂಚನೆಯಿಲ್ಲ. ದಿನವಿಡೀ ಶುಷ್ಕ ಹವಾಮಾನ ಇರಲಿದ್ದು, ಹಗಲಿನಲ್ಲಿ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಕಂಡುಬರಲಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸಂಪೂರ್ಣ ಒಣ ಹವೆ ಇರಲಿದೆ. ಹಗಲಿನಲ್ಲಿ ಸಾಮಾನ್ಯ ಬಿಸಿಲಿದ್ದರೂ, ರಾತ್ರಿ ಹಾಗೂ ಮುಂಜಾನೆಯ ವೇಳೆ ತಾಪಮಾನ ಕುಸಿಯುವುದರಿಂದ ತಂಪಾದ ಗಾಳಿ ಮತ್ತು ಚಳಿಯ ಪ್ರಮಾಣ ಕೊಂಚ ಹೆಚ್ಚಾಗಿರಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ ಸೇರಿದಂತೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂಜಾನೆ ದಟ್ಟ ಮಂಜು ಕವಿದ ವಾತಾವರಣ ಕಂಡುಬರಲಿದ್ದು, ಹಗಲಿನಲ್ಲಿ ಭಾಗಶಃ ಮೋಡ ಕವಿದ ಆಕಾಶವಿರಲಿದೆ.
Karnataka Weather: ರಾಜ್ಯಾದ್ಯಂತ ಮುಂದುವರಿಯಲಿದೆ ಚಳಿ-ಬಿಸಿಲಿನ ಜುಗಲ್‌ಬಂದಿ
ಮುಂದಿನ ಮೂರು ದಿನಗಳ ಕಾಲ ರಾಜ್ಯದ ಯಾವುದೇ ಭಾಗದಲ್ಲಿ ಗುಡುಗು-ಮಿಂಚು ಅಥವಾ ಭಾರಿ ಮಳೆಯ ಮುನ್ಸೂಚನೆಯಿಲ್ಲ. ಆದರೆ, ಡಿಸೆಂಬರ್ 2ರ ನಂತರ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮತ್ತೆ ಹಗುರ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.