ಹಿಂದಿನ ಲೆಕ್ಕಾಚಾರದಲ್ಲೇ ಕ್ಷೇತ್ರ ವಿಸ್ತರಣೆ; ಎಲ್ಲ ರಾಜ್ಯಗಳಲ್ಲೂ ಶೇಕಡಾ 50ರಷ್ಟು ಹೆಚ್ಚಳ: ಪ್ರಲ್ಹಾದ್ ಜೋಶಿ ಭರವಸೆ
Pralhad Joshi: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ, ತಮ್ಮ ಆಡಳಿತಾವಧಿಯಲ್ಲಿ ಮಾಡಿದ್ದೆಲ್ಲ ಸರಿಯಿರುತ್ತದೆ. ಈಗ ನಾವು ಮಾಡಲು ಹೊರಟರೆ ತಪ್ಪಾಗಿ ಕಾಣುತ್ತದೆಯೇ? ವಿಪಕ್ಷಗಳ ಈ ವರ್ತನೆ ಅನ್ಯಾಯ ಕ್ರಮವೇ ಹೊರತು ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಯಾವುದೇ ರಾಜ್ಯಗಳಿಗೆ ಅನ್ಯಯ ಆಗುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ). -
ನವದೆಹಲಿ, ನ. 28: ಹಿಂದೆ ನಿಗದಿಪಡಿಸಿದ ಕ್ಷೇತ್ರಗಳ ಸಂಖ್ಯೆಯ ಆಧಾರದಲ್ಲೇ ಈಗ ಲೋಕಸಭಾ ಕ್ಷೇತ್ರಗಳ ಪ್ರಮಾಣ ಹೆಚ್ಚಳವಾಗುತ್ತಿದೆ. ಕರ್ನಾಟಕದಲ್ಲಿ ಈ ಸಂಖ್ಯೆ 40ಕ್ಕೆ ಏರಬಹುದು ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ, ಕರ್ನಾಟಕ ಸೇರಿ ಎಲ್ಲ ರಾಜ್ಯಗಳಲ್ಲೂ ಶೇ. 50ರಷ್ಟು ಲೆಕ್ಕಾಚಾರದ ಅನ್ವಯದಲ್ಲಿ ಹೆಚ್ಚಳವಾಗಬಹುದು ಎಂದಿದ್ದಾರೆ.
ಕರ್ನಾಟಕದಲ್ಲಿ ಪ್ರಸ್ತುತ 28 ಕ್ಷೇತ್ರಗಳಿವೆ. ಅದು ಕ್ಷೇತ್ರ ವಿಸ್ತರಣೆ ವೇಳೆ 40ಕ್ಕೆ ಹೆಚ್ಚಳವಾಗಬಹುದು. ಇದರಿಂದ ಕಾಂಗ್ರೆಸ್ಸಿಗರಿಗೆ ಏನು ಸಮಸ್ಯೆ? ಈಗಿನ 28ರಲ್ಲೂ ಏನು ಬಿಜೆಪಿಯವರೇ ಇದ್ದೇವೆಯೇ? ಎಂದು ಪ್ರಶ್ನಿಸಿದರು.
ಅಂದಾಜು ಲೆಕ್ಕಾಚಾರದ ಪ್ರಕಾರ ಉತ್ತರ ಪ್ರದೇಶದಲ್ಲಿ 120 ಮತ್ತು ಕರ್ನಾಟಕದಲ್ಲಿ 40 ಲೋಕಸಭಾ ಕ್ಷೇತ್ರಗಳಾಗಬಹುದು. ಉತ್ತರ ಪ್ರದೇಶದಲ್ಲಿ ಪ್ರಸ್ತುತ 80 ಕ್ಷೇತ್ರಗಳಿದ್ದರೆ, ಕರ್ನಾಟಕದಲ್ಲಿ 28 ಕ್ಷೇತ್ರಗಳಿವೆ. ಈ ಹಿಂದೆ ನಿಗದಿಪಡಿಸಿದ ಕ್ಷೇತ್ರಗಳ ಸಂಖ್ಯೆಯ ಆಧಾರದಲ್ಲೇ ಈಗಲೂ ಕ್ಷೇತ್ರಗಳ ವಿಸ್ತರಣೆ ಆಗುತ್ತದೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.
ಈ ಹಿಂದಿನ ಸರ್ಕಾರಗಳ ಆಡಳಿತಾವಧಿಯಲ್ಲಿ ನಡೆದ ಕ್ಷೇತ್ರಗಳ ಹಂಚಿಕೆ ಸರಿಯಾಗಿದ್ದರೆ ಈಗ ಕೈಗೊಳ್ಳುತ್ತಿರುವ ಕ್ಷೇತ್ರ ಪುನರ್ವಿಂಗಡಣೆ ಕ್ರಮವೂ ಸರಿಯಾಗಿಯೇ ಇದೆ. ಹಾಗಾದರೆ ಹಿಂದಿನ ನಿರ್ಧಾರ ಸರಿಯಿಲ್ಲವೇ? ಎಂದು ಸಚಿವ ಪ್ರಲ್ಹಾದ್ ಜೋಶಿ, ವಿಪಕ್ಷಗಳಿಗೆ ಚಾಟಿ ಬೀಸಿದರು.
ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು, ಕಾಶ್ಮೀರದ ಉಲ್ಲೇಖ
ತಮ್ಮ ಆಡಳಿತಾವಧಿಯಲ್ಲಿ ಮಾಡಿದ್ದೆಲ್ಲಾ ಸರಿಯಿರುತ್ತದೆ. ಈಗ ನಾವು ಮಾಡಲು ಹೊರಟರೆ ತಪ್ಪಾಗಿ ಕಾಣುತ್ತದೆಯೇ? ವಿಪಕ್ಷಗಳ ಈ ವರ್ತನೆ ಅನ್ಯಾಯ ಕ್ರಮವೇ ಹೊರತು ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಯಾವುದೇ ರಾಜ್ಯಗಳಿಗೆ ಅನ್ಯಯ ಆಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.