Kothur Manjunath: ಆಪರೇಶನ್ ಸಿಂದೂರಕ್ಕೆ ವ್ಯಂಗ್ಯವಾಡಿದ ಕೊತ್ತೂರು ಮಂಜುನಾಥ್ ಈಗ ಉಲ್ಟಾ!
ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಸ್ಪಷ್ಟನೆ ನೀಡಿದ್ದು, ಅಪರೇಷನ್ ಸಿಂದೂರ, ಸೇನೆ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಆದರೆ, ಆಪರೇಷನ್ ಸಿಂದೂರ ಕಾರ್ಯಾಚರಣೆ ಸಮಾಧಾನ ತಂದಿಲ್ಲ. ಕಾರ್ಯಾಚರಣೆ ಆರಂಭಿಸಿ, ಮೊಟಕುಗೊಳಿಸಿದ್ದು ನಿರಾಸೆ ತರಿಸಿದೆ ಎಂದಿದ್ದಾರೆ.

ಕೊತ್ತೂರು ಮಂಜುನಾಥ್

ಕೋಲಾರ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam terror attack) ನಡೆದ ಉಗ್ರರ ದಾಳಿಗೆ ವಿರುದ್ಧವಾಗಿ ಭಾರತೀಯ ಸೇನೆ (Indian Army) ಪಾಕಿಸ್ತಾನ (Pakistan) ಮತ್ತು ಎಲ್‌ಒಸಿ ಭಾಗದಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ತೀರಿಸಿಕೊಂಡ ಪ್ರತೀಕಾರ ʼಆಪರೇಶನ್ ಸಿಂದೂರ್ʼ (Operation Sindoor) ಬಗ್ಗೆ ಅನುಮಾನದ ಮಾತುಗಳನ್ನುಆಡಿ, ವ್ಯಂಗ್ಯವಾಡಿದ್ದ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Congress MLA Kothur Manjunath), ಇದು ವಿವಾದ ಆಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ತಮಗೆ ಸಮಾಧಾನ ತಂದಿಲ್ಲ ಎಂದು ಹೇಳಿದ್ದಾರೆ.
ಶಾಸಕ ಕೊತ್ತೂರು ಮಂಜುನಾಥ್ ಸ್ಪಷ್ಟನೆ ನೀಡಿದ್ದು, ಅಪರೇಷನ್ ಸಿಂದೂರ, ಸೇನೆ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಆದರೆ, ಆಪರೇಷನ್ ಸಿಂದೂರ ಕಾರ್ಯಾಚರಣೆ ಸಮಾಧಾನ ತಂದಿಲ್ಲ. ಕಾರ್ಯಾಚರಣೆ ಆರಂಭಿಸಿ, ಮೊಟಕುಗೊಳಿಸಿದ್ದು ನಿರಾಸೆ ತರಿಸಿದೆ. ಪಹಲ್ಗಾಮ್ ನಲ್ಲಿ ಬಂದು ನಮ್ಮ ಹಣ್ಣು ಮಕ್ಕಳ ಮುಂದೆ ದಾಳಿ ಮಾಡ್ತಾರೆ ಎಂದ್ರೆ ಹೇಗೆ? ಭಾರತ ಶಕ್ತಿಶಾಲಿ ದೇಶವಾಗಿದ್ದರೂ ಪದೆ ಪದೆ ದಾಳಿಗಳಾಗುತ್ತವೆ ಅಂದ್ರೆ ಹೇಗೆ ಸಾಧ್ಯ ಎಂದರು.
ಪುಲ್ವಾಮ ದಾಳಿಯಲ್ಲೂ ಸೈನಿಕರು ಮೃತಪಟ್ಟರು, ಅವರು ನಮ್ಮವರು ಅಲ್ಲವೇ, ಆಗ ಬಂದ ಆರ್‌ಡಿಎಕ್ಸ್ ಎಲ್ಲಿಂದ ಬಂತು. ಇದಕ್ಕೆಲ್ಲ ಮೂಲ ಯಾವುದು? ಪಹಲ್ಗಾಮ್ ನಲ್ಲಿ ದಾಳಿ ನಂತರ ಉಗ್ರರು ಹೇಗೆ ತಪ್ಪಿಸಿಕೊಂಡರು ಎಂಬುದೇ ಪ್ರಶ್ನೆ. ಸಾರ್ವಜನಿಕವಾಗಿ ಆಗ್ತಿರೊ ಚರ್ಚೆಯನ್ನೇ ನಾನು ಹೇಳಿದ್ದೇನೆ ಅಷ್ಟೆ ಎಂದು ಕೋಲಾರದ ಖಾಸಗಿ ಹೊಟೆಲ್ ನಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ನೀಡಿದರು.
ಕೊತ್ತೂರು ಮಂಜುನಾಥ್ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ವಿರೋಧ ವ್ಯಕ್ತವಾಗಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ. ಇಂತಹ ಸಂಘರ್ಷದ ಸಂದರ್ಭದಲ್ಲಿ ಎಲ್ಲರೂ ದೇಶದ ಪರ ಇರಬೇಕು. ದೇಶದ ಪರವಾಗಿ ಮಾತನಾಡಬೇಕು ಎಂದು ಹೆಬ್ಬಾಳ್ಕರ್ ಮಂಜುನಾಥ್ ಹೇಳಿಕೆಗೆ ಟಾಂಗ್ ನೀಡಿದರು.
ಪಹಲ್ಗಾಮ್ ದಾಳಿ ನಡೆಸಲು ಉಗ್ರರನ್ನು ಮಿಲಿಟರಿ ಅವ್ರೇ ದೇಶದ ಒಳಗೆ ಬಿಟ್ರಾ ಎಂದು ಪ್ರಶ್ನಿಸುವ ಮೂಲಕ ಶಾಸಕ ಕೊತ್ತೂರು ಮಂಜುನಾಥ್ ದೇಶದ ಸೈನಿಕರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಮಾತ್ರವಲ್ಲ, ಮುಂದುವರೆದು ಮಾತನಾಡಿದ ಅವರು, ನಾಲ್ಕು ಫ್ಲೈಟ್ ಹಾರಿಸಿ ಬೂಟಾಟಿಕೆ ಕಾರ್ಯಾಚರಣೆ ಮಾಡಿದ್ದಾರೆ, ಕಾರ್ಯಾಚರಣೆಯಲ್ಲಿ ಉಗ್ರರು ಸತ್ತಿದ್ದು ನಿಜವೇನಾ, ಇಷ್ಟೇ ಉಗ್ರರು ಸತ್ತಿದ್ದಾರೆ ಎಂಬ ಖಚಿತ ಮಾಹಿತಿಯಿಲ್ಲ ಎಂದು ಆಪರೇಷನ್ ಸಿಂದೂರ್ ಕಾರ್ಯಾಚರಣೆ ಟೀಕಿಸುವ ಭರದಲ್ಲಿ ಸೇನೆಗೆ ಅಗೌರವ ತರುವ ಹೇಳಿಕೆ ನೀಡಿದ್ದರು.
ಇಸ್ರೇಲ್ ಸಣ್ಣ ರಾಷ್ಟ್ರವಾದರು, ಶತ್ರುಗಳ ಎದುರು ದಿಟ್ಟವಾಗಿ ಹೋರಾಡಿದ್ದಾರೆ. ಪಹಲ್ಗಾಮ್ ದಾಳಿಗೆ ಕಾರಣ ಏನು, ಉಗ್ರರು ಹೇಗೆ ಬಂದರು, ಹೇಗೆ ಹೋದರು, ಗುಪ್ತಚರ ಇಲಾಖೆ ವೈಫಲ್ಯವೇ ಕಾರಣಾನಾ ಇದೆಲ್ಲವೂ ಗೊತ್ತಾಗಬೇಕು. ಅಮೇರಿಕಾ ಮಾತಿಗೆ ಕಟ್ಟುಬಿದ್ದು ಭಾರತ ಕಾರ್ಯಾಚರಣೆ ನಿಲ್ಲಿಸಿದೆ ಎಂದು ಕೋಲಾರದ ತಮ್ಮ ನಿವಾಸದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ವಿವಾದಿತ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Operation Sindoor: ಆಪರೇಶನ್ ಸಿಂದೂರ್ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ವ್ಯಂಗ್ಯ