ಇಸ್ಲಾಮಾಬಾದ್ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; ಕಾಶ್ಮೀರದಲ್ಲಿ ಭುಗಿಲೆದ್ದ ಪಾಕ್ ವಿರೋಧಿ ಪ್ರತಿಭಟನೆ
Anti-Pakistan protests: ಪಾಕ್‌ನ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಬಳಿಕ ಕಾಶ್ಮೀರದಲ್ಲಿ ಪಾಕಿಸ್ತಾನ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ. ದಾಳಿಯನ್ನು ಖಂಡಿಸಿ ಸಾರ್ವಜನಿಕರು ಬೀದಿಗಿಳಿದಿದ್ದು, ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಕಾಶ್ಮೀರದಲ್ಲಿ ಭುಗಿಲೆದ್ದ ಪಾಕ್ ವಿರೋಧಿ ಪ್ರತಿಭಟನೆಗಳು -
ಶ್ರೀನಗರ, ಫೆ.8: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ (suicide bomb attack) ಶಿಯಾ ಪಂಥದವರ ಹತ್ಯೆಯನ್ನು ವಿರೋಧಿಸಿ ಕಾಶ್ಮೀರ ಕಣಿವೆಯಲ್ಲಿ ಹಲವಾರು ಪಾಕಿಸ್ತಾನ ವಿರೋಧಿ ಪ್ರತಿಭಟನೆಗಳು ನಡೆದವು (Kashmir valley protest). ಶಿಯಾ ಪ್ರಾಬಲ್ಯದ ಹಲವಾರು ಪ್ರದೇಶಗಳಲ್ಲಿ ನೂರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅವರು ಪಾಕಿಸ್ತಾನ, ಅಲ್ಲಿನ ಸರ್ಕಾರ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವು ಸ್ಥಳಗಳಲ್ಲಿ, ಪ್ರತಿಭಟನಾಕಾರರು ಸೌದಿ ಅರೇಬಿಯಾ ಮತ್ತು ಇಸ್ರೇಲ್ ವಿರುದ್ಧವೂ ಘೋಷಣೆಗಳನ್ನು ಕೂಗಿದರು.
ಶುಕ್ರವಾರ (ಫೆ.6), ಇಸ್ಲಾಮಾಬಾದ್‌ನ ಶಿಯಾ ಮಸೀದಿಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿಕೋರನೊಬ್ಬ ನಡೆಸಿದ ದಾಳಿಯಲ್ಲಿ 30ಕ್ಕೂ ಹೆಚ್ಚು ಜನರು ಮೃತಪಟ್ಟು, ಸುಮಾರು 170 ಜನರು ಗಾಯಗೊಂಡಿದ್ದರು. ಕಳೆದ ಒಂದು ವರ್ಷದಲ್ಲಿ ಕಾಶ್ಮೀರದಲ್ಲಿ ಪಾಕಿಸ್ತಾನ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದ ಎರಡನೇ ದಾಳಿ ಇದಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರು 26 ಜನರನ್ನು ಹತ್ಯೆ ಮಾಡಿದ ನಂತರ ಕಾಶ್ಮೀರದಾದ್ಯಂತ ಸ್ವಯಂಪ್ರೇರಿತ ಪ್ರತಿಭಟನೆಗಳು ನಡೆದವು.
ಭಾರತ- ಅಮೆರಿಕ ವ್ಯಾಪಾರ ಒಪ್ಪಂದ; ಟೀಕೆಗೆ ಗುರಿಯಾದ ಪಾಕಿಸ್ತಾನ ಸರ್ಕಾರ
ಈ ಬಾರಿ ಪ್ರತಿಭಟನೆಗಳು ಶಿಯಾ ಪ್ರಾಬಲ್ಯದ ಪ್ರದೇಶಗಳಿಗೆ ಸೀಮಿತವಾಗಿವೆ. ಈ ಭೀಕರ ದಾಳಿಗೆ ವ್ಯಾಪಕ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗುತ್ತಿದ್ದಂತೆ, ಶುಕ್ರವಾರ (ಫೆ.6) ಸಂಜೆ ಬಂಡಿಪೋರ್ ಜಿಲ್ಲೆಯ ಸುಂಬಲ್ ಪ್ರದೇಶ ಮತ್ತು ಬಾರಾಮುಲ್ಲಾ ಜಿಲ್ಲೆಯ ಪಟ್ಟನ್‌ನಲ್ಲಿ ಪ್ರತಿಭಟನೆಗಳು ಆರಂಭವಾದವು. ಪ್ರತಿಭಟನಾಕಾರರು ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆಗಳನ್ನು ಕೂಗಿದರು.
ಪಾಕಿಸ್ತಾನದ ವಿರುದ್ಧ ಆಕ್ರೋಶದ ಮಹಾಪೂರವೇ ಹರಿದುಬರುತ್ತಿದ್ದಂತೆ, ಪ್ರತಿಭಟನೆಯ ವೇಳೆ ಭಾರತ ಪರ ಘೋಷಣೆಗಳನ್ನು ಕೂಗಲಾಯಿತು. ಆಲ್ ಜಮ್ಮು ಮತ್ತು ಕಾಶ್ಮೀರ ಶಿಯಾ ಅಸೋಸಿಯೇಷನ್ ತನ್ನ ಘಟಕವು ಪ್ರತಿಭಟನೆಗಳನ್ನು ನಡೆಸಿದ್ದು, ಆತ್ಮಹತ್ಯಾ ದಾಳಿಯ ಹಿಂದಿನವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ ಎಂದು ಹೇಳಿದೆ.
ಇಸ್ಲಾಮಾಬಾದ್‌ನ ತರ್ಲೈನಲ್ಲಿರುವ ಇಮಾಮ್‌ಬರ್ಗಾ ಖದೀಜತ್-ಉಲ್-ಕುಬ್ರಾದಲ್ಲಿ ನಡೆದ ಕ್ರೂರ ಸ್ಫೋಟಕ್ಕೆ ಪಾಕಿಸ್ತಾನವನ್ನು ಖಂಡಿಸಿ ಎಜೆಕೆಎಸ್‌ಎ ಚಿನಾಬಲ್ (ಪಟ್ಟನ್) ಘಟಕವು ಘೋಷಣೆಗಳನ್ನು ಕೂಗಿತು. ಮತ್ತು ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು ಎಂದು ಶಿಯಾ ಸಂಘ ತಿಳಿಸಿದೆ.
ಇಂದು (ಭಾನುವಾರ, ಫೆ.8), ಬಾರಾಮುಲ್ಲಾ ಜಿಲ್ಲೆಯ ಹಂಜಿವೇರಾದಲ್ಲಿ ಇದೇ ರೀತಿಯ ಪ್ರತಿಭಟನೆಗಳು ನಡೆದವು. ರಾಷ್ಟ್ರಧ್ವಜವನ್ನು ಹಿಡಿದು ನೂರಾರು ಜನರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದರು. ಶ್ರೀನಗರದ ಇಮಾಂಬರಾ ಜಡಿಬಲ್ ಮತ್ತು ಹರ್ವಾನ್‌ನಲ್ಲಿಯೂ ಪಾಕಿಸ್ತಾನ ವಿರೋಧಿ ಪ್ರತಿಭಟನೆಗಳು ನಡೆದವು.
"ಕಾಶ್ಮೀರವನ್ನು ನಮಗೆ ಬಿಟ್ಟು ಕೊಡದೇ ಭಾರತಕ್ಕೆ ಬೇರೆ ದಾರಿಯೇ ಇಲ್ಲ" ; ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ
ಕಾರ್ಗಿಲ್‌ನಲ್ಲಿ ಶಿಯಾ ಭಕ್ತರ ಮೇಲಿನ ಭಯೋತ್ಪಾದಕ ದಾಳಿಯನ್ನು ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ಘೋರ ಭಯೋತ್ಪಾದಕ ಕೃತ್ಯದ ಹಿಂದಿನ ಅಪರಾಧಿಗಳನ್ನು ಶಿಕ್ಷಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿವೆ. ಈ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ಕಾನೂನಿನ ಮೂಲಕ ಶಿಕ್ಷೆಯಾಗಬೇಕು. ಧಾರ್ಮಿಕ ಸ್ಥಳಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಅಂತಹ ಯಾವುದೇ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಾರ್ಗಿಲ್‌ನಲ್ಲಿರುವ ಜಮಿಯತ್ ಉಲೇಮಾ ಅಸ್ನಾ ಆಶ್ರಿಯಾ ತಿಳಿಸಿದೆ.
ಇಸ್ಲಾಮಾಬಾದ್ ಮಸೀದಿಯಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯನ್ನು ಭಾರತ ಖಂಡಿಸಿದೆ ಮತ್ತು ಭಾರತದ ವಿರುದ್ಧ ಪಾಕಿಸ್ತಾನದ ಆಧಾರರಹಿತ ಆರೋಪಗಳನ್ನು ತಿರಸ್ಕರಿಸಿದೆ.
ಇಂದು ಇಸ್ಲಾಮಾಬಾದ್‌ನ ಮಸೀದಿಯೊಂದರಲ್ಲಿ ನಡೆದ ಬಾಂಬ್ ಸ್ಫೋಟ ಖಂಡನೀಯವಾಗಿದ್ದು, ಇದರಿಂದ ಸಂಭವಿಸಿದ ಜೀವಹಾನಿಗೆ ಭಾರತ ಸಂತಾಪ ವ್ಯಕ್ತಪಡಿಸುತ್ತದೆ. ತನ್ನ ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವ ಬದಲು, ಪಾಕಿಸ್ತಾನ ತನ್ನ ದೇಶೀಯ ಸಮಸ್ಯೆಗಳಿಗೆ ಇತರರನ್ನು ಹೊಣೆ ಮಾಡುವ ಮೂಲಕ ಸ್ವಯಂ ಭ್ರಮೆಯಲ್ಲಿ ತೊಡಗಿರುವುದು ದುಃಖಕರವಾಗಿದೆ. ಇಂತಹ ಆಧಾರರಹಿತ ಮತ್ತು ಅರ್ಥವಿಲ್ಲದ ಎಲ್ಲಾ ಆರೋಪಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.