ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಆರೋಪ ಪ್ರಕರಣ: 7,000 ಪುಟಗಳ ಅಂತಿಮ ವರದಿ ಸಲ್ಲಿಸಿದ ಎಸ್ಐಟಿ

Dharmasthala mass burial allegation case: ರಾಜ್ಯ ಮಾತ್ರವಲ್ಲದೆ ದೇಶದೆಲ್ಲೆಡೆ ಗಮನಸೆಳೆದಿದ್ದ ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ (ಜು.14) ನ್ಯಾಯಾಲಯಕ್ಕೆ ತನ್ನ ಅಂತಿಮ ತನಿಖಾ ವರದಿಯನ್ನು ಸಲ್ಲಿಸಿದೆ.

ಧರ್ಮಸ್ಥಳ ಪ್ರಕರಣ: 7,000 ಪುಟಗಳ ಅಂತಿಮ ವರದಿ ಸಲ್ಲಿಸಿದ ಎಸ್ಐಟಿ

ಸಾಂದರ್ಭಿಕ ಚಿತ್ರ -

Priyanka P
Priyanka P Jul 15, 2026 6:26 PM

ಬೆಳ್ತಂಗಡಿ, ಜು.15: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ (Dharmasthala mass burial allegation case) ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಮಂಗಳವಾರ (ಜು.14) ನ್ಯಾಯಾಲಯಕ್ಕೆ ತನ್ನ ಅಂತಿಮ ತನಿಖಾ ವರದಿಯನ್ನು ಸಲ್ಲಿಸಿದೆ. ರಾಜ್ಯ ಮಾತ್ರವಲ್ಲದೆ ದೇಶದೆಲ್ಲೆಡೆ ಗಮನಸೆಳೆದಿದ್ದ ಆರೋಪಗಳ ಕುರಿತು ಒಂದು ವರ್ಷದ ತನಿಖೆಯನ್ನು ಮುಕ್ತಾಯಗೊಳಿಸಿದೆ. ಸುಮಾರು 7,000 ಪುಟಗಳ ವರದಿಯನ್ನು ಎಸ್‌ಐಟಿ ತನಿಖೆಯ ಸಮಯದಲ್ಲಿ ವಶಪಡಿಸಿಕೊಂಡ ಎಲ್ಲಾ ಸಾಮಗ್ರಿಗಳು ಮತ್ತು ಸಾಕ್ಷ್ಯಗಳೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಿದೆ. ತನಿಖೆಯ ಸಮಯದಲ್ಲಿ ವಶಪಡಿಸಿಕೊಂಡ ಆಸ್ತಿ ರಿಜಿಸ್ಟರ್ ಸೇರಿದಂತೆ ಹಲವು ದಾಖಲೆಗಳು ಇದರಲ್ಲಿ ಸೇರಿವೆ.

ದೇವಾಲಯ ಪಟ್ಟಣವಾದ ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮೂಹಿಕ ಅಂತ್ಯಕ್ರಿಯೆಗಳು, ಲೈಂಗಿಕ ದೌರ್ಜನ್ಯಗಳು, ಕೊಲೆಗಳು ಮತ್ತು ಅಪರಾಧ ಮುಚ್ಚಿ ಹಾಕಿದ ಆರೋಪಗಳ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದ ಒಂದು ವರ್ಷದ ನಂತರ ಅಂತಿಮ ವರದಿಯನ್ನು ಸಲ್ಲಿಸಲಾಯಿತು.

ನ್ಯಾಯಾಲಯದ ಮುಂದೆ ಸಮಗ್ರ ವರದಿಯನ್ನು ಸಲ್ಲಿಸಿದಾಗ ಧರ್ಮಸ್ಥಳದ ಮಾಸ್ಕ್ ಮ್ಯಾನ್ ಎಂದೇ ಜನಪ್ರಿಯರಾಗಿರುವ ಮಾಜಿ ನೈರ್ಮಲ್ಯ ಕಾರ್ಮಿಕ ಸಿ.ಎನ್. ಚಿನ್ನಯ್ಯ ಮತ್ತು ಆತನ ಪತ್ನಿ ಎಸ್‌ಐಟಿ ಅಧಿಕಾರಿಗಳ ಜೊತೆಗೆ ಹಾಜರಿದ್ದರು. ಚಿನ್ನಯ್ಯ ಆರಂಭದಲ್ಲಿ ಪ್ರಕರಣದ ಕಿಂಗ್ ಪಿನ್ ಆಗಿ ಹೊರಹೊಮ್ಮಿದ್ದ. ನಂತರ ಪ್ರಚಾರಕ್ಕಾಗಿ ತನ್ನನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.

Actor Prakash raj: ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ನನಗೆ ಫೋನ್‌ ಮಾಡಿದ್ದು ನಿಜ: ಧರ್ಮಸ್ಥಳ ಕೇಸ್‌ ಬಗ್ಗೆ ನಟ ಪ್ರಕಾಶ್‌ ರಾಜ್‌ ಸ್ಪಷ್ಟನೆ

1995 ಮತ್ತು 2014 ರ ನಡುವೆ ಹಲವಾರು ಮಹಿಳೆಯರು ಮತ್ತು ಅಪ್ರಾಪ್ತರ ಅಕ್ರಮ ಸಾಮೂಹಿಕ ಅಂತ್ಯಕ್ರಿಯೆಗೆ ಸಹಾಯ ಮಾಡಲು ತನ್ನನ್ನು ಒತ್ತಾಯಿಸಲಾಯಿತು ಎಂದು ಚಿನ್ನಯ್ಯ ಮಾಡಿದ ಸ್ಫೋಟಕ ಆರೋಪಗಳ ನಂತರ ಈ ಪ್ರಕರಣವು ರಾಷ್ಟ್ರೀಯ ಗಮನ ಸೆಳೆಯಿತು. ಸಂತ್ರಸ್ತರಲ್ಲಿ ಅನೇಕರು ಮಹಿಳೆಯರು ಮತ್ತು ವಿದ್ಯಾರ್ಥಿನಿಯರಾಗಿದ್ದು, ಅವರ ಮೃತದೇಹಗಳನ್ನು ವಿಲೇವಾರಿ ಮಾಡುವ ಮೊದಲು ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಲಾಗಿದೆ ಎಂದು ಅವರು ಹೇಳಿದ್ದರು.

ಈ ಆರೋಪಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಜೊತೆಗೆ ಸ್ವತಂತ್ರ ತನಿಖೆಗೆ ಒತ್ತಾಯಿಸಿತು. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಹಸ್ತಕ್ಷೇಪದ ನಂತರ, ರಾಜ್ಯ ಸರ್ಕಾರವು ಈ ಪ್ರದೇಶದಲ್ಲಿ ದಶಕಗಳಿಂದ ನಡೆದ ವಿವರಿಸಲಾಗದ ಸಾವುಗಳು, ಕಣ್ಮರೆಗಳು ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳ ತನಿಖೆಗಾಗಿ 20 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿತು.

ತನಿಖೆಯ ಭಾಗವಾಗಿ, ಎಸ್ಐಟಿ ತಂಡವು ಉತ್ಖನನಕ್ಕಾಗಿ 15 ಸ್ಥಳಗಳನ್ನು ಗುರುತಿಸಿ ಅಸ್ಥಿಪಂಜರದ ಅವಶೇಷಗಳು ಮತ್ತು ಮಣ್ಣಿನ ಮಾದರಿಗಳನ್ನು ವಶಪಡಿಸಿಕೊಂಡಿದೆ. ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗಳು ಕನಿಷ್ಠ ಎರಡು ಸ್ಥಳಗಳಿಂದ ವಶಪಡಿಸಿಕೊಂಡ ಅಸ್ಥಿಪಂಜರದ ಅವಶೇಷಗಳಲ್ಲಿ ವಿಷಕಾರಿ ವಸ್ತುಗಳನ್ನು ಪತ್ತೆಹಚ್ಚಿವೆ ಎಂದು ವರದಿಯಾಗಿದೆ.

ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ನಂತರ, ಈ ಪ್ರದೇಶದಲ್ಲಿ ನಡೆದ ಹಲವಾರು ಹಳೆಯ ಅಸಹಜ ಸಾವುಗಳ ಪ್ರಕರಣಗಳನ್ನು ತನಿಖೆಗೆ ಒಳಪಡಿಸಲಾಯಿತು. ಆದರೆ, ನಂತರ ಎಸ್‌ಐಟಿ ತನಿಖೆಯ ಸಮಯದಲ್ಲಿ ಚಿನ್ನಯ್ಯ ಅವರ ಹೇಳಿಕೆಗಳು ಪರಿಶೀಲನೆಗೆ ಒಳಪಟ್ಟಾಗ ಪ್ರಕರಣವು ಬೇರೆಯದ್ದೇ ತಿರುವು ಪಡೆದುಕೊಂಡಿತು. ಸದ್ಯ, 7,000 ಪುಟಗಳ ಅಂತಿಮ ವರದಿಯನ್ನು ಸಲ್ಲಿಸುವುದರೊಂದಿಗೆ, ತನಿಖೆಯು ಈಗ ನಿರ್ಣಾಯಕ ನ್ಯಾಯಾಂಗ ಹಂತವನ್ನು ಪ್ರವೇಶಿಸಿದೆ.