ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ; ಮಂಗಳೂರಿನ ಚರ್ಚ್ ಫಾದರ್ ಅರೆಸ್ಟ್
ಚರ್ಚ್ಗೆ ಪ್ರಾರ್ಥನೆಗೆ ಬಂದ ಸಂದರ್ಭದಲ್ಲಿ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಇಬ್ಬರು ಮಕ್ಕಳು ಪೋಷಕರ ಬಳಿ ಹೇಳಿಕೊಂಡಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
-
ಮಂಗಳೂರು: ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಂಗಳೂರಿನ ಚರ್ಚ್ ಪಾದ್ರಿಯನ್ನು (Mangalore church father) ಪಾಂಡೇಶ್ವರ ಠಾಣೆಯ ಪೊಲೀಸರು ಸಕಲೇಶಪುರದಲ್ಲಿ ಬಂಧಿಸಿದ್ದಾರೆ. ಮಂಗಳೂರಿನ ವೆಲೆನ್ಸಿಯಾ ಚರ್ಚ್ನ ಫಾದರ್ ಸಿಪ್ರಿಯನ್ ಪಿಂಟೋ ಬಂಧಿತ ಆರೋಪಿ.
ಚರ್ಚ್ಗೆ ಪ್ರಾರ್ಥನೆಗೆ ಬಂದ ಸಂದರ್ಭದಲ್ಲಿ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಇಬ್ಬರು ಮಕ್ಕಳು ಪೋಷಕರ ಬಳಿ ಹೇಳಿಕೊಂಡಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಪೋಕ್ಸೊ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ.
ಸಕಲೇಶಪುರದ ಸಂಬಂಧಿ ಮನೆಯಲ್ಲಿ ಅಡಗಿದ್ದ ಆರೋಪಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಈತನಿಗಾಗಿ ಬೆಂಗಳೂರಿನ ಹಲವೆಡೆ ಪೊಲೀಸರು ಹುಡುಕಾಟ ನಡೆಸಿದ್ದರು. ಆರೋಪಿ, ಚರ್ಚ್ಗೆ ಬರುವ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಮೈಸೂರಿನಲ್ಲಿ ಬಲೂನ್ ಮಾರುವ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ; ಕಾಮುಕನಿಗೆ ಗಲ್ಲು ಶಿಕ್ಷೆ
ಮೈಸೂರು: ಕಳೆದ ವರ್ಷ ದಸರಾ ವೇಳೆ ಬಲೂನ್ ಮಾರುವ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿ ಕಾರ್ತಿಕ್ಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಕಾರ್ತಿಕ್ ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆ ಮೈಸೂರು ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶರಾದ ಅನಿಲ್ ಪಿ ವಘಾಢೆ ಅವರು ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ?: ಕಳೆದ ವರ್ಷ ಮೈಸೂರು ದಸರಾ ಮಹೋತ್ಸವ ಸಮಯದಲ್ಲಿ ಈ ಹೀನಕೃತ್ಯ ನಡೆದಿತ್ತು. ದಸರಾ ಹಿನ್ನೆಲೆ ಕುಟುಂಬವೊಂದು ಗುಲ್ಬರ್ಗಾದಿಂದ ಬಲೂನ್ ಮಾರಲು ಮೈಸೂರಿಗೆ ಬಂದಿತ್ತು. ಆ ಕುಟುಂಬ ದಸರಾ ವಸ್ತುಪ್ರದರ್ಶನ ಬಳಿ ಟೆಂಟ್ನಲ್ಲಿ ವಾಸ್ತವ್ಯ ಹೂಡಿತ್ತು. ಕುಟುಂಬಸ್ಥರೆಲ್ಲರೂ ಮಲಗಿದ್ದಾಗ ಕಾಮುಕ ಕಾರ್ತಿಕ್ 9 ವರ್ಷದ ಬಾಲಕಿಯನ್ನ ಎಳೆದೊಯ್ದು ಅತ್ಯಾಚಾರ ಮಾಡಿ, ಭೀಕರವಾಗಿ ಕೊಲೆ ಮಾಡಿದ್ದ.
ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಘಟನೆ ನಡೆದ 24 ಗಂಟೆಯಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿತ್ತು. ಈ ಪ್ರಕರಣವನ್ನು ಮೈಸೂರಿನ ಫಾಸ್ಟ್ಟ್ರ್ಯಾಕ್ ಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಅಪರಾಧ ಸಾಬೀತಾಗಿತ್ತು. ಈ ಹಿನ್ನೆಲೆ ಅಪರಾಧಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.