Davangere Murder: ಕಲ್ಲಿನಿಂದ ಜಜ್ಜಿ ಗಂಡನನ್ನೇ ಕೊಲೆಗೈದ ಪತ್ನಿ; ಶವ ಸಾಗಿಸಲು ಮಗ ಸಹಾಯ!
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ವ್ಯಕ್ತಿಯ ಕೊಲೆ ಪ್ರಕರಣ ನಡೆದಿತ್ತು. ಪೊಲೀಸರ ತನಿಖೆ ವೇಳೆ ಪತ್ನಿಯೇ ಕೊಲೆ ಮಾಡಿರುವ ವಿಚಾರ ಬಯಲಾಗಿದೆ. ಶವ ಸಾಗಿಸಲು ಆಕೆಗೆ ಮಗ ಸಹಾಯ ಮಾಡಿದ್ದು, ಸದ್ಯ ಇಬ್ಬರೂ ಪೊಲೀಸರ ಅತಿಥಿಗಳಾಗಿದ್ದಾರೆ.
-
ದಾವಣಗೆರೆ: ಕಲ್ಲಿನಿಂದ ಜಜ್ಜಿ ಗಂಡನನ್ನೇ ಪತ್ನಿ ಕೊಲೆಗೈದಿರುವ ಘಟನೆ ಜಿಲ್ಲೆಯ (Davangere Murder) ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ. ಹತ್ಯೆ ಬಳಿಕ ತಂದೆಯ ಶವ ಸಾಗಿಸಲು ತಾಯಿಗೆ ಪುತ್ರ ಸಹಾಯ ಮಾಡಿರುವುದು ತನಿಖೆ ವೇಳೆ ಬಯಲಾಗಿದ್ದು, ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಸಾವಿತ್ರಮ್ಮ(40) ಹಾಗೂ ಹನುಮೇಗೌಡ (20) ಬಂಧಿತ ತಾಯಿ ಮತ್ತು ಪುತ್ರ. ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ಜೂ. 23 ರಂದು ಕಲ್ಲಿನಿಂದ ಜಜ್ಜಿ ಶಿವಪ್ಪ(42) ಎಂಬುವರ ಕೊಲೆ ಮಾಡಲಾಗಿತ್ತು. ದೂರು ದಾಖಲಿಸಿಕೊಂಡ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು, ಪ್ರಾಥಮಿಕ ತನಿಖೆ ವೇಳೆ ಪತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಪತ್ನಿ ಸಾವಿತ್ರಮ್ಮ ಹಾಗೂ ಶವ ಸಾಗಿಸಲು ಸಹಾಯ ಮಾಡಿದ್ದ ಪುತ್ರ ಹನುಮೇಗೌಡನ ಪಾತ್ರ ಇರುವುದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ
ಪತಿ - ಪತ್ನಿ ಇಬ್ಬರು ಕ್ಲುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದರು. ಪತಿ ಶಿವಪ್ಪ ಕುಡಿದು ಬಂದು ಗಲಾಟೆ ಮಾಡುತ್ತಿದ್ದರಿಂದ ಬೇಸತ್ತ ಪತ್ನಿ ಸಾವಿತ್ರಮ್ಮ, ಯಾರೂ ಇಲ್ಲದಾಗ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಳು. ಪುತ್ರ ಮನೆಗೆ ಬಂದು ನೋಡಿದಾಗ ಗಾಬರಿಯಾಗಿದ್ದು, ಬಳಿಕ ಕೊಲೆಯಾದ ತಂದೆಯ ಶವ ಸಾಗಿಸಲು ತಾಯಿಗೆ ಸಹಾಯ ಮಾಡಿದ್ದನು. ಇದೆಲ್ಲ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂದೂಕು ತರಬೇತಿ ವೇಳೆ ಮಿಸ್ ಫೈರಿಂಗ್ ಆಗಿ ಹಾವೇರಿ ಮೂಲದ ನೌಕಾಪಡೆ ಯೋಧ ಸಾವು
ಯಾರೋ ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ ಪತ್ನಿ
ಕೊಲೆ ಮಾಡಿದ ಬಳಿಕ ರಾತ್ರಿ ತಾಯಿ-ಮಗ ಸೇರಿ ಮೃತದೇಹವನ್ನು ಮನೆಯಿಂದ ಹೊರ ತಂದು, ಅಡುಗೆ ಮನೆಯಲ್ಲಿನ ರಕ್ತದ ಕಲೆಗಳನ್ನು ತೊಳೆದು ಸಾಕ್ಷಿ ನಾಶಕ್ಕೆ ಮುಂದಾಗಿದ್ದರು. ಬಳಿಕ ತನ್ನ ಗಂಡನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಸಾವಿತ್ರಮ್ಮ ಅಳಲು ತೋಡಿಕೊಂಡಿದ್ದಳು. ಪೊಲೀಸರ ಮುಂದೆಯೂ ಇದೇ ಹೇಳಿಕೆ ನೀಡಿದ್ದಳು. ಆದರೆ, ತನಿಖೆ ಕೈಗೊಂಡ ಪೊಲೀಸರು, ಮೃತನ ಮಗ ಹನುಮೇಗೌಡನನ್ನು ವಿಚಾರಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಎಸ್ಪಿ ಶೇಖರ್ ಎಚ್.ಟಿ. ತಿಳಿಸಿದ್ದಾರೆ.