ಆಯುರ್ವೇದ ಪದವಿಗೆ ಹೊಸ ಆಯಾಮ: ಕ್ಲಿನಿಕಲ್ ಪ್ರಾಕ್ಟೀಸ್‌ನಿಂದ ಜಾಗತಿಕ ಅವಕಾಶಗಳವರೆಗೆ
ಕಳೆದ ಮೂರು ದಶಕಗಳಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಹಿಂದೆ ಆಯುರ್ವೇದ ಪದವಿಯ ನಂತರ ಕ್ಲಿನಿಕಲ್ ಪ್ರಾಕ್ಟೀಸ್‌ಗೆ ಮಾತ್ರ ಸೀಮಿತವಾಗಿದ್ದ ಅವಕಾಶಗಳು ಇಂದು ಶಿಕ್ಷಣ, ಸಂಶೋಧನೆ, ಆಸ್ಪತ್ರೆ ನಿರ್ವಹಣೆ, ವೆಲ್‌ನೆಸ್, ಲೈಫ್‌ಸ್ಟೈಲ್ ಮತ್ತು ವಿಶೇಷ ಚಿಕಿತ್ಸಾ ಕ್ಷೇತ್ರಗಳ ವರೆಗೆ ವಿಸ್ತರಿಸಿವೆ. ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಹೊಸ ಸವಾಲುಗಳನ್ನು ಗಮನಿಸಿದರೆ ಆಯುರ್ವೇದದ ಭವಿಷ್ಯ ಇನ್ನಷ್ಟು ಉಜ್ವಲವಾಗಿದೆ.
-
ಡಾ.ಮಮತಾ ಕೆ.ವಿ, ಪ್ರಾಂಶುಪಾಲರು, ಎಸ್‌ಡಿಎಂ ಕಾಲೇಜ್ ಆಫ್ ಆಯುರ್ವೇದ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ., ಆಯುರ್ವೇದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ
ಕಳೆದ ಮೂರು ದಶಕಗಳ ನಿಮ್ಮ ಅನುಭವದ ಆಧಾರದ ಮೇಲೆ, ಆಯುರ್ವೇದ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಕಾಣುತ್ತಿದ್ದೀರಿ?
ಕಳೆದ ಮೂರು ದಶಕಗಳಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಹಿಂದೆ ಆಯುರ್ವೇದ ಪದವಿಯ ನಂತರ ಕ್ಲಿನಿಕಲ್ ಪ್ರಾಕ್ಟೀಸ್‌ಗೆ ಮಾತ್ರ ಸೀಮಿತವಾಗಿದ್ದ ಅವಕಾಶಗಳು ಇಂದು ಶಿಕ್ಷಣ, ಸಂಶೋಧನೆ, ಆಸ್ಪತ್ರೆ ನಿರ್ವಹಣೆ, ವೆಲ್‌ನೆಸ್, ಲೈಫ್‌ಸ್ಟೈಲ್ ಮತ್ತು ವಿಶೇಷ ಚಿಕಿತ್ಸಾ ಕ್ಷೇತ್ರಗಳವರೆಗೆ ವಿಸ್ತರಿಸಿವೆ. ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಹೊಸ ಸವಾಲುಗಳನ್ನು ಗಮನಿಸಿದರೆ ಆಯುರ್ವೇದದ ಭವಿಷ್ಯ ಇನ್ನಷ್ಟು ಉಜ್ವಲವಾಗಿದೆ.
ಆಯುರ್ವೇದ ಪದವೀಧರರಿಗೆ ಕ್ಲಿನಿಕಲ್ ಪ್ರಾಕ್ಟೀಸ್‌ನಲ್ಲಿ ಯಾವೆಲ್ಲ ಅವಕಾಶಗಳಿವೆ?
ಸಾಂಪ್ರದಾಯಿಕ ಕ್ಲಿನಿಕ್ ಅಥವಾ ಆಸ್ಪತ್ರೆಯ ಜೊತೆಗೆ ಪಂಚಕರ್ಮ ಕೇಂದ್ರಗಳು, ಅಗ್ನಿಕರ್ಮ, ಸ್ಥಳೀಯ ಚಿಕಿತ್ಸೆಗಳು ಮತ್ತು ಓಪಿಡಿ ಆಧಾರಿತ ಪಂಚಕರ್ಮ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬಂಜೆತನ, ಸ್ತ್ರೀರೋಗ, ಚರ್ಮರೋಗ, ಗುದರೋಗ, ಡಯಟ್ ಮತ್ತು ಲೈಫ್‌ಸ್ಟೈಲ್ ಕ್ಲಿನಿಕ್‌ಗಳಂತಹ ವಿಶೇಷ ಕ್ಷೇತ್ರಗಳಲ್ಲೂ ಪದವೀಧರರು ತಮ್ಮ ಆಸಕ್ತಿಗೆ ಅನುಗುಣವಾಗಿ ವೃತ್ತಿ ರೂಪಿಸಿಕೊಳ್ಳ ಬಹುದು.
ಇದನ್ನೂ ಓದಿ: 2nd Ayurveda World Summit: ಡಿ.25ರಿಂದ 28ರವರೆಗೆ ಬೆಂಗಳೂರಿನಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ
ಜೀವನಶೈಲಿ ಆಧಾರಿತ ಕಾಯಿಲೆಗಳ ಹೆಚ್ಚಳದ ಸಂದರ್ಭದಲ್ಲಿ ಆಯುರ್ವೇದದ ಪ್ರಸ್ತುತತೆ ಹೇಗಿದೆ?
ಇಂದು ಮಧುಮೇಹ, ಬೊಜ್ಜು, ಒತ್ತಡ ಮತ್ತು ಇತರ ಜೀವನಶೈಲಿ ಸಂಬಂಧಿತ ಕಾಯಿಲೆಗಳು ದೊಡ್ಡ ಆರೋಗ್ಯ ಸವಾಲಾಗಿವೆ. ಆಯುರ್ವೇದವು ರೋಗ ಬಂದ ನಂತರ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ ಆರೋಗ್ಯವಂತರ ಆರೋಗ್ಯ ರಕ್ಷಣೆಗೂ ಒತ್ತು ನೀಡುತ್ತದೆ. ದಿನಚರಿ, ಋತುಚರಿ, ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ಸಮತೋಲಿತ ಜೀವನಶೈಲಿಯ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳನ್ನು ಆಯುರ್ವೇದ ವಿವರಿಸುತ್ತದೆ.
ಮುಂದಿನ ದಿನಗಳಲ್ಲಿ ಯಾವ ಆಯುರ್ವೇದ ಕ್ಷೇತ್ರಗಳಿಗೆ ಹೆಚ್ಚಿನ ಬೇಡಿಕೆ ಬರಬಹುದು?
ಮಹಿಳಾ ಮತ್ತು ಮಕ್ಕಳ ಆರೋಗ್ಯ, ವೃದ್ಧಾಪ್ಯ ಆರೈಕೆ, PCOS, ಮಾನಸಿಕ ಆರೋಗ್ಯ, ಒತ್ತಡ ನಿರ್ವಹಣೆ, ಲಾಂಜಿವಿಟಿ-ವೆಲ್‌ನೆಸ್, ಡಿಟಾಕ್ಸ್ ಮತ್ತು ರಿಜುವೆನೇಶನ್ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿವೆ. ವೈಜ್ಞಾನಿಕ ಸಾಕ್ಷ್ಯಾಧಾರಿತ ಆಯುರ್ವೇದವು ಈ ಕ್ಷೇತ್ರಗಳಲ್ಲಿ ಇನ್ನಷ್ಟು ಜನಪ್ರಿಯವಾಗುವ ಸಾಧ್ಯತೆ ಇದೆ.
ಮೆಡಿಕಲ್ ಟೂರಿಸಂನಲ್ಲಿ ಆಯುರ್ವೇದದ ಪಾತ್ರ ಹೇಗಿರಬಹುದು?
ಆಯುರ್ವೇದವು ಭಾರತದ ಆರೋಗ್ಯ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗುವ ಸಾಮರ್ಥ್ಯ ಹೊಂದಿದೆ. ಗುಣಮಟ್ಟದ ಚಿಕಿತ್ಸೆ, ವೈಜ್ಞಾನಿಕ ಸಂಶೋಧನೆ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಮಾನದಂಡಗಳನ್ನು ಮತ್ತಷ್ಟು ಬಲಪಡಿಸಿದರೆ ಭಾರತವನ್ನು ಜಾಗತಿಕ ಹೆಲ್ತ್ ಟೂರಿಸಂ ಹಬ್ ಆಗಿ ರೂಪಿಸುವಲ್ಲಿ ಆಯುರ್ವೇದ ಪ್ರಮುಖ ಪಾತ್ರ ವಹಿಸಬಹುದು.
ಎಸ್‌ಡಿಎಂನ ಹಳೆ ವಿದ್ಯಾರ್ಥಿಗಳು ಆಯುರ್ವೇದ ಕ್ಷೇತ್ರಕ್ಕೆ ಯಾವ ರೀತಿಯ ಕೊಡುಗೆ ನೀಡುತ್ತಿದ್ದಾರೆ?
ನಮ್ಮ ಹಳೆ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ಶಿಕ್ಷಣ, ಸಂಶೋಧನೆ, ಔಷಧ ತಯಾರಿಕೆ ಮತ್ತು ಆಸ್ಪತ್ರೆ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅಮೆರಿಕಾ, ಜಪಾನ್, ಲಂಡನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿಯೂ ಅವರು ಆಯುರ್ವೇದವನ್ನು ಪರಿಚಯಿಸುತ್ತಿದ್ದಾರೆ. ದೇಶದ ವಿವಿಧೆಡೆ ತಮ್ಮದೇ ಆಸ್ಪತ್ರೆಗಳನ್ನು ಸ್ಥಾಪಿಸಿ ಜನಸೇವೆಯಲ್ಲೂ ತೊಡಗಿದ್ದಾರೆ.
ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಂಸ್ಥೆ ಹೇಗೆ ಒತ್ತು ನೀಡುತ್ತದೆ?
ನಮ್ಮ ಉದ್ದೇಶ ಕೇವಲ ವೈದ್ಯಕೀಯ ಪದವಿ ನೀಡುವುದಲ್ಲ; ಸಹಾನುಭೂತಿಯಿಂದ ರೋಗಿಗಳನ್ನು ಆರೈಕೆ ಮಾಡುವ ಉತ್ತಮ ವೈದ್ಯರನ್ನು ರೂಪಿಸುವುದು. ವಿವಿಧ ಕ್ಲಬ್‌ಗಳು, ಎನ್‌ಎಸ್‌ಎಸ್, ಪರಿಸರ ಚಟುವಟಿಕೆಗಳು, ಸಮಾಜಮುಖಿ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು ಮತ್ತು ಗ್ರಾಮ ದತ್ತು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಸಮಾಜದೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ.
ಸಂಶೋಧನಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಯಾವ ಅವಕಾಶಗಳಿವೆ?
ಸಂಸ್ಥೆಯ ಸಂಶೋಧನಾ ಕೇಂದ್ರ, ಔಷಧೀಯ ಸಸ್ಯೋದ್ಯಾನ ಹಾಗೂ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳೊಂದಿಗಿನ ಸಹಯೋಗ ವಿದ್ಯಾರ್ಥಿಗಳಿಗೆ ಉತ್ತಮ ಸಂಶೋಧನಾ ಅವಕಾಶ ಗಳನ್ನು ಒದಗಿಸುತ್ತವೆ. ಎಂಜಿನಿಯರಿಂಗ್, ಹಾರ್ಟಿಕಲ್ಚರ್, ಸ್ಪೀಚ್ ಮತ್ತು ಹಿಯರಿಂಗ್‌ನಂತಹ ವಿವಿಧ ಕ್ಷೇತ್ರಗಳೊಂದಿಗೆ ಇರುವ ಸಹಯೋಗಗಳು ಅಂತರಶಿಸ್ತೀಯ ಸಂಶೋಧನೆಗೆ ಉತ್ತೇಜನ ನೀಡುತ್ತವೆ. RGUHS, CCRAS ಮತ್ತು SDM Education Trustನ ವಿವಿಧ ಸಂಶೋಧನಾ ಯೋಜನೆ ಗಳು ವಿದ್ಯಾರ್ಥಿಗಳನ್ನು ಈ ಕ್ಷೇತ್ರದಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತವೆ.
ಮುಂದಿನ ಪೀಳಿಗೆಯ ಆಯುರ್ವೇದ ವೈದ್ಯರಿಗೆ ನಿಮ್ಮ ಸಂದೇಶವೇನು?
ಆಯುರ್ವೇದವನ್ನು ಕೇವಲ ಪರಂಪರೆಯ ಚಿಕಿತ್ಸಾ ಪದ್ಧತಿಯಾಗಿ ನೋಡದೆ, ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನ ಮತ್ತು ಆಧುನಿಕ ಆರೋಗ್ಯ ವ್ಯವಸ್ಥೆಯೊಂದಿಗೆ ಬೆಳೆಸುವ ಮನೋ ಭಾವ ಹೊಂದಬೇಕು. ಕ್ಲಿನಿಕಲ್ ಜ್ಞಾನದ ಜೊತೆಗೆ ಸಂವಹನ ಕೌಶಲ್ಯ, ಸಂಶೋಧನಾ ಮನೋ ಭಾವ ಮತ್ತು ಸಾರ್ವಜನಿಕ ಆರೋಗ್ಯದ ಅರಿವು ಬೆಳೆಸಿಕೊಂಡರೆ ಜಾಗತಿಕ ಮಟ್ಟದಲ್ಲಿ ಉತ್ತಮ ಅವಕಾಶಗಳನ್ನು ಸೃಷ್ಟಿಸಬಹುದು.
ಅಂತಿಮವಾಗಿ, ಆಯುರ್ವೇದದ ಭವಿಷ್ಯವನ್ನು ನೀವು ಹೇಗೆ ನೋಡುತ್ತೀರಿ?
ಆಯುರ್ವೇದದ ಭವಿಷ್ಯ ಬಹಳ ಆಶಾದಾಯಕವಾಗಿದೆ. ಕ್ಲಿನಿಕಲ್ ಪ್ರಾಕ್ಟೀಸ್‌ನಿಂದ ಶಿಕ್ಷಣ, ಸಂಶೋಧನೆ, ವೆಲ್‌ನೆಸ್, ಸಾರ್ವಜನಿಕ ಆರೋಗ್ಯ ಮತ್ತು ಮೆಡಿಕಲ್ ಟೂರಿಸಂವರೆಗೆ ಇದರ ವ್ಯಾಪ್ತಿ ವಿಸ್ತರಿಸುತ್ತಿದೆ. ಕಳೆದ 68 ವರ್ಷಗಳಿಂದ ಆಯುರ್ವೇದ ಶಿಕ್ಷಣ, ಚಿಕಿತ್ಸೆ ಮತ್ತು ಸಂಶೋಧನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಡುಪಿ ಎಸ್‌ಡಿಎಂ ಕಾಲೇಜ್, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಭವಿಷ್ಯದ ಅಗತ್ಯಗಳಿಗೆ ತಕ್ಕ ವೃತ್ತಿಪರ ವೈದ್ಯರನ್ನು ರೂಪಿಸುವಲ್ಲಿ ತನ್ನ ಕೊಡುಗೆಯನ್ನು ಮುಂದುವರಿಸಲಿದೆ.