Davanagere News: ದಾವಣಗೆರೆಯ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ
Davanagere News: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆಯಾಗಿದೆ ಎಂದು ಕಮಲಾಪುರದಲ್ಲಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್.ಶೇಜೇಶ್ವರ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆಯಾಗಿದೆ ಎಂದು ಕಮಲಾಪುರದಲ್ಲಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್.ಶೇಜೇಶ್ವರ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ (Davanagere News) ನ್ಯಾಮತಿ ತಾಲೂಕಿನ ಮಾದಾಪುರ ಕೆರೆಯಲ್ಲಿ ಸ್ಥಳೀಯರು ಜೆಸಿಬಿಯಿಂದ ಮಣ್ಣನ್ನು ತೆಗೆಯುವಾಗ ಶಿಲಾ ಶಾಸನ ಪತ್ತೆಯಾಗಿದೆ. ಇಲ್ಲಿಗೆ ಪುರಾತತ್ವ ಇಲಾಖೆ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿದ ನಂತರ ಇದು ಬಾದಾಮಿ ಚಾಲುಕ್ಯರ ಶಿಲಾಶಾಸನವಾಗಿದೆ ಎಂದು ತಿಳಿದುಬಂದಿದೆ.
ಶಾಸನವು 5 ಅಡಿ ಉದ್ದವಿದ್ದು ಹಳೆಗನ್ನಡದ 17 ಸಾಲು ಶಾಸನವನ್ನು ಒಳಗೊಂಡಿದೆ. ಇದು ಕ್ರಿ.ಶ 7 ನೇ ಶತಮಾನದ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕ್ರಿ.ಶ.654-681 ಕಾಲದ ಶಾಸನವಾಗಿದೆ. ಒಂದನೇ ವಿಕ್ರಮಾದಿತ್ಯನು ರಾಜ್ಯವಾಳುವಾಗ ಅವನ ಅಧಿಕಾರಿ ಸಿಂಘವೆಣ್ಣನು ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ಪೂರ್ವ ಮರ್ಯಾದೆಯಿಂದ ಪ್ರಜೆಗಳಿಗಾಗಿ ಊರ ಮೇಲಿನ ಕೆಲವು ತೆರಿಗೆಗಳನ್ನು ಮನ್ನಾ ಮಾಡಿರುವುದನ್ನು ಹಾಗೂ ಕೆರೆಯನ್ನು ನಿರ್ಮಿಸಿದ ರಾಜರಿಗೆ ಆರು ಮತ್ತರು ಭೂಮಿಯನ್ನು ದಾನ ನೀಡಿರುವುದನ್ನು ಹಾಗೂ ಈ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕಲುಗಳಿಗೆ ಸಲ್ಲುತ್ತೆಂದು ಉಲ್ಲೇಖಿಸಲಾಗಿದೆ.
ಈ ಶಾಸನ ಶೋಧನೆಯಿಂದ ಬಳ್ಳಾವಿ ಎಪ್ಪತ್ತು ಎಂಬ 70 ಗ್ರಾಮಗಳಿದ್ದ ಆಡಳಿತ ವಿಭಾಗದ ಪ್ರಾಚೀನತೆಯನ್ನು ಹಾಗೂ ಶಾಸನವು 1344 ವರ್ಷಗಳ ಪುರಾತನವಾದದು ಎಂದು ತಿಳಿಸುತ್ತದೆ. ಈ ಶಾಸನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರಿ.ಶ.17ನೇ ಶತಮಾನದಲ್ಲಿ ಅಪೂರ್ಣ ಉಬ್ಬು ಶಿಲ್ಪವಿದೆ ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Akshaya Tritiya 2025: ಜಿಯೋ ಗೋಲ್ಡ್ 24ಕೆ ಡೇಸ್; ಶೇ.2ರವರೆಗೆ ಉಚಿತ ಡಿಜಿಟಲ್ ಚಿನ್ನ ಪಡೆಯುವ ಅವಕಾಶ
ಈ ಶಾಸನ ಓದಿಕೊಟ್ಟ ಪ್ರೊ.ಶ್ರೀನಿವಾಸ ಪಾಡಿಗರ, ರಮೇಶ ಹಿರೇಜಂಬೂರು, ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಡಾ.ರವಿಕುಮಾರ ನವಲಗುಂದ, ಮಂಜಪ್ಪ ಚುರ್ಚಿಗುಂಡಿ, ಮಾದಾಪುರ ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ, ಗ್ರಾಮಸ್ಥರಾದ ಬುಜಂಗ, ವೀರೇಶ್ ಹಾಗೂ ಇತರರ ಕಾರ್ಯವನ್ನು ಪುರಾತ್ವತ ಇಲಾಖೆ ನಿರ್ದೇಶಕರು ಶ್ಲಾಘಿಸಿದ್ದಾರೆ.