ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vachanananda Swamiji: ಹಣಕಾಸು ಅವ್ಯವಹಾರ ಆರೋಪ; ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ

Harihara Panchamasali Jagadguru Peetha: ಹರಿಹರ ತಾಲೂಕಿನ ಹಣಗವಾಡಿ ಸಮೀಪವಿರುವ ಮಠದಲ್ಲಿ ಕಳೆದ 12 ದಿನಗಳಿಂದ ಧರ್ಮದರ್ಶಿ ಸಮಿತಿಯ ಮಹತ್ವದ ಸಭೆ ನಡೆಯುತ್ತಿತ್ತು. ಅಂತಿಮವಾಗಿ ವಚನಾನಂದ ಸ್ವಾಮೀಜಿಯನ್ನು ಪಂಚಮಸಾಲಿ ಪೀಠದಿಂದ ಪದಚ್ಯುತಿಗೊಳಿಸುವ ನಿರ್ಧಾರವನ್ನು ಧರ್ಮದರ್ಶಿ ಸಭೆ ಕೈಗೊಂಡಿದೆ.

ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ

ವಚನಾನಂದ ಸ್ವಾಮೀಜಿ. -

Prabhakara R
Prabhakara R Apr 13, 2026 3:07 PM

ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಚನಾನಂದ ಸ್ವಾಮೀಜಿ (Vachanananda Swamiji) ಅವರನ್ನು ಉಚ್ಛಾಟನೆ ಮಾಡಲು ಧರ್ಮದರ್ಶಿ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಒಟ್ಟು 15 ಜನ ಇರುವ ಧರ್ಮದರ್ಶಿ ಸಮಿತಿ ಸಭೆಯಲ್ಲಿ 12 ಜನರು, ಸ್ವಾಮೀಜಿಗಳ ಉಚ್ಚಾಟನೆಗೆ ಸಹಮತ ಸೂಚಿಸಿದ್ದಾರೆ ಎಂದು ಧರ್ಮದರ್ಶಿ ಸಮಿತಿ ಸದಸ್ಯರಾದ ಬಸವರಾಜ್ ದಿಂಡೂರ ಹಾಗೂ ಬಾವಿ ಬೆಟ್ಟಪ್ಪ ತಿಳಿಸಿದ್ದಾರೆ.

ಹರಿಹರ ತಾಲೂಕಿನ ಹಣಗವಾಡಿ ಸಮೀಪವಿರುವ ಮಠದಲ್ಲಿ ಕಳೆದ 12 ದಿನಗಳಿಂದ ಧರ್ಮದರ್ಶಿ ಸಮಿತಿಯ ಮಹತ್ವದ ಸಭೆ ನಡೆಯುತ್ತಿತ್ತು. ಒಟ್ಟು 15 ಸದಸ್ಯರನ್ನೊಳಗೊಂಡ ಈ ಸಮಿತಿಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಅಂತಿಮವಾಗಿ ಸೋಮವಾರ ಸಮಿತಿಯಿಂದ ಸ್ವಾಮೀಜಿಯನ್ನು ಪೀಠದಿಂದ ಪದಚ್ಯುತಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಮಠದ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲ ಮತ್ತು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಭಕ್ತರು ಹಾಗೂ ಆಡಳಿತ ಮಂಡಳಿಯ ಒಂದು ವರ್ಗ ಕಳೆದ ಹಲವು ತಿಂಗಳುಗಳಿಂದ 'ಲೆಕ್ಕ ಕೊಡಿ' ಅಭಿಯಾನವನ್ನು ನಡೆಸುತ್ತಿದೆ. ಇಂದು ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಕ್ತರು ಆಕ್ರೋಶಗೊಂಡು ಮಠದ ಆವರಣಕ್ಕೆ ನುಗ್ಗಲು ಯತ್ನಿಸಿದರು. ಈ ಒತ್ತಡದ ಬೆನ್ನಲ್ಲೇ ಧರ್ಮದರ್ಶಿ ಸಮಿತಿಯು ಈ ಮಹತ್ವದ ಆದೇಶ ಹೊರಡಿಸಿದೆ.

ಮಠದ ಆಸ್ತಿಪಾಸ್ತಿಗಳ ರಕ್ಷಣೆ ಮತ್ತು ಮುಂದಿನ ಪೀಠಾಧಿಪತಿಗಳ ನೇಮಕದ ಕುರಿತು ಸಮಿತಿಯು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಮಠದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

3 ಕೋಟಿ ರೂ. ನೀಡುವಂತೆ ಬ್ಲ್ಯಾಕ್‌ಮೇಲ್‌; ಮಹಿಳೆ ಸೇರಿ ನಾಲ್ವರ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರು

ಸಮಿತಿ ನಿರ್ಧಾರಕ್ಕೆ ಟ್ರಸ್ಟಿ ವಿರೋಧ

ಧರ್ಮದರ್ಶಿ ಸಮಿತಿಯ ನಿರ್ಧಾರದ ಬಗ್ಗೆ ಸಂಸ್ಥಾಪಕ ಟ್ರಸ್ಟಿ ಎಚ್. ಪಿ. ಬಸವರಾಜ್ ಕಿಡಿಕಾರಿದ್ದಾರೆ. ಸಭೆಯಲ್ಲಿ ವಚನಾನಂದ ಸ್ವಾಮೀಜಿಗಳನ್ನು ಮಠದ ಗುರು ಪೀಠದ ಉಚ್ಛಾಟನೆಗೆ ಸಮಿತಿ ಮುಂದಾದ ಕಾರಣ ಸಭೆಯಿಂದ ನಾನು ಹೊರಬಂದಿದ್ದೇನೆ. ಸಮಿತಿಯ ಈ ನಿರ್ಧಾರಕ್ಕೆ ನನ್ನ ವಿರೋಧವಿದೆ ಎಂದು ಅವರು ತಿಳಿಸಿದ್ದಾರೆ. ಸಭೆ ಕರೆಯುವ ಏಳು ದಿನ ಮೊದಲು ಧರ್ಮದರ್ಶಿ ಸಮಿತಿ ಸದಸ್ಯರಿಗೆ ನೋಟಿಸ್ ಕೊಡಬೇಕು. ಆದರೆ ತಡರಾತ್ರಿ ಬಂದು ಸ್ವಾಮೀಜಿಗಳು ಇರುವ ಮಠದ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಜತೆಗೆ ಸ್ವಾಮೀಜಿ ವಿರುದ್ಧ ಇರುವ ಆರೋಪ ಪಟ್ಟಿ ಕೊಡಬೇಕು. ಇದ್ಯಾವುದನ್ನೂ ಮಾಡದೆ ಧರ್ಮದರ್ಶಿ ಸಮಿತಿ ಸಭೆ ನಡೆಸಿದೆ ಎಂಬ ಆರೋಪವೂ ಕೇಳಿಬಂದಿದೆ.