Adigas Yatra: ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ-ಖಾಸಗಿ ಸಂಸ್ಥೆಗಳು ಕೈ ಜೋಡಿಸಬೇಕು: ನಾಗರಾಜ ಅಡಿಗ
Tourism Development: ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಸಾಧ್ಯ. ಆದ್ದರಿಂದ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಕೈ ಜೋಡಿಸಬೇಕಾದ ಅವಶ್ಯಕತೆ ಇದೆ ಎಂದು ಅಡಿಗಾಸ್ ಯಾತ್ರಾ ಮುಖ್ಯ ವ್ಯವಸ್ಥಾಪಕ ನಾಗರಾಜ ಅಡಿಗ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಅಡಿಗಾಸ್ ಯಾತ್ರಾ ಮತ್ತು ಕರ್ನಾಟಕ ಕಲಾ ಕಾಲೇಜಿನ ನಡುವೆ ಶೈಕ್ಷಣಿಕ ಒಪ್ಪಂದಕ್ಕೆ ನಾಗರಾಜ ಅಡಿಗರು ಮತ್ತು ಡಾ.ಜಗದೀಶ ಕಿವುಡನವರ ಒಪ್ಪಂದ ಪತ್ರ ಹಸ್ತಾಂತರಿಸಿದರು. -
ಧಾರವಾಡ: ಸರಕಾರ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಸಾಧ್ಯ ಎಂದು ಬೆಂಗಳೂರಿನ ಅಡಿಗಾಸ್ ಯಾತ್ರಾ (Adigas Yatra) ಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ನಾಗರಾಜ ಅಡಿಗ (Nagaraj Adiga) ಅಭಿಪ್ರಾಯಪಟ್ಟರು.
ಕರ್ನಾಟಕ ಕಲಾ ಕಾಲೇಜಿನ (Karnatak Arts College) ಪ್ರವಾಸೋದ್ಯಮ ಅಧ್ಯಯನ ವಿಭಾಗದ ಡಿಜಿಟಲ್ ಸಭಾಂಗಣದಲ್ಲಿ ಬೆಂಗಳೂರಿನ ಅಡಿಗಾಸ್ ಯಾತ್ರಾ ಸಂಸ್ಥೆ ಮತ್ತು ಕರ್ನಾಟಕ ಕಲಾ ಕಾಲೇಜಿನ ನಡುವೆ ಒಪ್ಪಂದಕ್ಕೆ ಸಹಿ ಹಾಕಿ ಅವರು ಮಾತನಾಡಿದರು.
ಕಳೆದ 32 ವರ್ಷದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಸೇವೆಯನ್ನು ಅಡಿಗಾಸ್ ಯಾತ್ರಾ ಸಂಸ್ಥೆ ಒದಗಿಸುತ್ತದೆ. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಅಡಿಗಾಸ್ ಯಾತ್ರಾ ಸಂಸ್ಥೆಯು ವೃತ್ತಿಪರ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ತರಬೇತಿ, ಉದ್ಯೋಗ ಸೇರಿದಂತೆ ಅನೇಕ ಚಟುವಟಿಕೆ ಮತ್ತು ಅವಕಾಶಗಳನ್ನು ಒದಗಿಸುತ್ತದೆ ಎಂದ ಅವರು ಕರ್ನಾಟಕ ಕಾಲೇಜಿನ ಪ್ರವಾಸೋದ್ಯಮ ಜೊತೆಗೆ ಅಡಿಗಾಸ ಪ್ರವಾಸೋದ್ಯಮ ಸಂಸ್ಥೆ ಗುರುತಿಸಿಕೊಂಡಿರುವದು ಸಂತಸದ ಸಂಗತಿ ಆಗಿದೆ ಎಂದರು.
ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿದೆ. ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆಯ ಹೊಂದಿದೆ ಪ್ರವಾಸೋದ್ಯಮ ಭಾರತದಲ್ಲಿ ಹೆಚ್ಚು ಮಹತ್ವ ಪಡೆದಿದೆ. ಪ್ರಸ್ತುತ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ಪಡೆದಿದೆ. ಆರೋಗ್ಯ ಪ್ರವಾಸೋದ್ಯಮ ಪ್ರಸ್ತುತತೆ ಪಡೆದಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಸಾಧ್ಯ. ಆದ್ದರಿಂದ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಕೈ ಜೋಡಿಸಬೇಕಾದ ಅವಶ್ಯಕತೆ ಇದೆ ಎಂದರು.
ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ.ಜಗದೀಶ ಕಿವುಡನವರ ಮಾತನಾಡಿ, ಪ್ರವಾಸೋದ್ಯಮ ಅಧ್ಯಯನ ವಿಭಾಗವು ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ನೀಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಮತ್ತು ಅನೇಕ ಹೋಟೆಲ್ ಉದ್ಯಮದ ಜೊತೆ ಒಪ್ಪಂದ ಮಾಡಿಕೊಂಡಿದೆ. ಭವಿಷ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಅವಕಾಶಗಳಿಗೆ ತಕ್ಕಂತೆ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ವಿಭಾಗ ಅನೇಕ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಎಂದರು.
ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಐ.ಸಿ ಮುಳಗುಂದ ಮಾತನಾಡಿ, ಪ್ರವಾಸೋದ್ಯಮ ವಿಭಾಗದ ಇದು 24ನೇ ಒಪ್ಪಂದ ಆಗಿದೆ. ಅಡಿಗಾಸ್ ಯಾತ್ರಾ ಸಂಸ್ಥೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಉತ್ತಮ ಸೇವೆಯನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಈ ಒಪ್ಪಂದ ಅನುಕೂಲ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ವೆಬ್ ಸೈಟ್ ಅನ್ನು ನಾಗರಾಜ ಅಡಿಗರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಡಾ.ಸುಷ್ಮಾ ಮಳಲಿ, ಡಾ.ಕೇದಾರ, ಪ್ರೊ.ಸಂದೀಪ ಘೊರ್ಪಡೆ, ಡಾ.ಮನಾಲಿ, ಡಾ.ಪ್ರಭಾಕರ್ ಕಾಂಬಳೆ ಸೇರಿದಂತೆ ಅಡಿಗಾಸ್ ಯಾತ್ರಾ ಸಂಸ್ಥೆಯ ಅಧಿಕಾರಿಗಳು ಇದ್ದರು.