ಹುಬ್ಬಳ್ಳಿಯಲ್ಲಿ 'ಕೌಶಲ್ಯ ರಥ' ಅತ್ಯಾಧುನಿಕ ಮೊಬೈಲ್ ತರಬೇತಿ ಕೇಂದ್ರದ ವಾಹನ ಲೋಕಾರ್ಪಣೆ ಮಾಡಿದ ಪ್ರಲ್ಹಾದ್ ಜೋಶಿ
Pralhad Joshi: ಗ್ರಾಮೀಣ ಪ್ರದೇಶಗಳ ಯುವತಿಯರು ಮತ್ತು ಮಹಿಳೆಯರಿಗೆ ಅವರ ಮನೆಬಾಗಿಲಿಗೆ ತೆರಳಿ ಉಚಿತವಾಗಿ ಹೊಲಿಗೆ ಕೌಶಲ್ಯ ತರಬೇತಿಗಳನ್ನು ನೀಡುವ ಮಹತ್ವದ ಕಾರ್ಯವನ್ನು ಈ ಕೌಶಲ್ಯ ರಥ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
-
ಹುಬ್ಬಳ್ಳಿ, ನ.10: ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ‘ಸ್ಕಿಲ್ಸ್ ಆನ್ ವೀಲ್ಸ್ʼ (Skills on Wheels) ಕೌಶಲ್ಯ ರಥ - ಅತ್ಯಾಧುನಿಕ ಮೊಬೈಲ್ ತರಬೇತಿ ಕೇಂದ್ರದ ವಾಹನವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮಂಗಳವಾರ ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಯುವತಿಯರು ಮತ್ತು ಮಹಿಳೆಯರಿಗೆ ಅವರ ಮನೆಬಾಗಿಲಿಗೆ ತೆರಳಿ ಉಚಿತವಾಗಿ ಹೊಲಿಗೆ ಕೌಶಲ್ಯ ತರಬೇತಿಗಳನ್ನು ನೀಡುವ ಮಹತ್ವದ ಕಾರ್ಯವನ್ನು ಈ ಕೌಶಲ್ಯ ರಥ ಮಾಡಲಿದೆ. ಧಾರವಾಡ ಲೋಕಸಭಾ ಕ್ಷೇತ್ರದ 13 ತರಬೇತಿ ಕೇಂದ್ರಗಳ ಮೂಲಕ ಕೌಶಲ್ಯ ತರಬೇತಿಯ ಸೌಲಭ್ಯವನ್ನು ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶವಾಗಿದೆ.
ಈ ತರಬೇತಿ ಕೇಂದ್ರಗಳ ಮೂಲಕ ಈಗಾಗಲೇ 16,094 ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗಿದ್ದು, ‘ಸ್ಕಿಲ್ಸ್ ಆನ್ ವೀಲ್ಸ್ʼ ಮೂಲಕ ಪ್ರತಿವರ್ಷ ಸುಮಾರು 720 ಮಹಿಳಾ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಿ, ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು. ಕೌಶಲ್ಯ, ಉದ್ಯೋಗಾವಕಾಶ ಮತ್ತು ಸ್ವಾವಲಂಬನೆಯ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇದು ಮತ್ತಷ್ಟು ಬಲ ನೀಡಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹಿಳೆಯರ ಸಬಲೀಕರಣ ಆಶಯಕ್ಕೆ ಅನುಗುಣವಾಗಿ, ಮಹಿಳೆಯರ ಕೌಶಲ್ಯಾಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಈ ಕೌಶಲ್ಯ ರಥವು ಕೌಶಲ್ಯದಿಂದ ಸ್ವಾವಲಂಬನೆ, ಸ್ವಾವಲಂಬನೆಯಿಂದ ಸಬಲೀಕರಣದತ್ತ ಸಾಗುವ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
ಹಸಿರು ಇಂಧನ ವಲಯದಲ್ಲಿ 400 ಬಿಲಿಯನ್ ಡಾಲರ್ ಹೂಡಿಕೆ ಹರಿವಿನ ನಿರೀಕ್ಷೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ
ಈ ಸಂದರ್ಭದಲ್ಲಿ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಜಗದೀಶ ನಾಯರ್ ಸೇರಿದಂತೆ ಗಣ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.