ಕೇಂದ್ರದಿಂದ ದೀಪಾವಳಿ ಗಿಫ್ಟ್; ಕರ್ನಾಟಕಕ್ಕೆ 4,504 ಕೋಟಿ ರೂ. ತೆರಿಗೆ ಪಾಲು ಬಿಡುಗಡೆ
ಕೇಂದ್ರ ಸರ್ಕಾರ ಶನಿವಾರ ದೇಶದ ಎಲ್ಲಾ ರಾಜ್ಯಗಳಿಗೆ ಒಟ್ಟು 1,09,019 ಕೋಟಿ ರೂ. ಮೊತ್ತದ ಹೆಚ್ಚುವರಿ ತೆರಿಗೆ ಪಾಲನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂ. ಹಂಚಿಕೆಯಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬಲ ಸಿಕ್ಕಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಎರಡನೇ ಹೆಚ್ಚುವರಿ ಕಂತಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಕೇಂದ್ರ ಸರ್ಕಾರ ಶನಿವಾರ ದೇಶದ ಎಲ್ಲಾ ರಾಜ್ಯಗಳಿಗೆ ಒಟ್ಟು 1,09,019 ಕೋಟಿ ರೂ. ಮೊತ್ತದ ಹೆಚ್ಚುವರಿ ತೆರಿಗೆ ಪಾಲನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಕರ್ನಾಟಕಕ್ಕೆ (Tax Share released to Karnataka) 4,504 ಕೋಟಿ ರೂ. ಹಂಚಿಕೆಯಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬಲ ಸಿಕ್ಕಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಎರಡನೇ ಹೆಚ್ಚುವರಿ ಕಂತಾಗಿದೆ. ಹಬ್ಬದ ದಿನಗಳಲ್ಲಿ ರಾಜ್ಯಗಳು ಎದುರಿಸಬಹುದಾದ ನಿಧಿ ಕೊರತೆಯನ್ನು ನೀಗಿಸುವುದು ಹಾಗೂ ಅಭಿವೃದ್ಧಿ ವೇಗವನ್ನು ಹೆಚ್ಚಿಸುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.
ಕೇಂದ್ರ ಹಣಕಾಸು ಸಚಿವಾಲಯವು ಶನಿವಾರ ಈ ಆದೇಶ ಹೊರಡಿಸಿದ್ದು, ಪ್ರತಿ ತಿಂಗಳು ರಾಜ್ಯಗಳಿಗೆ ನಿಯಮಿತವಾಗಿ ನೀಡಲಾಗುವ ಮಾಸಿಕ ಹಂಚಿಕೆಯ ಹೊರತಾಗಿ ಈ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಚಾಲ್ತಿ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡುತ್ತಿರುವ ಎರಡನೇ ಮುಂಗಡ ಹೆಚ್ಚುವರಿ ಕಂತು ಇದಾಗಿದೆ. ಕೇಂದ್ರದ ಈ ಹೆಚ್ಚುವರಿ ಹಂಚಿಕೆಯಲ್ಲಿ ಉತ್ತರ ಪ್ರದೇಶ ಅತ್ಯಧಿಕ 19,208 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ. 10,845 ಕೋಟಿ ಗಳಿಸಿದ ಬಿಹಾರ ಎರಡನೇ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ 8,010 ಕೋಟಿ ರೂ. ಮತ್ತು ಪಶ್ಚಿಮ ಬಂಗಾಳ 8,206 ರೂ. ಕೋಟಿ ಪಾಲು ಪಡೆದಿವೆ.
ದಕ್ಷಿಣದ ರಾಜ್ಯಗಳ ಪೈಕಿ ಆಂಧ್ರಪ್ರದೇಶ 4,597 ಕೋಟಿ ರೂ. ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 4,504 ಕೋಟಿ ರೂ. ಹಾಗೂ ತಮಿಳುನಾಡು 4,466 ಕೋಟಿ ರೂ. ನಂತರದ ಸ್ಥಾನಗಳಲ್ಲಿವೆ. ಮುಂಬರುವ ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳು ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಮತ್ತು ಅವುಗಳ ಅಭಿವೃದ್ಧಿ ಮತ್ತು ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಅನುವು ಮಾಡಿಕೊಡಲು ಈ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
Income Tax: ಕೃಷಿ ಮಾತ್ರವಲ್ಲ ತೆರಿಗೆ ಇಲ್ಲದ ಇನ್ನೂ 7 ಆದಾಯಗಳಿವೆ; ಅವು ಯಾವುವು ಗೊತ್ತೆ?
ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಿಡುಗಡೆ ಮಾಡುವ ಹೆಚ್ಚುವರಿ ಅಥವಾ ಮಾಸಿಕ ತೆರಿಗೆ ಪಾಲನ್ನು ಹಣಕಾಸು ಆಯೋಗವು ನಿಗದಿಪಡಿಸಿದ ನಿರ್ದಿಷ್ಟ ಸೂತ್ರ ಮತ್ತು ಮಾನದಂಡಗಳ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಯಾವ ರಾಜ್ಯಕ್ಕೆ ಎಷ್ಟು ಪಾಲು ಸಿಗಬೇಕು ಎಂದು ನಿರ್ಧರಿಸಲು ಹಣಕಾಸು ಆಯೋಗವು ಬಳಸುವ ಪ್ರಮುಖ ಆರು ಮಾನದಂಡಗಳನ್ನು ಪಾಲಿಸುತ್ತವೆ. ಅವೆಂದರೆ, ಆದಾಯದ ಅಂತರ, ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ, ಜನಸಂಖ್ಯಾ ಕಾರ್ಯಕ್ಷಮತೆ, ಅರಣ್ಯ ಮತ್ತು ಪರಿಸರ, ತೆರಿಗೆ ಶ್ರಮದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.