DK Shivakumar: ಭದ್ರಾ ಮೇಲ್ದಂಡೆ ಯೋಜನೆ; 6 ತಿಂಗಳಿನಲ್ಲಿ ಕಾಮಗಾರಿ ಮುಗಿಸಿ ನೀರು ಹರಿಸಲು ಚಿಂತನೆ: ಡಿಕೆಶಿ
DK Shivakumar: ಪರಿಹಾರ ತಾರತಮ್ಯ ಪರಿಹರಿಸುವುದಕ್ಕೆ ರೈತರು ಸಹ ಒಪ್ಪಿಕೊಂಡಿದ್ದಾರೆ. ಅವರಿಗೂ ಅನ್ಯಾಯವಾಗದ ರೀತಿಯಲ್ಲಿ ಗಮನ ಹರಿಸುತ್ತೇವೆ. ಆದಷ್ಟು ಬೇಗ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ನಾವು ಗಮನ ಹರಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್.

ಬೆಂಗಳೂರು: ಭದ್ರಾ ಮೇಲ್ದಂಡೆ ಕಾಮಗಾರಿ ವೇಳೆ ರೈತರಿಗೆ ನೀಡಿರುವ ಭೂ ಸ್ವಾಧೀನ ಪರಿಹಾರ ತಾರತಮ್ಯವನ್ನು ಕಾನೂನು ಪ್ರಕಾರ ಸರಿಪಡಿಸಿ ಮುಂದಿನ ಆರು ತಿಂಗಳಿನಲ್ಲಿ ಕಾಮಗಾರಿ ಮುಗಿಸಿ ನೀರು ಕೊಡಬಹುದು ಎಂದು ಸಚಿವರು, ಶಾಸಕರು ತಿಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ವಿಧಾನಸೌಧದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆಗಳ ಭೂಸ್ವಾಧೀನ ಸಮಸ್ಯೆ ನಿವಾರಿಸುವ ಕುರಿತು ಸಂತ್ರಸ್ತ ರೈತರೊಂದಿಗಿನ ಸಭೆಯ ಬಳಿಕ ಮಾಧ್ಯಮಗಳಿಗೆ ಮಂಗಳವಾರ ಅವರು ಪ್ರತಿಕ್ರಿಯೆ ನೀಡಿದರು.
ಪರಿಹಾರ ತಾರತಮ್ಯ ಪರಿಹರಿಸುವುದಕ್ಕೆ ರೈತರು ಸಹ ಒಪ್ಪಿಕೊಂಡಿದ್ದಾರೆ. ಅವರಿಗೂ ಅನ್ಯಾಯವಾಗದ ರೀತಿಯಲ್ಲಿ ನಾವು ಗಮನ ಹರಿಸುತ್ತೇವೆ. ಆದಷ್ಟು ಬೇಗ ಈ ಯೋಜನೆ ಪೂರ್ಣಗೊಳಿಸಲು ನಾವು ಗಮನ ಹರಿಸುತ್ತೇವೆ ಎಂದರು.
ಭೂ ಸ್ವಾಧೀನ ಪರಿಹಾರ ವಿಚಾರದಲ್ಲಿ ತಾರತಮ್ಯವಾಗಿರುವ ಕಾರಣಕ್ಕೆ ಭದ್ರಾ ಮೇಲ್ದಂಡೆ ಕಾಮಗಾರಿಗೆ ರೈತರು ತಡೆ ಒಡ್ಡಿದ್ದರು. ಏಕೆಂದರೆ ಹಳೇ ದರದ ಪ್ರಕಾರ ಕೆಲವರಿಗೆ 4 ಲಕ್ಷ ರೂ. ಪರಿಹಾರ ಸಿಕ್ಕಿದೆ. ಅದೇ ಸರ್ವೇ ನಂಬರ್‌ನಲ್ಲಿ ಕೆಲವರಿಗೆ 20 ಲಕ್ಷ ರೂ. ಪರಿಹಾರ ಸಿಕ್ಕಿದ್ದು ತಾರತಮ್ಯವಾಗಿದೆ ಎಂದು ರೈತರು ಕೆಲಸ ಮುಂದುವರೆಸಲು ಬಿಟ್ಟಿರಲಿಲ್ಲ ಎಂದು ತಿಳಿಸಿದರು.
ಈ ಮೊದಲು ನಾನು, ಒಂದಷ್ಟು ಸಚಿವರು, ಶಾಸಕರು, ಅಧಿಕಾರಿಗಳು ರೈತರ ಬಳಿ ಕೆಲಸ ಮುಂದುವರೆಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದೆವು. ಅದೇ ರೀತಿ ಪರಿಹಾರದ ತಾರತಮ್ಯ ಹೋಗಲಾಡಿಸಲು ಕಾನೂನಿನ ಅಡಿ ಏನು ಮಾಡಬಹುದು ಎಂದು ಚರ್ಚೆ ನಡೆಸಿದೆವು. ಮೂರು- ನಾಲ್ಕು ದಿನಗಳಲ್ಲಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕರ್ತರಿಗೆ ಗೌರವ
ಗ್ಯಾರಂಟಿ ಅನುಷ್ಠಾನ ಸಮಿತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, ಗ್ಯಾರಂಟಿ ಸಮಿತಿ ನೇಮಕಾತಿ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ಗೌರವ ನೀಡಿದ್ದೇವೆ. ಇದರಿಂದ ಶಾಸಕರ ಅಧಿಕಾರವನ್ನು ನಾವು ಕಿತ್ತು ಕೊಳ್ಳುವುದಿಲ್ಲ. ಅವರಿಗೆ ಇರುವ ಅಧಿಕಾರ ಇದ್ದೇ ಇರುತ್ತದೆ. ಅನುಷ್ಠಾನ ಸಮಿತಿ ಮೂಲಕ ಫಲಾನುಭವುಗಳನ್ನು ಗುರುತಿಸುವ ಹಾಗೂ ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕಾರ್ಯಕರ್ತರ ನೇಮಕಾತಿಗಳನ್ನು ಬದಲಾವಣೆ ಮಾಡುವುದಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ | DK Shivakumar: ತುಂಗಭದ್ರಾ ಜಲಾಶಯದ 27 ಟಿಎಂಸಿ ನೀರು ಸದ್ಬಳಕೆ: ಆಂಧ್ರ, ತೆಲಂಗಾಣಗಳ ಜತೆ ಚರ್ಚೆ: ಡಿಕೆಶಿ
ಹೋರಾಟ ಮಾಡುವವರನ್ನು ಬೇಡ ಎನ್ನಲು ಆಗುವುದಿಲ್ಲ
ಅನುಷ್ಠಾನ ಸಮಿತಿಗಳ ವಿರುದ್ಧ ಬಿಜೆಪಿ ಹೋರಾಟದ ಬಗ್ಗೆ ಕೇಳಿದಾಗ, ʼಹೋರಾಟ ಮಾಡುವವರಿಗೆ ಬೇಡ ಎಂದು ಹೇಳಲು ಆಗುವುದಿಲ್ಲ. ಅವರಿಗೂ ಅರಿವಿದೆ, ಏಕೆಂದರೆ ಇದು ರಾಜಕೀಯ ಕಾರ್ಯಕ್ರಮವಲ್ಲ. ಜನರ ಬದುಕಿಗೆ ಇರುವ ಕಾರ್ಯಕ್ರಮ. ಅನುಷ್ಠಾನ ಸಮಿತಿಯವರಿಗೆ ಗೌರವಧನ ಎಂದು ಹೇಳಿ 25- 30 ಸಾವಿರ, ಸಭೆಗೆ ಬಂದರೆ 1 ಸಾವಿರ ಕೊಡಲಾಗುತ್ತಿದೆ. ಇದು ಹೊರತಾಗಿ ಬೇರೆ ಏನಿಲ್ಲ. ಶಾಸಕರಿಗೆ ಯಾವ ಹಕ್ಕು ಇದೆಯೋ ಅದು ಇರುತ್ತದೆ. ಗ್ಯಾರಂಟಿಗಳ ಅನುಷ್ಠಾನ ಚೆನ್ನಾಗಿ ಆಗಲಿ ಎಂದು ಇದನ್ನು ನಮ್ಮ ಸರ್ಕಾರ ಹೊಸದಾಗಿ ಸೃಷ್ಟಿಸಿದ್ದು. ಇದಕ್ಕೆ ಸಹಕಾರ ಕೊಡಬೇಕುʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.