ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಯಾಣಿಕರ ಗಮನಕ್ಕೆ: ಕರ್ನಾಟಕದ ರೈಲು ನಿಲ್ದಾಣಗಳಲ್ಲಿ ಫಂಗಸ್ ಬಂದ, ಅವಧಿ ಮೀರಿದ ಆಹಾರ ಮಾರಾಟ

ಫಂಗಸ್ ಬೆಳೆದಿರುವ, ಬಣ್ಣ ಬಳಸಿರುವ, ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ರೈಲು ನಿಲ್ದಾಣಗಳಲ್ಲಿ ಮಾರಾಟ ಮಾಡುತ್ತಿರುವುದನ್ನು ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಪತ್ತೆ ಮಾಡಿದೆ. ರಾಜ್ಯದ ಒಟ್ಟು 36 ರೈಲು ನಿಲ್ದಾಣಗಳಲ್ಲಿ ಗುರುವಾರ ನಡೆಸಿರುವ ತಪಾಸಣೆ ವೇಳೆ ಈ ಅಂಶಗಳು ಕಂಡು ಬಂದಿವೆ.

ಪ್ರಯಾಣಿಕರೇ ಎಚ್ಚರ; ರೈಲು ನಿಲ್ದಾಣದ ಆಹಾರ ಸುರಕ್ಷಿತವಲ್ಲ

ಸಂಗ್ರಹ ಚಿತ್ರ -

ಬೆಂಗಳೂರು: ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (Karnataka Food Safety and Drug Administration department) ಗುರುವಾರ ರಾಜ್ಯದ ಒಟ್ಟು 36 ರೈಲು ನಿಲ್ದಾಣಗಳಲ್ಲಿ ಮಾರಾಟವಾಗುವ ಆಹಾರಗಳ ತಪಾಸಣೆ ನಡೆಸಿದೆ. ಈ ಸಂದರ್ಭದಲ್ಲಿ ರೈಲು ನಿಲ್ದಾಣಗಳಲ್ಲಿ (railway stations) ಫಂಗಸ್ (Fungus) ಬೆಳೆದಿರುವ, ಬಣ್ಣ ಬಳಸಿರುವ, ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದೆ. ಅಲ್ಲದೇ ಆಹಾರ ಸಂಗ್ರಹಕ್ಕೆ ಸೂಕ್ತವಲ್ಲದ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.

ರಾಜ್ಯದ ಒಟ್ಟು 36 ರೈಲು ನಿಲ್ದಾಣಗಳಲ್ಲಿನ ಆಹಾರ ಮಳಿಗೆಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಸಿಹಿತಿಂಡಿಗಳಲ್ಲಿ ಅನುಮತಿಯಿಲ್ಲದ ಬಣ್ಣಗಳ ಬಳಕೆ, ಅವಧಿ ಮೀರಿದ ಡೈರಿ ಉತ್ಪನ್ನಗಳು ಮತ್ತು ಆಹಾರ ಪದಾರ್ಥ, ತರಕಾರಿಗಳಲ್ಲಿ ಶಿಲೀಂಧ್ರಗಳು ಬೆಳವಣಿಗೆಯಾಗುತ್ತಿರುವುದು ಕಂಡು ಬಂದಿದೆ.

ಲಿಫ್ಟ್‌ ದಿಢೀರ್ ಚಲಿಸಿ ಮಹಿಳೆ ಸಾವು: ಮಗಳು, ಮೊಮ್ಮಗನ ಕಣ್ಣೆದುರೇ ದುರಂತ; ವಿಡಿಯೊ ವೈರಲ್‌

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಂಡಗಳು ರೈಲ್ವೆ ಪ್ಯಾಂಟ್ರಿ, ರೈಲ್ವೆ ಹೋಟೆಲ್ ಮತ್ತು ರೈಲಿನಲ್ಲಿ ನೀಡಲಾಗುವ ಆಹಾರದ ತಪಾಸಣೆಯನ್ನು ಕೂಡ ನಡೆಸಿತ್ತು. ಮಂಗಳೂರು, ಕೇರಳ, ಹುಬ್ಬಳ್ಳಿ ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ರೈಲುಗಳು ಸ್ವಚ್ಛವಾಗಿದ್ದು, ಆಹಾರ ಉತ್ಪನ್ನಗಳಲ್ಲಿ ಅನುಮತಿಯಿಲ್ಲದ ಬಣ್ಣಗಳ ಬಳಕೆ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದೆ.

ಜಿಲೇಬಿಯಲ್ಲಿ ಹಳದಿ, ಖೋವಾ ಪೇಡಾದಲ್ಲಿ ಗುಲಾಬಿ ಬಣ್ಣವನ್ನು ಬಳಸಲಾಗಿದೆ. ಹಾವೇರಿ ಜಿಲ್ಲೆಯ ರೈಲು ನಿಲ್ದಾಣವೊಂದರಲ್ಲಿ ಅವಧಿ ಮೀರಿದ ಮೊಸರು, ಪ್ರಮಾಣೀಕೃತ ಹಾಲಿನ ಪ್ಯಾಕೆಟ್‌ಗಳು ಕಂಡುಬಂದಿವೆ ಎಂದು ಹೇಳಿದೆ.

ಕೆ.ಆರ್. ಪುರಂ ರೈಲು ನಿಲ್ದಾಣದ ಹೋಟೆಲ್‌ನಲ್ಲಿ ಸ್ವಚ್ಛತೆ ಪಾಲನೆ ಮಾಡಲಾಗುತ್ತಿಲ್ಲ. ಮೈಸೂರು ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿರುವುದು, ಅಡುಗೆ ಮನೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಅಲ್ಲದೇ ಈರುಳ್ಳಿ ಮತ್ತು ತರಕಾರಿಗಳಲ್ಲಿ ಫಂಗಸ್ ಬೆಳೆಯುತ್ತಿರುವುದು, ಚಟ್ನಿಯನ್ನು ಆಹಾರ ಸಂಗ್ರಹಣೆಗೆ ಸೂಕ್ತವಲ್ಲದ ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಸಂಗ್ರಹಿಸಿಡುವುದು ಕೂಡ ಪತ್ತೆಯಾಗಿದೆ ಎಂದು ತಿಳಿಸಿದೆ.

ಎಲ್ಲಿ ದಾಳಿ?

ರಾಜ್ಯಾದ್ಯಂತ ಏಕ ಕಾಲಕ್ಕೆ ಈ ದಾಳಿ ನಡೆದಿದೆ. ಬೆಂಗಳೂರು ನಗರ ರೈಲು ನಿಲ್ದಾಣ (ಕೆಎಸ್ಆರ್), ಯಶವಂತಪುರ, ಕೃಷ್ಣ ರಾಜ ಪುರಂ, ಯಲಹಂಕ, ಕೋಲಾರ, ಮೈಸೂರು, ಹಾವೇರಿ, ಉಡುಪಿ, ಕೊಪ್ಪಳ, ಗದಗ, ದಾವಣಗೆರೆ, ಬಾಗಲಕೋಟೆ, ಕಾರವಾರ, ಯಾದಗಿರಿ, ಬೇರೂರು, ಕಡೂರು ಜಂಕ್ಷನ್, ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ ಮತ್ತು ಮಂಗಳೂರಿನ ಒಟ್ಟು 112 ಆಹಾರ ಮಳಿಗೆಗಳಲ್ಲಿ ತಪಾಸಣೆ ನಡೆಸಲಾಗಿದೆ.

ಏನು ಕ್ರಮ?

ಆಹಾರ ಸುರಕ್ಷತೆಯನ್ನು ಉಲ್ಲಂಘಿಸಿದವರ ವಿರುದ್ಧ ರೈಲ್ವೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆಹಾರ ವ್ಯಾಪಾರ ನಿರ್ವಾಹಕರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ.

ಎಸ್‌ಬಿಐ ಗ್ರಾಹಕರೇ ಗಮನಿಸಿ: ಅಕ್ಟೋಬರ್ 1ರಿಂದ ನಗದು ಹಿಂಪಡೆಯುವ ಶುಲ್ಕದಲ್ಲಿ ಬದಲಾವಣೆ

ನೈಋತ್ಯ ರೈಲ್ವೆಯು ಪ್ರಯಾಣಿಕರಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಉತ್ತಮ ಗುಣಮಟ್ಟದ ಅಡುಗೆ ಸೇವೆಗಳನ್ನು ಒದಗಿಸಲು ಬದ್ಧವಾಗಿದೆ. ಇದಕ್ಕಾಗಿ ರೈಲ್ವೆ ಮಂಡಳಿಯ ನಿರ್ದೇಶನಗಳಿಗೆ ಅನುಗುಣವಾಗಿ ಈಗಾಗಲೇ ಎಲ್ಲಾ ವಿಭಾಗಗಳಲ್ಲಿ 14 ದಿನಗಳ ವಿಶೇಷ ಆಹಾರ ಸುರಕ್ಷತಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಸ್ವಚ್ಛತೆ, ಎಫ್ ಎಸ್ ಎಸ್ ಎಐ ಪರವಾನಗಿ, ಆಹಾರ ಉತ್ಪನ್ನಗಳ ಮುಕ್ತಾಯ ದಿನಾಂಕಗಳು ಸೇರಿದಂತೆ ಆಹಾರ ನಿರ್ವಹಣಾ ಪದ್ಧತಿಗಳ ಸಮಗ್ರ ತಪಾಸಣೆಯ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.