Anand Mahindra: ಟ್ರಾಫಿಕ್‌ನಿಂದ ಜಾಮ್‌ನಿಂದ ಬೇಸತ್ತು ಬೆಂಗಳೂರಿಗೆ ಗುಡ್‌ಬೈ ಹೇಳಿದ ಉದ್ಯಮಿ ಆನಂದ್ ಮಹೀಂದ್ರ
ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡ ಉದ್ಯಮಿ, ಮಹೀಂದ್ರ & ಮಹೀಂದ್ರ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರ ಇದೀಗ ಟ್ರಾಫಿಕ್ ಜಾಮ್ ಬಗ್ಗೆ ತಮಾಷೆಯಾಗಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
![ಬೆಂಗಳೂರಿಗೆ ಗುಡ್‌ಬೈ ಹೇಳಿದ್ರಾ ಉದ್ಯಮಿ ಆನಂದ್ ಮಹೀಂದ್ರ?](https://cdn-vishwavani-prod.hindverse.com/media/original_images/Anand_Mahindra.jpg)
ಮಹೀಂದ್ರಾ ಬಿಇ 6 ಎಲೆಕ್ಟ್ರಿಕ್ ಕಾರು ಮತ್ತು ಆನಂದ್ ಮಹೀಂದ್ರ.
![Profile](https://vishwavani.news/static/img/user.png)
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ (Invest Karnataka) ಅದ್ಧೂರಿಯಾಗಿ ಆಯೋಜಿಸಲಾಗಿದ್ದು, ಫೆ. 14ರ ತನಕ ನಡೆಯಲಿದೆ. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಉದ್ಯಮಿ, ಮಹೀಂದ್ರ & ಮಹೀಂದ್ರ ಸಂಸ್ಥೆಯ ಮಾಲೀಕ (Mahindra Group) ಆನಂದ್ ಮಹೀಂದ್ರ (Anand Mahindra) ಅವರು ಬೆಂಗಳೂರಿನ ಟ್ರಾಫಿಕ್ (Bengaluru Traffic Jam) ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಬೆಂಗಳೂರು ಟ್ರಾಫಿಕ್‌ನಿಂದಾಗುವ ಅನುಕೂಲಗಳಿವೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಜತೆಗೆ ಗುಡ್ ಬೈ ಬೆಂಗಳೂರು ಎಂದು ಹೇಳಿದ್ದಾರೆ. ಸದ್ಯ ಅವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಯನ್ನು ಹುಟ್ಟು ಹಾಕಿದೆ. ಟ್ರಾಫಿಕ್ ಕಾರಣದಿಂದ ಮಹೀಂದ್ರಾ ಬಿಇ 6 ಎಲೆಕ್ಟ್ರಿಕ್ ಕಾರು (Mahindra BE 6 electric SUV) ಜಾಸ್ತಿ ಮುಂದಕ್ಕೆ ಚಲಿಸದೆ ಶೋ ರೂಮ್‌ನಲ್ಲಿ ಇರುವಂತೆ ಇದೆ ಎಂದಿದ್ದಾರೆ.
ಆನಂದ್ ಮಹೀಂದ್ರ ಹೇಳಿದ್ದೇನು?
ಸಮಾವೇಶದಲ್ಲಿ ಪಾಲ್ಗೊಂಡು ಬೆಂಗಳೂರಿನಿಂದ ಹೊರಟ ಅವರು, ʼʼಗುಡ್ ಬೈ ಬೆಂಗಳೂರು...ನನ್ನ ಮಹೀಂದ್ರ ಬಿಇ-6 ಕಾರಿನ ವೇಗಕ್ಕೆ ಥ್ಯಾಂಕ್ಸ್. ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವುದರ ಅನುಕೂಲವೆಂದರೆ ವಾಹನಗಳು ಶೋರೂಂನಲ್ಲಿ ಇರುವಂತೆ ಇರುತ್ತವೆ. ಅಲ್ಲದೆ ಟ್ರಾಫಿಕ್‌ನಲ್ಲಿ ಸಿಲುಕಿರುವ ಪ್ರತಿಯೊಬ್ಬರೂ ಪಕ್ಕದ ಕಾರು, ಮಾಡೆಲ್ ನೋಡಲು ಮತ್ತು ಪರೀಕ್ಷಿಸಲು ಸಾಕಷ್ಟು ಸಮಯವಿರುತ್ತದೆʼʼ ಎಂದು ಅವರು ಬರೆದುಕೊಂಡಿದ್ದಾರೆ.
Good bye Bengaluru.
— anand mahindra (@anandmahindra) February 12, 2025
And thank you to my good steed in the city—the BE 6
One advantage of Bengaluru traffic:
Being stationary so often makes it like a live showroom…
Everyone stuck in the traffic alongside you has plenty of time to see and examine the car! pic.twitter.com/rSz9kOunuN
ತಹೇವಾರಿ ಪ್ರತಿಕ್ರಿಯೆ
ಆನಂದ್ ಮಹೀಂದ್ರ ಮಾಡಿರುವ ಈ ಪೋಸ್ಟ್‌ಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ʼʼಬೆಂಗಳೂರು ಟ್ರಾಫಿಕ್‌ನಿಂದಾಗಿ ಈ ಕಾರಿಗೆ ಉಚಿತ ಪ್ರಚಾರ ಸಿಗುತ್ತಿದೆʼʼ ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬರು ʼʼಪ್ರೀತಿಯ ಆನಂದ್, ಬೆಂಗಳೂರಿನ ರಸ್ತೆ ಇರುವಾಗ ಲಾಂಚ್ ಕಾರ್ಯಕ್ರಮ ಯಾಕೆ ನಡೆಸಬೇಕು? ಬಿಇ 6 ಪ್ರತಿ ಸಿಗ್ನಲ್‌ನಲ್ಲಿಯೂ ಗಮನ ಸೆಳೆಯುತ್ತದೆ. ಬೆಂಗಳೂರು ಟ್ರಾಫಿಕ್‌ಗೆ ಸಿಲುಕಿ ನಿಮ್ಮ ಕಾರು ತುಂಬ ಹೊತ್ತು ನಿಂತಿದ್ದರೆ ಗೂಗಲ್ ಮ್ಯಾಪ್‌ಗೂ ಗೊಂದಲವಾಗುತ್ತದೆʼʼ ಎಂದಿದ್ದಾರೆ.
ʼʼಕಾರಿನ ಸಾಮರ್ಥ್ಯ, ಅದರ ಬ್ಯಾಟರಿಯನ್ನು ಪರೀಕ್ಷಿಸಲು ಬೆಂಗಳೂರು ಅತ್ಯುತ್ತಮ ಸ್ಥಳʼʼ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ʼʼಒಂದೇ ಒಂದು ಇಂಚು ಚಲಿಸದೇ ಇರುವ ಕಾರಣ ಬೆಂಗಳೂರು ಟ್ರಾಫಿಕ್ ಟೆಸ್ಟ್ ಡ್ರೈವ್‌ಗೆ ಉತ್ತಮ ತಾಣ. ನಗರದ ಅತೀ ಉದ್ದದ ಶೋರೂಮ್ ಸಾರ್ವಜನಿಕರಿಗೆ ಕಾರಿನ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತದೆʼʼ ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ. ಮಗದೊಬ್ಬರು ʼʼಉಚಿತವಾಗಿ ಕಾರಿನ 360 ಡಿಗ್ರಿ ನೋಟ ಸಿಗುತ್ತದೆʼʼ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಬೆಂಗಳೂರು ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಆನಂದ್ ಮಹೀಂದ್ರ, ಕರ್ನಾಟಕದಲ್ಲಿ ಮುಂದಿನ 5 ವರ್ಷಗಳಲ್ಲಿ ಬರೋಬ್ಬರಿ 40 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Invest Karnataka 2025: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕುಶಲ ಉದ್ಯೋಗಿಗಳ ಕೊರತೆಯಿದೆ: ಅವಿನಾಶ್ ಅವುಲಾ
ಏನೆಲ್ಲ ಇದೆ?
ಹೂಡಿಕೆ ಸಮಾವೇಶದಲ್ಲಿ ಮರುಬಳಕೆ ಇಂಧನ, ಸೆಮಿಕಂಡಕ್ಟರ್, ವಿದ್ಯುಚ್ಚಾಲಿತ ವಾಹನಗಳು ಮತ್ತು ಸುಸ್ಥಿರ ಉತ್ಪಾದನೆಗೆ ಹೆಸರಾದ ಕಂಪನಿಗಳು ಪಾಲ್ಗೊಂಡಿವೆ. ಜತೆಗೆ ರಾಜ್ಯದ ಉಪಕರಣಗಳನ್ನು ಬಿಂಬಿಸುವ ಪ್ರತ್ಯೇಕ `ಕರ್ನಾಟಕ ಪೆವಿಲಿಯನ್’ ಕೂಡ ಇದೆ. ಪಾಲ್ಗೊಂಡಿರುವ ಕಂಪನಿಗಳಲ್ಲಿ ಜಿ.ಇ. ಹೆಲ್ತ್ ಕೇರ್, ಹೀರೋ ಫ್ಯೂಚರ್ ಎನರ್ಜೀಸ್, ರಿವರ್ ಮೊಬಿಲಿಟಿ, ಸರಳಾ ಏವಿಯೇಶನ್, ಗೆಲಾಕ್ಸಿ ಸ್ಪೇಸ್, ಲ್ಯಾಮ್ ರೀಸರ್ಚ್ ಪ್ರಮುಖವಾಗಿವೆ.